ADVERTISEMENT

ಟೊಮೆಟೊ, ಕ್ಯಾಪ್ಸಿಕಂ ತುಟ್ಟಿ: ಚಿಕನ್‌ ಬೆಲೆ ಇಳಿಕೆ

ಶತಕದ ಗಡಿ ಮುಟ್ಟಿದ ಬಾಳೆಹಣ್ಣು; ಗ್ರಾಹಕರ ತರಕಾರಿ ಹಣ್ಣುಗಳ ದರ ಏರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 6:21 IST
Last Updated 21 ಜುಲೈ 2023, 6:21 IST
ತರಕಾರಿ
ತರಕಾರಿ   

ಬಾಲಚಂದ್ರ ಎಚ್‌.

ಉಡುಪಿ: ಗಗನಕ್ಕೇರಿರುವ ಟೊಮೆಟೊ ದರ ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಗುರುವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ಬರೋಬ್ಬರಿ ₹120ಕ್ಕೆ ಮಾರಾಟ ಮಾರಾಟವಾಯಿತು.

ಗ್ರಾಹಕರಿಗೆ ದರ ಏರಿಕೆ ಬರೆ: ತಿಂಗಳ ಹಿಂದೆ ಟೊಮೆಟೊ ದರ ಕೆ.ಜಿಗೆ ₹40 ಇತ್ತು. ಬಳಿಕ ದಿನದಿಂದ ದಿನಕ್ಕೆ ದರ ಹೆಚ್ಚಾಗುತ್ತಲೇ ಹೋಗಿ ಒಂದೇ ವಾರದಲ್ಲಿ ದುಪ್ಪಟ್ಟಾಯಿತು. ಬಳಿಕವೂ ಬೆಲೆ ಇಳಿಕೆಯಾಗದೆ ಶತಕದ ಗಡಿ ದಾಟಿ ಮುನ್ನುಗ್ಗುತ್ತಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ದರ ಇಳಿಕೆಯಾಗಬಹುದು ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದ್ದು, ಪ್ರತಿಯಾಗಿ ಬೆಲೆ ಏರುಗತಿಯಲ್ಲಿ ಸಾಗಿದೆ. 

ADVERTISEMENT

ಸಾಮಾನ್ಯವಾಗಿ ಪ್ರತಿಬಾರಿ ಟೊಮೆಟೊ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರುತ್ತಿತ್ತು. ದರ ಕಡಿಮೆ ಇರುವ ರಾಜ್ಯಗಳು ದರ ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆ ಮಾಡುತ್ತಿದ್ದ ಪರಿಣಾಮ ಸಹಜವಾಗಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಈ ಬಾರಿ ಟೊಮೆಟೊಗೆ ದೇಶದಾದ್ಯಂತ ಬೇಡಿಕೆ ಇದ್ದು ದರವೂ ಹೆಚ್ಚಾಗಿದೆ. ಬೇಡಿಕೆಯಷ್ಟು ಟೊಮೆಟೊ ಪೂರೈಕೆಯಾಗುತ್ತಿಲ್ಲವಾದ್ದರಿಂದ ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಖಲೀಲ್‌.

ಸದ್ಯದ ಪರಿಸ್ಥಿತಿ ನೋಡಿದರೆ ಟೊಮೆಟೊ ದರ ಇಳಿಯುವ ಬದಲು ಕೆಲವೇ ದಿನಗಳಲ್ಲಿ ₹150ಕ್ಕೆ ಮುಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ದರ ಏರಿಕೆಯಿಂದಾಗಿ ಗ್ರಾಹಕರು ಟೊಮೆಟೊ ಖರೀದಿ ಪ್ರಮಾಣವನ್ನು ಕಡಿಮೆ ಮಾಡಿದ್ದು ಎರಡ್ಮೂರು ಕೆ.ಜಿ ಬದಲಾಗಿ ಒಂದು ಕೆ.ಜಿಗೆ ಇಳಿಸಿದ್ದಾರೆ ಎನ್ನುತ್ತಾರೆ ಅವರು.

ಕ್ಯಾಪ್ಸಿಕಂ ದರ ಕೂಡ ಏಕಾಏಕಿ ಹೆಚ್ಚಾಗಿದ್ದು ಕಳೆದವಾರ ₹60 ರಿಂದ ₹70ಕ್ಕೆ ದೊರೆಯುತ್ತಿದ್ದ ದಪ್ಪ ಮೆಣಸಿನಕಾಯಿ ಈ ವಾರ ₹120ಕ್ಕೆ ಹೆಚ್ಚಾಗಿದೆ. 

ದಿನೇ ದಿನೇ ಟೊಮೆಟೊ ದರ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟಿದೆ. ಕಳೆದವಾರ ಕೆ.ಜಿಗೆ ₹80 ಕೊಟ್ಟು 1 ಕೆ.ಜಿ ಟೊಮೆಟೊ ಖರೀದಿ ಮಾಡಿದ್ದೆ. ದರ ಕಡಿಮೆಯಾಗಬಹುದು ಎಂದು ಹೆಚ್ಚು ಖರೀದಿ ಮಾಡಿರಲಿಲ್ಲ. ಈ ವಾರ ₹120ಕ್ಕೆ ಜಿಗಿದಿದೆ. ಮಳೆ ಕೊರತೆ ಹಾಗೂ ಇಳುವರಿ ಕುಸಿತ ದರ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿ ಗಣೇಶ್‌.

ಮಸಾಲೆ ಪದಾರ್ಥಗಳಾದ ಶುಂಠಿ, ಬೆಳ್ಳುಳ್ಳಿ ದರವೂ ಇಳಿಕೆಯಾಗಿಲ್ಲ. ಕೆ.ಜಿ ಶುಂಠಿಗೆ ₹230 ರಿಂದ ₹250 ಇದ್ದರೆ, ಬೆಳ್ಳುಳ್ಳಿ ₹220 ರಿಂದ ₹240ಕ್ಕೆ ತಲುಪಿದೆ. ಬೀನ್ಸ್‌ ಹಾಗೂ ಕ್ಯಾರೆಟ್‌ ದರ ಕೂಡ ಎರಡು ವಾರಗಳಿಂದ ಸ್ಥಿರವಾಗಿದ್ದು ಇಳಿಕೆಯಾಗಿಲ್ಲ. ಕೆ.ಜಿಗೆ ಬೀನ್ಸ್‌ಗೆ ₹100 ಇದ್ದರೆ, ಕ್ಯಾರೆಟ್‌ ₹80, ಸಾಂಬಾರ್ ಸೌತೆ ₹20, ಬದನೆಕಾಯಿ ₹50, ಕುಂಬಳಕಾಯಿ ₹30, ಮೂಲಂಗಿ ₹40 ದರ ಇದೆ.

ಬಾಳೆಹಣ್ಣು, ಸೇಬು ಬಲು ದುಬಾರಿ: ತಿಂಗಳ ಹಿಂದೆ ₹60 ರಿಂದ ₹70ಕ್ಕೆ ಸಿಗುತ್ತಿದ್ದ ಏಲಕ್ಕಿ ಬಾಳೆಹಣ್ಣು ಶತಕದ ಗಡಿಗೆ ಬಂದು ನಿಂತಿದ್ದು ಕೆ.ಜಿಗೆ ₹90 ರಿಂದ ₹95 ದರ ಇದೆ. ಸೇಬು ಬಲು ದುಬಾರಿಯಾಗಿದ್ದು ಕೆ.ಜಿಗೆ ₹260 ರಿಂದ ₹320ರವರೆಗೂ ಮಾರಾಟವಾಯಿತು. ದಾಳಿಂಬೆ ₹200, ಕಿತ್ತಳೆ ₹130, ಸಪೋಟ ₹120, ಪಪ್ಪಾಯ ₹40, ಕಲ್ಲಂಗಡಿ ₹35, ಅನಾನಸ್‌ ₹35 ದರ ಇದೆ.

ಕೊತ್ತಂಬರಿ, ಸಬ್ಬಸಿಗೆ, ಅರಿವೆ, ದಂಟು, ಪಾಲಕ್‌, ಮೆಂತ್ಯ ಸೊಪ್ಪು ಸಾಧಾರಣ ಕಟ್ಟಿಗೆ ₹7 ರಿಂದ ₹10 ದರ ಇದೆ.

ತರಕಾರಿಗಳ (ಪ್ರತಿ ಕೆ,ಜಿಗೆ ₹ಗಳಲ್ಲಿ)  ಟೊಮೆಟೊ;

120 ಈರುಳ್ಳಿ;30 ಬೆಂಡೆಕಾಯಿ;50 ತೊಂಡೆಕಾಯಿ;40 ಆಲೂಗಡ್ಡೆ;40 ಎಲೆಕೋಸು;25 ಹೂಕೋಸು;35 ಬೀಟ್‌ರೂಟ್;40 ಹಸಿ ಮೆಣಸಿನಕಾಯಿ;100 ಹಿರೇಕಾಯಿ;50

ಚಿಕನ್ ದರ ಇಳಿಕೆ

15 ದಿನಗಳ ಹಿಂದೆ ಕೆಜಿಗೆ 300 ಮುಟ್ಟಿದ್ದ ಚಿಕನ್ ದರ ಇಳಿಕೆಯಾಗಿದೆ. ವಿತ್‌ ಸ್ಕಿನ್ ಬ್ರಾಯ್ಲರ್ ಕೋಳಿ ಮಾಂಸ ಕೆ.ಜಿಗೆ 200 ಚರ್ಮ ರಹಿತ ಬ್ರಾಯ್ಲರ್ ಕೆ.ಜಿಗೆ 220 ಇದೆ. ಕೇವಲ 15 ದಿನಗಳಲ್ಲಿ ಕೋಳಿ ಮಾಂಸ ಕೆ.ಜಿಗೆ ₹80 ಕಡಿಮೆಯಾಗಿದೆ. ಮೊಟ್ಟೆ ಒಂದಕ್ಕೆ ₹ 7 ಇದೆ. ಕುರಿ ಆಡಿನ ಮಾಂಸ ಕೆಜಿಗೆ 750 ರಿಂದ 800 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.