ADVERTISEMENT

ಶಿರ್ವ: ಚುರುಕುಗೊಳ್ಳದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ 

ಪ್ರಕಾಶ ಸುವರ್ಣ ಕಟಪಾಡಿ
Published 4 ಜುಲೈ 2024, 7:10 IST
Last Updated 4 ಜುಲೈ 2024, 7:10 IST
ಉದ್ಯಾವರ ಪಡುಕರೆಯಲ್ಲಿ ಮೀನುಗಾರರು ನಾಡದೋಣಿಗೆ ಬಲೆಯನ್ನು ತುಂಬಿಸುತ್ತಿರುವುದು.
ಉದ್ಯಾವರ ಪಡುಕರೆಯಲ್ಲಿ ಮೀನುಗಾರರು ನಾಡದೋಣಿಗೆ ಬಲೆಯನ್ನು ತುಂಬಿಸುತ್ತಿರುವುದು.   

ಶಿರ್ವ: ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಜೂನ್‌ 1ರಿಂದ ಸ್ಥಗಿತಗೊಂಡು ಎರಡು ತಿಂಗಳ ಕಾಲ ಸಮುದ್ರದಲ್ಲಿ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದ್ದರೂ ಕೂಡ ಒಂದು ತಿಂಗಳು ಕಳೆದರೂ ನಾಡದೋಣಿ ಮೀನುಗಾರಿಕೆ ಚುರುಕುಗೊಂಡಿಲ್ಲ.

ದೋಣಿ ಬಲೆಯೊಂದಿಗೆ ಮೀನುಗಾರರು ಸನ್ನದ್ಧರಾಗಿ ಒಂದು ತಿಂಗಳಾಗಿದ್ದು, ಸಮುದ್ರದಲ್ಲಿ ಮಳೆಗಾಲದ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ಮಾಣವಾಗದೆ ನಾಡದೋಣಿ ಮೀನುಗಾರರು ದಡದಲ್ಲೇ ಉಳಿದುಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಪೂರ್ಣ ಪ್ರಮಾಣದ ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳುವ ನಿರೀಕ್ಷೆಯಲ್ಲಿರುವ ನಾಡದೋಣಿ ಮೀನುಗಾರರು ಒಂದು ತಿಂಗಳಿಂದ ಕಸುಬಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.

ಇನ್ನು ಒಂದು ತಿಂಗಳ ಅವಧಿಯಲ್ಲಿ ಹೇರಳ ಮತ್ಸ ಸಂಪಾದನೆಯಾದಲ್ಲಿ ನಾಡದೋಣಿ ತಂಡಗಳು ಲಾಭದಾಯಕವಾಗಿ ಮುನ್ನಡೆಯಲು ಸಾಧ್ಯ. ಒಂದು ನಾಡದೋಣಿ ತಂಡವನ್ನು 30ಕ್ಕೂ ಅಧಿಕ ಮೀನುಗಾರ ಕುಟುಂಬಗಳು  ಆಶ್ರಯಿಸಿವೆ.

ADVERTISEMENT

ಕರಾವಳಿಯಲ್ಲಿ ಸಂಪೂರ್ಣ ಸಹಕಾರಿ ತತ್ವದಡಿ ಅನಾದಿ ಕಾಲದಿಂದಲೂ ನಡೆಯುತ್ತಿರುವ ನಾಡದೋಣಿ ಮೀನುಗಾರಿಕೆಯಲ್ಲಿ ದುಡಿಯುವ ಎಲ್ಲಾ ಮೀನುಗಾರರಿಗೂ ಲಾಭದಲ್ಲೂ ಸಮಪಾಲು. ನಷ್ಟದಲ್ಲೂ ಸಮಪಾಲು.

ನಾಡದೋಣಿ ಮೀನುಗಾರಿಕೆಗೆ ಮಳೆಗಾಲದಲ್ಲಿ ಮಾತ್ರ ಸಂಪಾದನೆಗೆ ಅವಕಾಶ ಇದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಡದೋಣಿಗಳು ಹಿಡಿದು ತಂದ ಮೀನಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡ ಬಳಿಕ ಕೆಲವೊಂದು ನಾಡದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದರೂ ಮೀನಿಗೆ ಉತ್ತಮ ದರ ಸಿಗುವುದಿಲ್ಲ.

ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೂ ನಿರೀಕ್ಷಿತ ಮಟ್ಟದಲ್ಲಿ ಮತ್ಸ ಸಂಪತ್ತು ದೊರೆಯದೆ ನಷ್ಟ ಉಂಟಾಗುತ್ತಿದೆ ಎಂಬುದು ನಾಡದೋಣಿ ಮೀನುಗಾರರ ಅಳಲು. ಈ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕಾ ದೋಣಿಗಳ ಸಂಖ್ಯೆಯೂ ವರ್ಷ ಕಳೆದಂತೆ ಕಡಿಮೆಯಾಗುತ್ತಿದೆ.

ಉಡುಪಿ ಮತ್ತು ಕಾಪು ತಾಲ್ಲೂಕಿನಲ್ಲಿ ನಾಡದೋಣಿ ಮೀನುಗಾರಿಕೆಯನ್ನು ನಡೆಸುವ 35 ಕ್ಕೂ ಅಧಿಕ (ಡಿಸ್ಕೋಫಂಡ್) ತಂಡಗಳು ಇವೆ. ಜತೆಗೆ ಕಂತಲೆ, ಪಟ್ಟಬಲೆ, ಟ್ರಾಲ್, ಕೈರಂಪಣಿ ವಿಧಾನಗಳ ಮೂಲಕವೂ ಮೀನುಗಾರಿಕೆ ನಡೆಸಲಾಗುತ್ತದೆ. ಪಡುಬಿದ್ರೆ ಉಚ್ಚಿಲ, ಕಾಪು, ಮಟ್ಟು, ಉದ್ಯಾವರ, ಪಡುಕರೆ, ಮಲ್ಪೆ, ತೊಟ್ಟಂ, ಹೂಡೆ, ಬೆಂಗ್ರೆ, ಗಂಗೊಳ್ಳಿ ವರೆಗೆ ಹರಡಿಕೊಂಡಿದೆ.

ಮಳೆಗಾಲದಲ್ಲಿ ಮರಣ ಬಲೆ ಉಪಯೋಗಿಸಿ ಹಲವು ಮಂದಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಹೆಜಮಾಡಿಯಿಂದ ಕೋಡಿಬೆಂಗ್ರೆವರೆಗೆ ಎಲ್ಲಾ ಸ್ತರದ ಸುಮಾರು 2000ಕ್ಕೂ ಅಧಿಕ ನಾಡದೋಣಿಗಳಿವೆ. ಸುಮಾರು 15 ಸಾವಿರ ಮಂದಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ 25 ಸಾವಿರ ಮಂದಿ ಇದನ್ನು ಅವಲಂಬಿಸಿದ್ದಾರೆ.

ಹವಾಮಾನದ ವೈಪರೀತ್ಯದಿಂದ ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಗೆ ದಿನಗಳು ಸಾಕಾಗುತ್ತಿಲ್ಲ. ಈ ಹಿಂದೆ ಬೇಕಾದಷ್ಟು ಮೀನು ದಡದ ಸಮೀಪದಲ್ಲಿಯೇ ದೊರೆಯುತ್ತಿತ್ತು. ಆನಂತರ ಮೀನುಗಳನ್ನು ಹುಡುಕಿಕೊಂಡು ಆಳಸಮುದ್ರಕ್ಕೆ ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಆಳಸಮುದ್ರಕ್ಕೆ ತೆರಳುವುದು ಅಸಾಧ್ಯವಾಗಿರುವುದರಿಂದ ನಾಡದೋಣಿ ಮೀನುಗಾರಿಕೆ ಕಷ್ಟ ಎನ್ನುತ್ತಾರೆ ಮೀನುಗಾರ ನಾಗೇಶ್ ತಿಂಗಳಾಯ ಮಟ್ಟು.

ಉದ್ಯಾವರ ಪಡುಕರೆಯಲ್ಲಿ ಮೀನುಗಾರರು ನಾಡದೋಣಿಗೆ ಬಲೆಯನ್ನು ತುಂಬಿಸುತ್ತಿರುವುದು.
ಸಮುದ್ರ ಮಧ್ಯೆ ತೂಫಾನ್ ಆಗದೆ ಸಮಸ್ಯೆ
ಸಮುದ್ರ ಮಧ್ಯೆ ಈ ಬಾರಿ ಯಾಂತ್ರಿಕ ಋತುವಿನಲ್ಲಿ ಸರಿಯಾದ ತೂಫಾನ್ ಆಗದೆ ಮೀನುಗಾರಿಕೆ ಆಶಾದಾಯಕವಾಗಿರಲಿಲ್ಲ. ಮಳೆಗಾಲದಲ್ಲಿ ತೂಫಾನ್ ಆಗಿ ಸಮುದ್ರ ಪ್ರಕ್ಷುಬ್ದಗೊಂಡು ಕಡಲಾಳದ ಮಣ್ಣು ಮೇಲೆ ಬಂದಾಗ ಮೀನಿನ ಲಕ್ಷಣ ಕಾಣಿಸಿಕೊಳ್ಳುತ್ತದೆ. ಈ ವೇಳೆ ಪ್ರಕ್ಷುಬ್ದ ಸಮುದ್ರ ಅಲ್ಲಲ್ಲಿ ಶಾಂತತೆ ಕಾಯ್ದುಕೊಂಡರೆ ಮೀನುಗಾರಿಕೆಗೆ ಆನುಕೂಲವಾಗುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಉತ್ತಮ ಮಳೆಯಾದರೆ ನದಿ ಮೂಲಕ ಮಳೆ ನೀರು ಕಡಲ ಒಡಲು ಸೇರುತ್ತದೆ. ನದಿ ಮೂಲಕ ಕಡಲು ಸೇರಿದ ಕೆಂಪುನೀರಿನ ವಾಸನೆಗೆ ಮೀನು ಮೊಟ್ಟೆ ಇಡಲು ಧಾವಿಸಿ ಬರುತ್ತವೆ. ಆಳಸಮುದ್ರದಿಂದ ಸಂತಾನೋತ್ಪತ್ತಿಗೆ ಬರುವ ಮೀನು ಸಮುದ್ರ ತೀರ ಸಮುದ್ರ–ನದಿ ಸೇರುವ ಸಂಗಮಗಳಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆ ಇಟ್ಟ ಮೀನು ನಂತರ ಆಳಸಮುದ್ರಕ್ಕೆ ಹೊರಡಲು ಅಣಿಯಾಗುತ್ತವೆ. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುವುದರಿಂದ ಈ ಮೀನುಗಳೇ ಮೀನುಗಾರರ ಬಲೆಗೆ ಬೀಳುತ್ತವೆ ಎಂದು ಉದ್ಯಾವರ ಪಡುಕರೆ ಯೋಗೀಶ್ ಸಾಲ್ಯಾನ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.