ಬೈಂದೂರು: ಸುಸಜ್ಜಿತ ರೈಲ್ವೇ ನಿಲ್ದಾಣವಿದ್ದರೂ ರೈಲುಗಳೇ ನಿಲ್ಲುವುದಿಲ್ಲ ಇಲ್ಲಿ…! ಈವರೆಗೆ ಇಲ್ಲಿ ನಿಲ್ಲುತ್ತಿದ್ದ ಗರೀಬ್ ರಥ್ ರೈಲನ್ನು ಕೂಡ ಬಿಜೂರಿನಿಂದ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸಂಸದರೇ ಶಿಫಾರಸ್ಸು ಮಾಡಿದ್ದಾರೆ…! ಹಾಗಾಗಿ ಈ ನಿಲ್ದಾಣವನ್ನೀಗ ಕೊಂಕಣ ರೈಲ್ವೇಯವರು ಕೇವಲ ರೈಲುಗಳ ಕ್ರಾಸಿಂಗ್‌ಗಷ್ಟೇ ಬಳಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 1 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರವಿದ್ದರೂ ಇಲ್ಲಿ ರೈಲುಗಳನ್ನು ನಿಲ್ಲಿಸಲು ಇಲಾಖೆಯಾಗಲಿ, ಕೊಂಕಣ ರೈಲ್ವೇ ನಿಗಮದವರಾಗಲಿ ಮನಸ್ಸು ಮಾಡುತ್ತಿಲ್ಲ…!
ಕೊಲ್ಲೂರಿಗೆ ಕೇವಲ 24 ಕಿ.ಮೀ.ನಷ್ಟು ದೂರವಿರುವ ಇಲ್ಲಿಗೆ ಕೇರಳದಿಂದ ಪ್ರವಾಸಿಗರು ರೈಲಿನ ಮೂಲಕ ಬಂದು ಹೋಗಲು ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಲ್ಲಿ ಇಲ್ಲಿ ನಿಲ್ದಾಣ ಮಾಡಲಾಗಿತ್ತು. ಈಗ ಬಿಜೂರು ಸ್ಟೇಷನ್ ಅನ್ನು ಕೇವಲ ಕ್ರಾಸಿಂಗ್ ಉದ್ದೇಶಕ್ಕಷ್ಟೇ ಬಳಸಲಾಗುತ್ತಿದೆ. ರೈಲ್ವೇ ಸ್ಟೇಷನ್‌ಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳು ಬಿಜೂರಿನಲ್ಲಿವೆ. ಆದರೆ ರೈಲು ಮಾತ್ರ ನಿಲ್ಲುವುದಿಲ್ಲ.
ಬಿಜೂರು ಸ್ಟೇಷನ್ ಕುರಿತು ಜನಪ್ರತಿನಿಧಿಗಳ ನಿರ್ಲಕ್ಷ್ಯ: ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಳ್ಳುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರೇ ಸ್ವತಃ ಇತ್ತೀಚೆಗೆ ರೈಲ್ವೇ ಮಂತ್ರಿಗೆ ಪತ್ರ ಬರೆದು ಬಿಜೂರು ಸ್ಟೇಷನ್‌ನಲ್ಲಿ ನಿಲ್ಲುತ್ತಿದ್ದ ಗರೀಬ್ ರಥ್ ರೈಲನ್ನು ಬಿಜೂರು ಬದಲಿಗೆ ಬೈಂದೂರು ಸ್ಟೇಷನ್‌ನಲ್ಲಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಕಳೆದ ವರ್ಷ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಗರೀಬ್ ರಥ್ ರೈಲಿನ ನಿಲುಗಡೆಯನ್ನು ಬಿಜೂರಿನಿಂದ ಸ್ಥಳಾಂತರಿಸಬಾರದೆಂದು ಮನವಿ ನೀಡಿದ್ದರೂ ಅದನ್ನು ಅವರು ಪರಿಗಣಿಸದಿರುವುದು ನಿರಾಸೆ ಉಂಟು ಮಾಡಿದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳ ಮೌನದ ಕುರಿತು ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಆದಾಯವಿಲ್ಲವೆಂಬ ಕಾರಣ ಕೊಡುವ ಕೊಂಕಣ ರೈಲ್ವೇ ನಿಗಮ: ಈ ನಿಲ್ದಾಣದಲ್ಲಿ ಆದಾಯವಿಲ್ಲ ಎನ್ನುವ ಕಾರಣಕ್ಕೆ ರೈಲು ನಿಲ್ಲುತ್ತಿಲ್ಲ ಎನ್ನುತ್ತದೆ ನಿಗಮ. ಮೊದಲಿನಿಂದಲೂ ಮಂಗಳೂರು-ಮಡಗಾಂ ಪ್ಯಾಸೆಂಜರ್ ರೈಲು ಇಲ್ಲಿ ನಿಲ್ಲುತ್ತಿತ್ತೇ ಹೊರತು ಮತ್ಯಾವ ರೈಲು ಇಲ್ಲಿ ನಿಲ್ಲುತ್ತಿರಲಿಲ್ಲ. ಅನಂತರ ಗರೀಬ್ ರಥ್ ರೈಲು ನಿಲ್ಲುತ್ತಿತ್ತು.
ರೈಲು ನಿಲ್ಲಿಸದಿದ್ದರೆ ನಮ್ಮ ಕೃಷಿಭೂಮಿ ವಾಪಾಸು ನೀಡಿ : 90ರ ದಶಕದಲ್ಲಿ ತಮ್ಮೂರಲ್ಲಿ ರೈಲ್ವೇ ನಿಲ್ದಾಣ ಆಗುತ್ತದೆ ಎನ್ನುವ ಆಶಯದಿಂದ ಜನರು ಯಾವುದೇ ತಕರಾರಿಲ್ಲದೇ ನೂರಾರು ಎಕರೆ ಫಲವತ್ತಾದ ಕೃಷಿ ಜಮೀನನ್ನು ಇಲಾಖೆಗೆ ನೀಡಿದ್ದರು. ಆದರೆ ಈಗ ಕೇವಲ ಕ್ರಾಸಿಂಗ್‌ಗಷ್ಟೇ ಸಿಮೀತವಾದ ಬಿಜೂರು ರೈಲ್ವೇ ನಿಲ್ದಾಣದ ಅವ್ಯವಸ್ಥೆಯಿಂದ ಬೇಸತ್ತಿರುವ ಜನ ‘ನಮ್ಮ ಭೂಮಿ ವಾಪಾಸ್ ನೀಡಿ, ಇಲ್ಲವೇ ಹತ್ತಾರು ರೈಲುಗಳನ್ನು ಇಲ್ಲಿ ನಿಲ್ಲಿಸಿ’ ಎಂದು ಹೋರಾಟ ಮಾಡುವತ್ತ ಸಂಘಟಿತರಾಗುತ್ತಿದ್ದಾರೆ.
ಒಟ್ಟಾರೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಿಜೂರು ರೈಲ್ವೇ ನಿಲ್ದಾಣದಲ್ಲಿ ಹೆಚ್ಚಿನ ರೈಲುಗಳನ್ನು ನಿಲ್ಲಿಸುವ ಒತ್ತಾಯ ಈ ಭಾಗದ ಜನರದ್ದು ಹಾಗೂ ಪ್ರಯಾಣಿಕರದ್ದು. ಈ ಕುರಿತು ಅಧಿಕಾರಿಗಳು ಯಾವ ಕ್ರಮಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.