ADVERTISEMENT

ಉಡುಪಿ | ಟ್ರೋಲಿಂಗ್ ನಿಷೇಧ: ಮೀನುಗಾರರಿಗೆ ಆಸರೆ ಬಲೆ ಕಾಯಕ

ಬೋಟ್‌ಗಳಲ್ಲಿ ದುಡಿಯುವವರು ಇತರ ಕೆಲಸದತ್ತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 7:54 IST
Last Updated 7 ಜುಲೈ 2024, 7:54 IST
ಮಲ್ಪೆ ಧಕ್ಕೆಯಲ್ಲಿ ಬಲೆ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುವ ಮೀನುಗಾರ
ಮಲ್ಪೆ ಧಕ್ಕೆಯಲ್ಲಿ ಬಲೆ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುವ ಮೀನುಗಾರ   

ಉಡುಪಿ: ಟ್ರೋಲಿಂಗ್ ನಿಷೇಧ ಜಾರಿಗೆ ಬಂದ ಬಳಿಕ ಆಳ ಕಡಲಲ್ಲಿ ಮೀನುಗಾರಿಕೆ ನಡೆಸುವ ಬೋಟ್‌ಗಳು ದಡ ಸೇರಿವೆ. ಇವುಗಳಲ್ಲಿ ದುಡಿಯುವ ನೂರಾರು ಮೀನುಗಾರರು ಈ ಅವಧಿಯಲ್ಲಿ ಪರ್ಯಾಯ ವೃತ್ತಿಯ ಮೊರೆ ಹೋಗಬೇಕಾಗುತ್ತದೆ.

ಕೆಲವರು ನದಿಗಳಲ್ಲಿ ಮೀನುಗಾರಿಕೆಗೆ ತೆರಳಿದರೆ, ಇನ್ನು ಕೆಲವರು ಹೊಟ್ಟೆ ಹೊರೆಯಲು ಇತರ ಕೆಲಸಗಳಿಗೆ ತೆರಳುತ್ತಾರೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಮಲ್ಪೆ ಹಾಸುಪಾಸಿನ ಮೀನುಗಾರರ ಕೈ ಹಿಡಿಯುವುದು ಪರ್ಸಿನ್ ಬೋಟ್‍ಗಳಲ್ಲಿ ಬಳಸುವ ಬಲೆ.

ಟ್ರೋಲಿಂಗ್ ನಿಷೇಧದ ಅವಧಿಯಲ್ಲಿ ಮೀನುಗಾರಿಕೆಗೆ ಬಳಸುವ ಈ ಬೃಹತ್ ಬಲೆಗಳ ದುರಸ್ತಿ, ಹೊಸ ಬಲೆಗಳನ್ನು ಸಿದ್ಧಪಡಿಸುವ ಕೆಲಸವು ಸ್ಥಳೀಯ ಮೀನುಗಾರರ ಪಾಲಾಗುತ್ತದೆ.

ADVERTISEMENT

ಧಕ್ಕೆಗಳಲ್ಲಿ ಕೆಲಸ ಮಾಡುವ ಒಡಿಶಾ, ಆಂಧ್ರ ಪ್ರದೇಶದ ಕಾರ್ಮಿಕರು ಹೆಚ್ಚಾಗಿ ಬಲೆ ಸಿದ್ಧಪಡಿಸುವ ಕೆಲಸ ಮಾಡುತ್ತಾರೆ. ಆದರೆ ಟ್ರೋಲಿಂಗ್ ನಿಷೇಧದ ಅವಧಿಯಲ್ಲಿ ಅವರು ತಮ್ಮ ರಾಜ್ಯಗಳಿಗೆ ತೆರಳುತ್ತಾರೆ. ಆಗ ಪರ್ಸಿನ್ ಬೋಟ್‌ಗಳಲ್ಲಿ ಬಳಸುವ ಬಲೆಯ ಕೆಲಸವು ಬೋಟ್‌ಗಳಲ್ಲಿ ದುಡಿಯುವ ಮೀನುಗಾರರ ಹೆಗಲೇರುತ್ತದೆ. ಕೆಲಸವಿಲ್ಲದ ಕಾಲದಲ್ಲಿ ಅದು ಅವರಿಗೆ ಬಹು ದೊಡ್ಡ ಆಸರೆಯಾಗುತ್ತದೆ.

ಆಳ ಸಮುದ್ರಕ್ಕೆ ತೆರಳುವ ಬೋಟ್‌ಗಳ ಚಾಲಕರು ಸೇರಿದಂತೆ, ಮೀನುಗಾರರು ಬಲೆ ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಬಲೆಗಳನ್ನು ತುಂಡರಿಸಿ, ಬೇಕಾದ ಅಳತೆಗೆ ಜೋಡಿಸಿ, ಅದಕ್ಕೆ ತೇಲುವ ವಸ್ತು ಮತ್ತು ನೀರಿನಲ್ಲಿ ಮುಳುಗುವ ಸೀಸಗಳನ್ನು ಜೋಡಿಸಿ ಹೊಲಿಯುತ್ತೇವೆ. ಪರ್ಸಿನ್‌ ಬೋಟ್‌ನಲ್ಲಿ ಬಳಸುವ ಹೊಸ ಬಲೆಯನ್ನು ಸಿದ್ಧಪಡಿಸಲು 20 ಮಂದಿ ಕಾರ್ಮಿಕರಿಗೆ 20 ದಿವಸಗಳು ಬೇಕು. ಈ ಕೆಲಸಕ್ಕೆ ಪ್ರತಿಯೊಬ್ಬ ಕಾರ್ಮಿಕನಿಗೆ ದಿನಕ್ಕೆ ₹900 ಸಂಬಳ ಸಿಗುತ್ತದೆ. ಸಿದ್ಧಗೊಂಡ ಬಲೆಯು ನಾಲ್ಕು ಟನ್‌ ಭಾರ ಇರುತ್ತದೆ ಎನ್ನುತ್ತಾರೆ ಮೀನುಗಾರ ವಿಶ್ವನಾಥ್.

ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಲೆ ಸಿದ್ಧಪಡಿಸುವ ಕೆಲಸಕ್ಕೆ ಬೇಡಿಕೆ ಇದೆ. ಆದರೆ ನಮಗೆ ಮಲ್ಪೆಯಲ್ಲೇ ಈ ಕೆಲಸ ಸಾಕಷ್ಟು ಸಿಗುತ್ತದೆ. ದಿನದಲ್ಲಿ ಹತ್ತು ಗಂಟೆ ದುಡಿಯುತ್ತೇವೆ ಎನ್ನುತ್ತಾರೆ ಅವರು.

ಪರ್ಸಿನ್‌ ಬೋಟ್‌ನಲ್ಲಿ ಬಳಸುವ ಬಲೆಗಳು ಹತ್ತು ವರ್ಷಗಳವರೆಗೂ ಬಾಳ್ವಿಕೆ ಬರುತ್ತವೆ. ಆದರೆ ಸಿಲ್ವರ್‌ ಮೀನು ಸೇರಿದಂತೆ ಕೆಲವು ವಿಧದ ಮೀನುಗಳು ಬಲೆಗೆ ಬಿದ್ದರೆ ಅದು ಹರಿದುಹೋಗುತ್ತದೆ. ಅದನ್ನು ಮತ್ತೆ ಹೊಲಿಯಬೇಕಾಗುತ್ತದೆ ಎಂದೂ ಅವರು ವಿವರಿಸಿದರು.

ಈ ಬಲೆಯಲ್ಲಿ ಹೆಚ್ಚಾಗಿ ಬೂತಾಯಿ, ಬಂಗುಡೆ ಮೀನು ಸಿಗುತ್ತದೆ. ಅಪರೂಪಕ್ಕೆ ಸಿಲ್ವರ್‌ ಮೀನು, ಪಾಂಪ್ರೆಟ್‌ ಮೀನುಗಳು ಸಿಗುತ್ತವೆ ಎಂದು ಮೀನುಗಾರ ಸತೀಶ್‌ ತಿಳಿಸಿದರು.

ಮಾನ್ಸೂನ್ ಅವಧಿಯು ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿರುವುದರಿಂದ ಪ್ರತಿ ವರ್ಷವೂ ಮಲೆಗಾಲದಲ್ಲಿ ಟ್ರೋಲಿಂಗ್ ನಿಷೇಧ ಹೇರಲಾಗುತ್ತದೆ.

ಪರ್ಸಿನ್‌ ಬೋಟ್‌ನಲ್ಲಿ ಬಳಸುವ ಬಲೆಯನ್ನು ಸಿದ್ಧಪಡಿಸಿರುವುದು
ಪರ್ಸಿನ್ ಬೋಟ್‌ನಲ್ಲಿ ಬಳಸುವ ಬಲೆಯ ಕೆಲಸ ನಾಜೂಕಿನ ಕೆಲಸ. ಅದು ಎಲ್ಲರಿಗೂ ಒಲಿಯುವ ಕಲೆಯಲ್ಲ. ಅದಕ್ಕೆ ಪರಿಣತಿ ಬೇಕು. ಸ್ವಲ್ಪ ವ್ಯತ್ಯಾಸವಾದರರೂ ಮೀನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ
ಸತೀಶ್‌ ಮೀನುಗಾರ ಮಲ್ಪೆ
ಚಿಕ್ಕಂದಿನಿಂದಲೇ ಬಲೆಯ ಕೆಲಸ ಕಲಿತಿದ್ದೆ ಅದು ಮಳೆಗಾಲದ ಎರಡು ತಿಂಗಳು ಜೀವನೋಪಾಯಕ್ಕೆ ಮಾರ್ಗವಾಯಿತು
ವಿಶ್ವನಾಥ್‌ ಬೋಟ್ ಚಾಲಕ ಮಲ್ಪೆ
ಪರ್ಸಿನ್ ಬೋಟ್‌ಗಳಲ್ಲಿ ಬಳಸುವ ಬಲೆಯ ದುರಸ್ತಿ ಮತ್ತು ಹೊಸ ಬಲೆಯನ್ನು ಸಿದ್ಧಪಡಿಸುವ ಕೆಲಸವು ಮೇಸ್ತ್ರಿಯೊಬ್ಬರು ಉಸ್ತುವಾರಿಯಲ್ಲಿ ನಡೆಯುತ್ತದೆ ನಾವು ದಿನ ಸಂಬಳಕ್ಕೆ ದುಡಿಯುತ್ತಿದ್ದೇವೆ
ಶಂಕರ್ ಮೀನುಗಾರ ಮಲ್ಪೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.