ADVERTISEMENT

ಉಡುಪಿ: ಕ್ರೀಡೆಗೂ ಪ್ರೋತ್ಸಾಹ, ಕಲಿಕೆಗೂ ಉತ್ಸಾಹ

ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:10 IST
Last Updated 5 ಜುಲೈ 2024, 4:10 IST
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ   

ಉಡುಪಿ: ಕಲಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಿಗೆ ಅವಕಾಶದ ಹೆಬ್ಬಾಗಿಲನ್ನೇ ತೆರೆಯುತ್ತಿದೆ.

ಸುಸಜ್ಜಿತ ಕಟ್ಟಡಗಳು, ಡಿಜಿಟಲ್‌ ಗ್ರಂಥಾಲಯ, ಪ್ರಯೋಗಾಲಯಗಳು, ಕಂಪ್ಯೂಟರ್‌ ಲ್ಯಾಬ್‌, ಎಲ್ಲಾ ತರಗತಿ ಕೋಣೆಗಳಲ್ಲೂ ಪ್ರಾಜೆಕ್ಟರ್‌, ವೈಫೈ ಸೌಲಭ್ಯ ಹೊಂದಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. 2022-23ನೇ ಸಾಲಿನ ಶೈಕ್ಷಣಿಕ ಫಲಿತಾಂಶದಲ್ಲಿ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲೇ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈ ಕಾಲೇಜಿನದ್ದು.

2019ರಲ್ಲಿ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿಯನ್ನು ಈ ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. 105 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅದರಲ್ಲಿ ಪಾಲ್ಗೊಂಡಿದ್ದರು. ಈ ಟೂರ್ನಿಗೆ ಆತಿಥ್ಯ ವಹಿಸಿದ ರಾಜ್ಯದ ಮೊದಲ ಸರ್ಕಾರಿ ಕಾಲೇಜು ಎಂಬ ಹಿರಿಮೆಯೂ ಈ ಕಾಲೇಜಿಗಿದೆ.

ADVERTISEMENT

1993ರಲ್ಲಿ ಆರಂಭವಾದ ಕಾಲೇಜು 1993ರಿಂದ 2003ರ ವರೆಗೆ ಉಡುಪಿಯ ಬೋರ್ಡ್‌ ಹೈಸ್ಕೂಲಿನಲ್ಲಿ ಕಾರ್ಯಾಚರಿಸಿತ್ತು. 2003ರಲ್ಲಿ ತೆಂಕನಿಡಿಯೂರಿಗೆ ಸ್ಥಳಾಂತರಗೊಂಡಿತು. ನ್ಯಾಕ್‌ ಮರುಮೌಲ್ಯಮಾಪನದಲ್ಲಿ ‘ಬಿ+’ ಶ್ರೇಣಿ ಮಾನ್ಯತೆಯೊಂದಿಗೆ ಸಿ.ಜಿ.ಪಿ.ಎ.2.57 ಪಡೆದಿದೆ. 2006ರಿಂದ ಕಾಲೇಜಿಗೆ ಎಂ.ಎ.ಇತಿಹಾಸದಲ್ಲಿ 3, ಅರ್ಥಶಾಸ್ತ್ರದಲ್ಲಿ 7, ಇಂಗ್ಲಿಷ್‌ನಲ್ಲಿ 1, ಸಮಾಜಶಾಸ್ತ್ರದಲ್ಲಿ 5, ಎಂಎ ಕನ್ನಡ;13, ಎಂ.ಕಾಂ 17, ಎಂಎಸ್‌ಡಬ್ಲ್ಯು2, ಬಿಎಸ್‌ಡಬ್ಲ್ಯು 2 ಸೇರಿ ಒಟ್ಟು 50 ರ್‍ಯಾಂಕ್‌ಗಳು ಬಂದಿವೆ.

2023–24ನೇ ಸಾಲಿನಲ್ಲಿ 930 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. 2024–25ನೇ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ. 72 ಮಂದಿ ಬೋಧಕ ಸಿಬ್ಬಂದಿಯಲ್ಲಿ 26 ಮಂದಿ ಬೋಧಕರು, 46 ಅತಿಥಿ ಉಪನ್ಯಾಸಕರು ಇದ್ದಾರೆ. ಬೋಧಕರಲ್ಲಿ 14 ಮಂದಿ ಪಿಎಚ್‌ಡಿ ಪದವೀಧರರೂ ಇದ್ದಾರೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಸುರೇಶ್‌ ರೈ ಕೆ.

ಕಾಲೇಜಿನಲ್ಲಿ ಎನ್‌.ಎಸ್‌.ಎಸ್., ರೋವರ್ಸ್‌ ರೇಂಜರ್ಸ್‌, ರೆಡ್‌ಕ್ರಾಸ್‌ ಘಟಕಗಳು ಕೂಡ ಇವೆ. ಕಾಲೇಜಿನ ಗ್ರಂಥಾಲಯದಲ್ಲಿ 40 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಜೊತೆಗೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಾಯಕವಾಗಲು ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವ ಪುಸ್ತಕಗಳೂ ಲಭ್ಯವಿವೆ ಎಂದು ಅವರು ವಿವರಿಸಿದರು.

ಹೆಚ್ಚುವರಿ ಬಸ್‌ ಸೌಲಭ್ಯ ಬೇಕು: ಕಾಲೇಜು ಉಡುಪಿ ನಗರದಿಂದ ದೂರವಿರುವ ಕಾರಣ ಈ ರೂಟಿನಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಿದೆ. ಬೆಳಿಗ್ಗೆ ಮತ್ತು ಸಂಜೆ ಈ ಮಾರ್ಗವಾಗಿ ಹೆಚ್ಚು ಸರ್ಕಾರಿ ಬಸ್‌ಗಳ ಸಂಚಾರ ಆರಂಭಿಸಿದರೆ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ
ಕಾಲೇಜಿನಲ್ಲಿ ಬಿಸಿಎ ಕೋರ್ಸ್‌ಗೆ ಹೆಚ್ಚು ಬೇಡಿಕೆ ಇದೆ. ಪ್ರತಿ ವರ್ಷ ನಿಗದಿತ ಸೀಟುಗಳಿಗಿಂತಲೂ ಹೆಚ್ಚು ಅರ್ಜಿಗಳು ಬರುತ್ತವೆ. ಶಿವಮೊಗ್ಗ ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳೂ ಇಲ್ಲಿ ಕಲಿಯುತ್ತಿದ್ದಾರೆ
ಸುರೇಶ್‌ ರೈ ಕೆ. ಪ್ರಾಂಶುಪಾಲ

ಲಭ್ಯವಿರುವ ಕೋರ್ಸ್‌ಗಳು

ಬಿ.ಎ. ಬಿ.ಕಾಂ. ಬಿಎಸ್ಸಿ ಬಿ.ಸಿ.ಎ ಬಿ.ಎಸ್.ಡಬ್ಲ್ಯು ಬಿ.ಬಿ.ಎ ಎಂ.ಕಾಂ ಎಂ.ಎಸ್‌.ಡಬ್ಲ್ಯು ಎಂ.ಎ. ಇತಿಹಾಸ ಎಂ.ಎ. ಅರ್ಥಶಾಸ್ತ್ರ ಎಂ.ಎ. ಸಮಾಜಶಾಸ್ತ್ರ ಎಂ.ಎ. ಇಂಗ್ಲಿಷ್‌ ಎಂ.ಎ.ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.