ADVERTISEMENT

ಉಡುಪಿ–ಚಿಕ್ಕಮಗಳೂರು ಲೋಕಸಭಾ: ಹಿಂದುತ್ವ–ಗ್ಯಾರಂಟಿ ಮಧ್ಯೆ ಪೈಪೋಟಿ

25 ವರ್ಷಗಳ ಹಿಂದೆ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿದ್ದ ಕೆ.ಜಯಪ್ರಕಾಶ್‌ ಹೆಗ್ಡೆ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಈಗ ಲೋಕಸಭೆ ಅಖಾಡದಲ್ಲಿ ಮುಖಾಮುಖಿ

ಬಾಲಚಂದ್ರ ಎಚ್.
ವಿಜಯ ಕುಮಾರ್ ಎಸ್‌.ಕೆ.
Published 16 ಏಪ್ರಿಲ್ 2024, 1:34 IST
Last Updated 16 ಏಪ್ರಿಲ್ 2024, 1:34 IST
ಕೆ.ಜಯಪ್ರಕಾಶ್‌ ಹೆಗ್ಡೆ
ಕೆ.ಜಯಪ್ರಕಾಶ್‌ ಹೆಗ್ಡೆ    

ಉಡುಪಿ/ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

25 ವರ್ಷಗಳ ಹಿಂದೆ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿದ್ದ ಕೆ.ಜಯಪ್ರಕಾಶ್‌ ಹೆಗ್ಡೆ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಈಗ ಲೋಕಸಭೆ ಅಖಾಡದಲ್ಲಿ ಮುಖಾಮುಖಿಯಾಗಿದ್ದಾರೆ. ಈ ಚುನಾವಣೆ ‘ಸಜ್ಜನ’ರ ನಡುವಿನ ಕಾದಾಟ ಎಂದೇ ಬಿಂಬಿತವಾಗಿದೆ.

ಉಡುಪಿ ಜಿಲ್ಲೆಯ ಕಾಪು, ಕುಂದಾಪುರ, ಉಡುಪಿ, ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. 

ADVERTISEMENT

ಎಚ್ಚರಿಕೆಯ ನಡೆ: ಸತತ ಎರಡು ಬಾರಿ ಗೆದ್ದಿದ್ದ ಶೋಭಾ ಕರಂದ್ಲಾಜೆ ಈ ಬಾರಿಯೂ ಸ್ಪರ್ಧೆಗೆ ಒಲವು ತೋರಿದಾಗ ಭುಗಿಲೆದ್ದ ಕಾರ್ಯಕರ್ತರ ಅಸಮಾಧಾನವನ್ನು ತಣಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿ ಎಚ್ಚರಿಕೆಯ ನಡೆ ಇಟ್ಟಿದೆ. ಸಿ.ಟಿ.ರವಿ ಬೆಂಬಲಿಗರನ್ನೂ ಸುಮ್ಮನಾಗಿಸಿದೆ. ಬಿಜೆಪಿ ದಾಳಕ್ಕೆ ಪ್ರತಿ ದಾಳವಾಗಿ ಕಾಂಗ್ರೆಸ್‌ ಕೂಡ ಬಿಜೆಪಿಯಲ್ಲಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನೇ ಪಕ್ಷಕ್ಕೆ ಸೆಳೆದು ಟಿಕೆಟ್‌ ನೀಡಿದೆ.

ಹೆಗ್ಡೆ ಬಂಟ ಸಮುದಾಯದವರಾದರೆ, ಪೂಜಾರಿ ಬಿಲ್ಲವ ಸಮುದಾಯದವರು. ಇಬ್ಬರೂ ಉಡುಪಿ ಜಿಲ್ಲೆಯವರು. ಚಿಕ್ಕಮಗಳೂರು ಜಿಲ್ಲೆಯ ಮಟ್ಟಿಗೆ ಇಬ್ಬರೂ ‘ಹೊರಗಿನವರು’. ಇಬ್ಬರೂ ಅಭ್ಯರ್ಥಿಗಳು ಉತ್ತಮರೇ ಎಂಬ ಅಭಿಪ್ರಾಯ ಕ್ಷೇತ್ರದ ಬಹುತೇಕ ಕಡೆ ಕೇಳಿಬರುತ್ತಿದೆ. 

ಪೂಜಾರಿ ಅವರು ‘ಹಿಂದುತ್ವ’ ಹಾಗೂ ‘ಮೋದಿ’ ಮುಖವನ್ನು ತೋರಿಸಿ ಮತಯಾಚಿಸುತ್ತಿದ್ದರೆ, ಹೆಗ್ಡೆ ತಾವು ಶಾಸಕ, ಸಚಿವ ಹಾಗೂ ಸಂಸದರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಹಿಂದುತ್ವ ವರ್ಸಸ್‌ ಗ್ಯಾರಂಟಿಗಳ ಮಧ್ಯೆ ಹಣಾಹಣಿ ನಡೆಯುತ್ತಿರುವಂತೆ ಕಾಣುತ್ತಿದೆ.

ಜೆಡಿಎಸ್‌– ಬಿಜೆಪಿ ಮೈತ್ರಿ ಚಿಕ್ಕಮಗಳೂರಿನಲ್ಲಿ ಪರಿಣಾಮ ಬೀರುವ ಸಾಧ್ಯತೆ ಉಂಟು. ಕಾಂಗ್ರೆಸ್‌ಗೆ ಎಡಪಕ್ಷಗಳ ಬೆಂಬಲ ಪ್ಲಸ್‌ ಪಾಯಿಂಟ್‌.

ಯಾರ ಬಲೆಗೆ ಮೀನುಗಾರರು:  ಉಡುಪಿ ಜಿಲ್ಲೆಯಲ್ಲಿ ಮೊಗವೀರ (ಮೀನುಗಾರರು) ಪ್ರಬಲ ಸಮುದಾಯ. ಶೋಭಾ ಕರಂದ್ಲಾಜೆ ಬದಲಾಗಿ ಮೊಗವೀರ ಸಮುದಾಯದ ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್‌ ನೀಡುವಂತೆ ಈಚೆಗೆ ಪಟ್ಟು ಹಿಡಿದಿದ್ದ ಮೀನುಗಾರರ ಮುಖಂಡರು, ಶೋಭಾಗೆ ಟಿಕೆಟ್‌ ಕೈತಪ್ಪಿದ ಬಳಿಕ ತಟಸ್ಥರಾಗಿದ್ದು ಯಾರ ಕಡೆಗೆ ವಾಲುತ್ತಾರೆ ಎಂಬುದು ಕುತೂಹಲ. ಮತ್ತೊಂದೆಡೆ, ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್‌ರನ್ನು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ವರಿಷ್ಠರು ಬಂಡಾಯ ಶಮನ ಯತ್ನ ಮಾಡಿದ್ದಾರೆ. ಆದರೆ, ಅವರು ಒಳ ಏಟು ಕೊಟ್ಟರೆ ಬಿಜೆಪಿಗೆ ಅಡ್ಡಿಯಾಗಬಹುದು ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡ, ಕುರುಬ, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಮತದಾರರನ್ನು ಸೆಳೆಯಲು ಯಡಿಯೂರಪ್ಪ ಯತ್ನ ‌ನಡೆಸಿದ್ದಾರೆ. ಒಕ್ಕಲಿಗರನ್ನು ಸಮಾಧಾನ ಮಾಡಲು ಸಿ.ಟಿ.ರವಿ ಬಗ್ಗೆಯೂ ಮೃದುತ್ವ ತೋರಿಸಿದ್ದಾರೆ. ಇತ್ತ ಕುರುಬ, ಒಕ್ಕಲಿಗರ ಮತ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಯತ್ನ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.