ADVERTISEMENT

ಕಾಲೇಜಿನಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ: ಉಡುಪಿ ಶಾಸಕ ರಘುಪತಿ ಭಟ್‌

ಆಡಳಿತ ಮಂಡಳಿ, ಪೋಷಕರ ಸಭೆಯಲ್ಲಿ ಶಾಸಕ ಪುನರುಚ್ಛಾರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 2:54 IST
Last Updated 1 ಫೆಬ್ರುವರಿ 2022, 2:54 IST
ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿ, ಪೋಷಕರು, ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಯಿತು.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿ, ಪೋಷಕರು, ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಯಿತು.   

ಉಡುಪಿ: ‘ಸರ್ಕಾರ ನಿರ್ಧಾರ ಪ್ರಕಟಿಸುವವರೆಗೂ ಕಾಲೇಜಿನಲ್ಲಿ ಹಿಜಾಬ್ ಧಾರಣೆ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಶಾಸಕ ರಘುಪತಿ ಭಟ್‌ ತಿಳಿಸಿದರು.

ಕಾಲೇಜಿನಲ್ಲಿ ಸೋಮವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿ, ಪೋಷಕರು, ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

‘ಈ ಹಿಂದಿನಂತೆ ಕಾಲೇಜಿನ ಆವರಣದ ಒಳಗೆ ಹಿಜಾಬ್ ಧರಿಸಿ ಕೊಂಡು ಬಂದು, ತರಗತಿ ಕೊಠಡಿಗಳಿಗೆ ತೆರಳುವಾಗ ಹಿಜಾಬ್ ತೆಗೆದು ತರಗತಿಯ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದರು.

ADVERTISEMENT

‘ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಕೆಲ ಪೋಷಕರು, ‘ನಾವು ಮಹಿಳೆಯರು ಮಾತ್ರ ಭಾಗವಹಿಸಿರುವುದರಿಂದ ಮನೆಯಲ್ಲಿ ಚರ್ಚಿಸಿ ಮಂಗಳವಾರ ತೀರ್ಮಾನ ತಿಳಿಸುತ್ತೇವೆ’ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಪಿ.ಯು. ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಇತ್ತು. ಇದೀಗ ನಮ್ಮ ಪತ್ರದ ಕಾರಣಕ್ಕಾಗಿ ಇಲಾಖೆಯಿಂದ ಆದೇಶ ಬಂದಿದ್ದು, ಉನ್ನತ ಮಟ್ಟದ ಸಮಿತಿ ರಚನೆ ಆಗಿದೆ. ಸಮಿತಿ ತೀರ್ಮಾನ ಬರುವವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದೆ ಇದ್ದ ರೀತಿಯಲ್ಲಿ ಸಮವಸ್ತ್ರ ಮುಂದುವರಿಸುವಂತೆ ಆದೇಶ ಇರುವುದರಿಂದ, ಕಾಲೇಜು ಅಭಿವೃದ್ಧಿ ಸಮಿತಿಯೂ ಇದಕ್ಕೆ ಒಪ್ಪಿಗೆ ನೀಡಿದೆ’ ಎಂದು ತಿಳಿಸಿದರು.

‘ಇನ್ನೂ ಕೆಲವೇ ತಿಂಗಳಲ್ಲಿ ಪರೀಕ್ಷೆ ಬರಲಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಮುಕ್ತಾಯ ಮಾಡಿ, ಇದರಿಂದ ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮಗಳಾಗುತ್ತಿದೆ’ ಎಂದು ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ. ಹೀಗಾಗಿ, ಇನ್ನು ಯಾರೇ ಮನವಿ ನೀಡುವುದು ಅಥವಾ ಮಾತುಕತೆ ನಡೆಸುವುದಿದ್ದರೂ ನೇರವಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ವಕ್ಫ್ ಬೋರ್ಡ್ ಅಧ್ಯಕ್ಷ ದಾವೂದ್ ಅಬೂಬಕ್ಕರ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.