ADVERTISEMENT

ಉಡುಪಿ | ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಪ್ರಕರಣ; ತನಿಖಾಧಿಕಾರಿ ಬದಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 14:05 IST
Last Updated 29 ಜುಲೈ 2023, 14:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉಡುಪಿ: ಇಲ್ಲಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಿತ್ರೀಕರಣ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಲಾಗಿದೆ.

ಕುಂದಾಪುರ ವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರಿಗೆ ಪ್ರಕರಣದ ತನಿಖೆಯ ನೇತೃತ್ವ ವಹಿಸಲಾಗಿದೆ. ತನಿಖಾ ತಂಡದಲ್ಲಿ ಮಹಿಳಾ ಪಿಎಸ್‌ಐಗಳು ಇದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ತಿಳಿಸಿದರು.

ಹಿಂದೆ ಮಲ್ಪೆ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ ಪ್ರಕರಣದ ತನಿಖಾಧಿಕಾರಿಯಾಗಿದ್ದರು.

ADVERTISEMENT

ಕಾಂಗ್ರೆಸ್‌ ವಾಗ್ದಾಳಿ

‘ಬಿಜೆಪಿ ನಾಯಕರು ಆರೋಪ ಮಾಡುತ್ತಿರುವಂತೆ ನೇತ್ರಜ್ಯೋತಿ ಕಾಲೇಜಿನಲ್ಲಿ ಯಾವ ಘಟನೆಯೂ ನಡೆದಿಲ್ಲ. ಕುಚೋದ್ಯ ಹಾಗೂ ವಿದ್ಯಾರ್ಥಿ ಸಹಜವಾದ ನಡವಳಿಕೆಗಳಿಂದ ತಪ್ಪಾಗಿದ್ದು ತಪ್ಪಿತಸ್ಥ ವಿದ್ಯಾರ್ಥಿನಿಯರ ವಿರುದ್ಧ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟವಾಗಿ ಹೇಳಿದೆ. ಆದರೂ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಪ್ರಕರಣದಲ್ಲಿ ಸ್ವತಃ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ ವ್ಯಂಗ್ಯವಾಡಿದರು.

ಮಣಿಪುರ ಗಲಭೆ ಖಂಡಿಸಿ ಶನಿವಾರ ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ವರ್ಷದ ಹಿಂದೆ ವಿದ್ಯಾಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಯಶ್‌ಪಾಲ್ ಸೃಷ್ಟಿಸಿದ ಹಿಜಾಬ್‌ ಗೊಂದಲದಿಂದ ಎಲ್ಲ ಜಾತಿ, ಧರ್ಮಗಳ ವಿದ್ಯಾರ್ಥಿಗಳು ಬೀದಿಗೆ ಬರುವಂತಾಯಿತು, ತರಗತಿ ವಂಚಿತರಾಗಬೇಕಾಯಿತು’ ಎಂದು ದೂರಿದರು.

‘ಗುಣಮಟ್ಟದ ಶಿಕ್ಷಣದಿಂದ ಜಾಗತಿಕವಾಗಿ ಗುರುತಿಸಿಕೊಂಡಿರುವ ಉಡುಪಿಯನ್ನು ಶಿಲಾಯುಗದತ್ತ ಕೊಂಡೊಯ್ಯಲಾಗುತ್ತಿದೆ. ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದ ವಿದ್ಯಾರ್ಥಿಗಳು ಉಡುಪಿಗೆ ಬರುತ್ತಿಲ್ಲ. ಉದ್ಯಮಿಗಳು ಕಾಲಿಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಜಿಲ್ಲೆಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ, ಉದ್ಯಮಕ್ಕೆ ತೊಂದರೆಯಾದರೆ ಯಶ್‌ಪಾಲ್ ಸುವರ್ಣ ಅವರೇ ನೇರ ಹೊಣೆ. ಉಡುಪಿ ಶಾಸಕರಿಗೆ ನೈತಿಕತೆ ಇದ್ದರೆ, ಕ್ಷೇತ್ರದ ಜನರ ಮೇಲೆ ಪ್ರೀತಿ ಇದ್ದರೆ ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ಹೆದ್ದಾರಿ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಹೋರಾಟ ಮಾಡಲಿ. ಉಡುಪಿಯ ಅಭಿವೃದ್ಧಿ, ಸಂಸ್ಕೃತಿ, ಮಮತೆ, ಪ್ರಜ್ಞೆಯ ವಿರೋಧಿಯಾಗಿ ನಡೆದುಕೊಳ್ಳಬಾರದು’ ಎಂದು ಮರೋಳಿ ಮನವಿ ಮಾಡಿದರು.

‘ಹೆಣದ ಮೇಲೂ ಬಿಜೆಪಿ ರಾಜಕೀಯ’

ಉಡುಪಿ ಕಾಲೇಜಿನಲ್ಲಿ ವಿಡಿಯೊ ಚಿತ್ರೀಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ಮುಖಂಡರು ಹೆಣದ ಮೇಲೂ ರಾಜಕೀಯ ಮಾಡುತ್ತಾರೆ. ಅದೇ ಅವರ ಕೆಲಸ. ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ಹಾಕಿದ್ದು ಕಾನೂನು ಕ್ರಮ ಜರುಗಿಸಲಿದ್ದಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದರು. ಮಂಡ್ಯ ಸಮೀಪದ ಶ್ರೀನಿವಾಸಪುರ ಗೇಟ್‌ ಬಳಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ: ದೂರು

ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಿತ್ರೀಕರಣ ಘಟನೆ ಖಂಡಿಸಿ ಈಚೆಗೆ ಎಬಿವಿಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಜಿಗರ್‌ಕೋಬ್ರಾ ಹೆಸರಿನ ಖಾತೆದಾರನ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿದ್ಯಾರ್ಥಿನಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದನ್ನು ಸಹಿಸಲಾಗದೆ ಭಯ ಹುಟ್ಟಿಸುವ, ಕೆಟ್ಟ ಹಾಗೂ ಅಶ್ಲೀಲ ಸಂದೇಶಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಲಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿ ದೂರು ನೀಡಿದ್ದು ಆರೋಪಿ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.