ADVERTISEMENT

ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ: ಧೃವ ನಾರಾಯಣ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 13:27 IST
Last Updated 11 ಮೇ 2022, 13:27 IST
ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧೃವನಾರಾಯಣ್ ಸುದ್ದಿಗೋಷ್ಠಿ ನಡೆಸಿದರು.
ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧೃವನಾರಾಯಣ್ ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ಕಾಂಗ್ರೆಸ್‌ ಪಕ್ಷ ಸಾಕಷ್ಟು ಅವಕಾಶಗಳನ್ನು ಕೊಟ್ಟರೂ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್‌ ಅವಕಾಶವಾದಿ ರಾಜಕಾರಣ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧೃವನಾರಾಯಣ್ ಟೀಕಿಸಿದರು.

ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಶಾಸಕರಾದ ಮೊದಲ ಅವಧಿಯಲ್ಲೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಸಚಿವ ಸ್ಥಾನ ಕೊಡಲಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಿಲ್ಲಲು ಕಾಂಗ್ರೆಸ್ ಬೆಂಬಲ ನೀಡಿತ್ತು. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಪ್ರಮೋದ್ ಮಧ್ವರಾಜ್‌ ಅವರಿಗೆ ಪಕ್ಷದಿಂದ ಯಾವ ಅನ್ಯಾಯವಾಗಿಲ್ಲ. ಎಲ್ಲವನ್ನೂ ಪಡೆದು ಆತುರದ ನಿರ್ಧಾರ ತೆಗೆದುಕೊಂಡು ಪಕ್ಷ ಬಿಟ್ಟುಹೋಗಿದ್ದಾರೆ ಎಂದು ದೂರಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರ ಹುದ್ದೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯ ಹುದ್ದೆಯನ್ನು ಪ್ರಮೋದ್ ಮಧ್ವರಾಜ್ ಹೇಳಿದವರಿಗೇ ನೀಡಲಾಗಿದ್ದರೂ ರಾಜೀನಾಮೆ ಪತ್ರದಲ್ಲಿ ಜಿಲ್ಲಾ ಕಾಂಗ್ರೆಸ್‌ ವಿರುದ್ಧ ಆರೋಪಗಳನ್ನು ಮಾಡಿರುವುದು ಶೋಭೆ ತರುವಂಥದ್ದಲ್ಲ ಎಂದು ಧೃವ ನಾರಾಯಣ್ ಟೀಕಿಸಿದರು.

ಬಿಜೆಪಿಗೆ ಹೋಗುವ ನೆಪ ಮುಂದಿಟ್ಟುಕೊಂಡು ಜಿಲ್ಲಾ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿದ್ದಾರೆ. ಪಕ್ಷದಿಂದ ಕಿಂಚಿತ್ತೂ ಅಗೌರವ ತೋರಿಸಿಲ್ಲ. ಎರಡು ಬಾರಿ ಶಾಸಕರಾಗಿರುವ, ಹಲವು ಹುದ್ದೆಗಳನ್ನು ನಿಭಾಯಿಸಿರುವ ವಿನಯ ಕುಮರ್ ಸೊರಕೆ ಅವರಿಗೆ ಸಮನಾಗಿ ಪ್ರಮೋದ್ ಮಧ್ವರಾಜ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ನೀಡಿದ್ದರು. ಆದರೂ ಪಕ್ಷಕ್ಕೆ ದ್ರೋಹ ಮಾಡಿರುವುದು ಖಂಡನೀಯ ಎಂದರು.

ಪ್ರಮೋದ್‌ ಅನುಪಸ್ಥಿತಿ ಪಕ್ಷಕ್ಕೆ ಹಿನ್ನಡೆಯಲ್ಲ. ಜಿಲ್ಲಾ ನಾಯಕರು, ಕಾರ್ಯಕರ್ತರು ಸಂಘಟಿತರಾಗಿ ತಳಮಟ್ಟದಿಂದ ಪಕ್ಷ ಕಟ್ಟುತ್ತೇವೆ, ಬಲವರ್ಧನೆ ಮಾಡುತ್ತೇವೆ. ಮೊದಲ ಭಾಗವಾಗಿ ಉಡುಪಿಯಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದು ಧೃವನಾರಾಯಣ್ ಹೇಳಿದರು.

ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಿಸುವುದಾಗಿ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ. ನಳಿನ್‌ ಸಮರ್ಥ ಅಧ್ಯಕ್ಷರಾಗಿದ್ದರೆ, ತಾಕತ್ತಿದ್ದರೆ ಕಳಂಕ ರಹಿತ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಬಂಧಿಸಿ ಎಂದು ಧೃವನಾರಾಯಣ್ ಸವಾಲು ಹಾಕಿದರು.

ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಅರ್ಕಾವತಿ ಡಿನೋಟಿಫಕೇಷನ್ ಪ್ರಕರಣದ ತನಿಖೆ ನಡೆಸಿಲ್ಲ ಏಕೆ ಎಂದು ಪ್ರಶ್ನಿಸಿದ ಧೃವನಾರಾಯಣ್ ಸಿದ್ದರಾಮಯ್ಯ ವಿರುದ್ಧ ಆಧಾರ ರಹಿತ ಹೇಳಿಕೆ ಖಂಡನೀಯ ಎಂದರು.

ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿಬಂದಿದ್ದಾರೆ ಎನ್ನುವ ನಳಿನ್, ಯಡಿಯೂರಪ್ಪ, ಅಮಿತ್ ಶಾ, ಜನಾರ್ದನ ರೆಡ್ಡಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಹಿಂದೆ ಹೋಗಿಬಂದಿದ್ದು ಎಲ್ಲಿಗೆ ಎಂಬುದನ್ನು ತಿಳಿಸಬೇಕು ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ, ವಿಜಯೇಂದ್ರ ಕಪ್ಪು ಹಣ ಇಟ್ಟಿದ್ದಾರೆ. ಮುಖ್ಯಮಂತ್ತಿ ಹುದ್ದೆಗೆ ₹ 2,500 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶಾಸಕ ಯತ್ನಾಳ್ ಬಹಿರಂಗವಾಗಿ ಹೇಳಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಕುಟುಕಿದರು.

ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಧರ್ಮ ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡುತ್ತಿದೆ. ಎಸ್‌ಸಿ, ಎಸ್‌ಟಿ ವರ್ಗದವರ ಬಗ್ಗೆ ಬಿಜೆಪಿಗೆ ಅನುಕಂಪವಿದ್ದರೆ ಮಂತ್ರಿ ಮಂಡದಲ್ಲಿ ಪ್ರಾತಿನಿಧ್ಯ ನೀಡಿ. ಸುಳ್ಳು ಅಂಕಿ ಅಂಶಗಳನ್ನು ನೀಡಿ ಮಂಕುಬೂದಿ ಎರಚಬೇಡಿ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿನಯಕುಮಾರ್ ಸೊರಕೆ, ಯು.ಆರ್.ಸಭಾಪತಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ವಕ್ತಾರಾದ ಭಾಸ್ಕರ ರಾವ್ ಕಿದಿಯೂರು, ಬಿಪಿನ್ ಚಂದ್ರಪಾಲ್ ನಕ್ರೆ, ದಿನಕರ ಹೇರೂರು, ವೆರೋನಿಕಾ ಕರ್ನೆಲಿಯೋ, ಹರಿಶ್ ಕಿಣಿ, ಅಬೀಬ್ ಆಲಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ.ನರಸಿಂಹಮೂರ್ತಿ, ಪ್ರಖ್ಯಾತ್‌ ಶೆಟ್ಟಿ, ದೀಪಕ್ ಕೋಟ್ಯಾನ್, ಅಣ್ಣಯ್ಯ ಸೆರಿಗಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.