ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಜರಗಿತು.
ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ‘ನಾವು ತೋರಿಸುವ ಪ್ರೀತಿ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಮತ್ತು ಸೇವೆ ಕ್ರೈಸ್ತ ಧರ್ಮದ ಮೂಲ ತತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು’ ಎಂದರು.
ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ವಿಲ್ಸನ್ ಡಿಸೋಜ ಪರಮ ಪ್ರಸಾದ ಆರಾಧನೆ ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಿದ, ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಒಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್‌ನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಬ್ಯಾಂಡ್- ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ ಮೆರವಣಿಗೆ ನಡೆಯಿತು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಧರ್ಮಗುರು ಜೆನ್ಸಿಲ್ ಆಲ್ವಾ ಪವಿತ್ರ ಬೈಬಲ್ ವಾಚನ ಮಾಡಿದರು.
ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚ್‌ಗಳಿಂದ ಸುಮಾರು 3000ಕ್ಕೂ ಅಧಿಕ ಭಕ್ತರು, 60ಕ್ಕೂ ಅಧಿಕ ಧರ್ಮ ಗುರುಗಳು, 100ಕ್ಕೂ ಅಧಿಕ ಧರ್ಮ ಭಗಿನಿಯರು ಭಾಗವಹಿಸಿದ್ದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ಲೆಸ್ಲಿ ಡಿಸೋಜ, ಆಲ್ಬನ್ ಡಿಸೋಜಾ, ಚಾರ್ಲ್ಸ್ ಮಿನೇಜಸ್, ಮೌಂಟ್ ರೋಸರಿ ಚರ್ಚಿನ ಧರ್ಮಗುರು ರೋಕ್ ಡೇಸಾ, ಸಹಾಯಕ ಧರ್ಮಗುರು ಒಲಿವರ್ ನಜ್ರೆತ್, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಸಹಾಯಕ ಧರ್ಮ ಗುರು ಪ್ರದೀಪ್ ಕಾರ್ಡೊಜಾ, ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.
ಮೌಂಟ್ ರೋಸರಿ ಚರ್ಚ್‌ನಲ್ಲಿ ನಡೆದ ಆರಾಧನೆಯ ವಿಧಿಯನ್ನು ಸಿರಿಲ್ ಲೋಬೊ ನಡೆಸಿದರು. ಪ್ರಿಯಾ ಫುರ್ಟಾಡೊ ಧನ್ಯವಾದ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.