ಉಡುಪಿ: ಕೃಷ್ಣಾಪುರ ಮಠದ ಪರ್ಯಾಯದ ಕೊನೆಯ ದಿನವಾದ ಬುಧವಾರ ಸಂಪ್ರದಾಯದಂತೆ ಪಾಕಶಾಲೆಯಲ್ಲಿ ಉಳಿಕೆಯಾದ ಆಹಾರ ಪದಾರ್ಥಗಳನ್ನು ಭಕ್ತರು ಸೂರೆ ಮಾಡಲು (ಕೊಂಡೊಯ್ಯಲು) ಅವಕಾಶ ನೀಡಲಾಯಿತು.
ಮಧ್ಯಾಹ್ನದ ಅನ್ನ ಸಂತರ್ಪಣೆ ಮುಗಿಯುತ್ತಿದ್ದಂತೆ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಗೋವಿಂದ ನಾಮ ಸ್ಮರಣೆ ಮಾಡಿ ಸೂರೆಗೈಯಲು ಅನುಮತಿ ನೀಡುತ್ತಿದ್ದಂತೆ ನೂರಾರು ಭಕ್ತರು ಪಾಕಶಾಲೆಗೆ ನುಗ್ಗಿದರು. ಕೈಗೆ ಸಿಕ್ಕಷ್ಟು ಆಹಾರ ಪದಾರ್ಥಗಳನ್ನು ಮನೆಗೆ ಹೊತ್ತೊಯ್ದರು.
ದೈತ್ಯಾಕಾರದ ಕಡಾಯಿಗಳಲ್ಲಿ ಉಳಿದಿದ್ದ ಅನ್ನ, ಸಾರು, ಹುಳಿ, ಪಾಯಸ ಸೇರಿದಂತೆ ಹಲವು ಬಗೆಯ ಭಕ್ಷ್ಯಗಳನ್ನು ಪಾತ್ರೆಗಳಲ್ಲಿ ತುಂಬಿಸಿಕೊಂಡರು. ಬಕೆಟ್, ಕ್ಯಾನ್, ಕೊಡಪಾನ ಹೀಗೆ ಕೈಗೆ ಸಿಕ್ಕ ಪಾತ್ರೆಗಳಲ್ಲಿ ಆಹಾರವನ್ನು ಕೊಂಡೊಯ್ದರು.
ಕೆಲವರು ಬಕೆಟ್‌ಗಳಿಗೆ ಹಗ್ಗಕಟ್ಟಿ ಬೃಹತ್ ಕಡಾಯಿಯೊಳಗೆ ಇಳಿಬಿಟ್ಟು ಪ್ರಸಾದವನ್ನು ಸೂರೆಮಾಡುತ್ತಿದ್ದ ದೃಶ್ಯ ಆಕರ್ಷಕವಾಗಿತ್ತು. ಮಹಿಳೆಯರು, ಮಕ್ಕಳು, ವೃದ್ಧರೂ ಕೃಷ್ಣನ ಪ್ರಸಾದ ಸೂರೆಗೈಯ್ದು ಗಮನ ಸೆಳೆದರು.
ಪ್ರತಿ ಎರಡು ವರ್ಷಕ್ಕೊಮ್ಮೆ ಹೊಸ ಪರ್ಯಾಯ ಆರಂಭವಾಗುವ ಹಿಂದಿನ ದಿನ ಉಳಿಕೆ ಆಹಾರ ‘ಸೂರೆ’ ಬಿಡುವ ಆಚರಣೆ ನಡೆದುಕೊಂಡು ಬಂದಿದೆ. ಅಂದು ಮಧ್ವಾಚಾರ್ಯರು, ಭೀಮಸೇನರು ಪ್ರಸಾದ ತಯಾರಿಸಿ ಭಕ್ತರಿಗೆ ಬಡಿಸುತ್ತಾರೆ. ಸೂರೆಗೈದ ಪ್ರಸಾದವನ್ನು ಸೇವಿಸಿದರೆ ಒಳಿತಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.
ಎರಡು ವರ್ಷ ಪರ್ಯಾಯ ಪೀಠದಲ್ಲಿರುವ ಮಠ ಎಲ್ಲವನ್ನೂ ಭಕ್ತರಿಗೆ ಬಿಟ್ಟುಹೋಗುವ ರೂಪಕವಾಗಿಯೂ ‘ಸೂರೆ‘ ಪದ್ಧತಿ ಕೃಷ್ಣಮಠದಲ್ಲಿ ಆಚರಣೆಯಲ್ಲಿದೆ.
ಸೂರೆ ಬಿಡುವಾಗ ಪಾತ್ರೆಗಳಲ್ಲಿ ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳನ್ನು ಹಾಕಲಾಗುತ್ತದೆ. ಅದೃಷ್ಟವಿದ್ದವರಿಗೆ ಕೃಷ್ಣನ ಪ್ರಸಾದದ ಜತೆಗೆ ಅಮೂಲ್ಯ ವಸ್ತುಗಳು ಸಿಗುತ್ತದೆ ಎನ್ನುತ್ತಾರೆ ಮಠದ ಸಿಬ್ಬಂದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.