ಉಡುಪಿ: ಮಾರ್ಚ್ 13ರಂದು ರಾಷ್ಟಿಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಜಿಲ್ಲೆಯ 1 ರಿಂದ 19 ವರ್ಷದೊಳಗಿನ 2,73,548 ಮಕ್ಕಳಿಗೆ ಅಲ್ಬೆಂಡ್‌ಜೊಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ಜಂತುಹುಳುಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವಿಕೆ ಹಾಗೂ ಸುಸ್ತು ಇಂತಹ ಲಕ್ಷಣಗಳು ಕಂಡುಬರುತ್ತವೆ. ಇದರಿಂದಾಗಿ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕ ಆಹಾರದ ಕೊರತೆ ಉಂಟಾಗುತ್ತಿದ್ದು, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ತೊಂದರೆ ಕಾಣಿಸಿಕೊಳ್ಳುತ್ತಿದೆ. ಅಲ್ಬೆಂಡ್‌ಜೊಲ್ ಮಾತ್ರೆ ನೀಡುವುದರಿಂದ ಜಂತುಹುಳಗಳು ನಾಶವಾಗುವುದರ ಜತೆಗೆ ಅಪೌಷ್ಟಿಕತೆ ಸಮಸ್ಯೆ ನಿವಾರಣೆಯಾಗುತ್ತದೆ.
ಜಂತುಹುಳು ಮಾತ್ರೆಯನ್ನು ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ವಸತಿಯುತ ಶಾಲೆ, ಐಟಿಐ, ನರ್ಸಿಂಗ್ ಕಾಲೇಜುಗಳ ಮೊದಲ ವರ್ಷದ ವಿದ್ಯಾರ್ಥಿಗಳು, ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಗುತ್ತದೆ. ಅಂಗನವಾಡಿ ಮಕ್ಕಳಿಗೆ ಮತ್ತು ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದೆ.
ನೈರ್ಮಲ್ಯತೆ ಕೊರತೆ ಹಾಗೂ ವೈಯಕ್ತಿಕ ಶುಚಿತ್ವದ ಕೊರತೆಯಿಂದ, ಜಂತುಹುಳ ಸೋಂಕಿನ ಮಣ್ಣು ಸ್ಪರ್ಶಿಸುವುದರಿಂದ ಜಂತುಹುಳು ಭಾದೆ ಹರಡಲಿದೆ. ಈ ಸಮಸ್ಯೆಯಿಂದ ದೂರ ಇರಲು ಉಗುರುಗಳನ್ನು ಕತ್ತರಿಸಿ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು, ಊಟ, ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಶುದ್ಧೀಕರಿಸಿದ ನೀರು ಕುಡಿಯಬೇಕು. ಹಣ್ಣು, ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುದ್ಧವಾದ ನೀರಿನಿಂದ ತೊಳೆಯಬೇಕು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.