ಉಡುಪಿ: ಉದ್ಯಾನಗಳು ಜನರ ಮನಸ್ಸಿಗೆ ಮುದ ನೀಡುವ ತಾಣಗಳು. ನಗರದ ಜಂಜಾಟದ ಬದುಕಿನ ನಡುವೆ ಅಲ್ಪ ನೆಮ್ಮದಿಯ ತಾಣ ಅರಸುವವರು ಇಲ್ಲಿಗೆ ಬರುತ್ತಾರೆ. ಆದರೆ ಸೂಕ್ತ ನಿರ್ವಹಣೆ ಇಲ್ಲದಿದ್ದರೆ ಇವುಗಳೇ ನೆಮ್ಮದಿ ಕೆಡಿಸುವ ತಾಣಗಳಾಗಿ ಪರಿವರ್ತನೆಯಾಗಬಹುದು.
ನಗರದಲ್ಲಿ ನಗರಸಭೆಯ ಅಧೀನದಲ್ಲಿ 18 ಉದ್ಯಾನಗಳಿವೆ. ಬಹುತೇಕ ಉದ್ಯಾನಗಳು ಸುಸ್ಥಿತಿಯಲ್ಲಿದ್ದರೂ ಅವುಗಳಲ್ಲಿ ಸಾಕಷ್ಟು ಮೂಲಸೌಕರ್ಯ, ನಿರ್ವಹಣೆ ಕೊರತೆ ಇದೆ ಎಂಬುದು ನಾಗರಿಕರ ಆರೋಪ.
ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್ ನಗರದ ಅತಿ ದೊಡ್ಡ ಪಾರ್ಕ್‌ಗಳಲ್ಲೊಂದು. ಅದರಲ್ಲಿ ಮಕ್ಕಳಿಗೆ ಆಡುವ ಸಲಕರಣೆಗಳು, ದೊಡ್ಡವರಿಗೆ ಜಿಮ್ ಸಲಕರಣೆ, ನಡೆಯುವ ಪಥ ಎಲ್ಲವೂ ಇದೆ ಆದರೆ ಸೂಕ್ತ ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ.
ಪಾರ್ಕ್‌ನ ಪ್ರಮುಖ ಆಕರ್ಷಣೆಯಾಗಿರುವ ರೇಡಿಯೊ ಟವರ್ ಬಳಿ ಹೋದರೆ ಬಾಟಲಿ, ಸಿಗರೇಟ್, ಗುಟ್ಕಾ ಪ್ಯಾಕೆಟ್‌ಗಳು, ಆಹಾರ ಪದಾರ್ಥಗಳನ್ನು ಕಟ್ಟಿ ತಂದಿರುವ ಪ್ಲಾಸ್ಟಿಕ್, ಕಸ ಎಲ್ಲೆಂದರಲ್ಲಿ ಬಿಸಾಡಲಾಗಿದೆ.
ಈ ಪಾರ್ಕ್‌ಗೆ ಮಧ್ಯಾಹ್ನದ ಹೊತ್ತು ಆಹಾರವನ್ನು ಪಾರ್ಸೆಲ್ ತಂದು ಊಟ ಮಾಡುವವರಿದ್ದಾರೆ. ಆದರೆ ಅವರು ಊಟ ಕಟ್ಟಿತರುವ ಪ್ಲಾಸ್ಟಿಕ್ ಚೀಲಗಳನ್ನು ಕಸದ ಡಬ್ಬಗಳಿಗೆ ಹಾಕುವುದಿಲ್ಲ. ಬದಲಾಗಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಕಸ ಸಂಗ್ರಹವಾಗುತ್ತಿದೆ.
ಇನ್ನು ಕೆಳಭಾಗದಲ್ಲಿರುವ ನಡಿಗೆ ಪಥಕ್ಕೆ ಬಂದರೆ ಕಾಲಿಗೆ ತಾಗುವಷ್ಟು ಎತ್ತರದಲ್ಲಿ ವಿದ್ಯುತ್ ದೀಪದ ಫ್ಯೂಸ್ ಬಾಕ್ಸ್ ತೆರೆದ ಸ್ಥಿತಿಯಲ್ಲಿದೆ. ನಡೆದಾಡುವಾಗ ಕಾಲು ಈ ಬಾಕ್ಸ್‌ನಲ್ಲಿರುವ ವೈರ್‌ಗಳಿಗೆ ತಾಗಿದರೆ ಅಪಾಯ ತಪ್ಪಿದ್ದಲ್ಲ.
ಭುಜಂಗ ಪಾರ್ಕ್‌ನಲ್ಲಿರುವ ಮಕ್ಕಳ ಆಟಿಕೆ ಸಲಕರಣೆಗಳ ಕಡೆಗೆ ಪ್ರವೇಶಿಸುವಲ್ಲಿ ಪ್ರವೇಶ ಗೋಪುರದ ಬಹುತೇಕ ಹೆಂಚುಗಳು ಉದುರಿಹೋಗಿದ್ದು, ಕೆಲವು ನೇತಾಡುತ್ತಿವೆ. ಮಕ್ಕಳು ನಡೆದಾಡುವಾಗ ಹೆಂಚುಗಳು ಉದುರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಅಲ್ಲೇ ಪಕ್ಕದಲ್ಲಿ ನೀರಿನ ಟ್ಯಾಂಕ್‌ವೊಂದು ಮರ ಬಿದ್ದಿರುವ ಪರಿಣಾಮವಾಗಿ ಹಲವು ತಿಂಗಳಿನಿಂದ ಮುರಿದು ಹೋಗಿರುವ ಸ್ಥಿತಿಯಲ್ಲೇ ಇದೆ. ಅದರ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಿಲ್ಲ.
ಇನ್ನು ಮಕ್ಕಳ ಉದ್ಯಾನಗಳನ್ನು ಕಾಡುವ ದೊಡ್ಡ ಸಮಸ್ಯೆ ಎಂದರೆ, ಮಕ್ಕಳಿಗೆ ಆಟವಾಡಲು ಅಳವಡಿಸಿರುವ ಉಪಕರಣಗಳಲ್ಲಿ ದೊಡ್ಡವರೂ ಕೂತು ಮುರಿದು ಹಾಕುತ್ತಾರೆ. ಇವುಗಳ ಮೇಲ್ವಿಚಾರಣೆ ನಡೆಸುವವರು ಎಲ್ಲೂ ಕಂಡು ಬರವುದಿಲ್ಲ. ಬಹುತೇಕ ಪಾರ್ಕ್‌ಗಳಲ್ಲೂ ಇದೇ ಸ್ಥಿತಿ ಇದೆ.
ಭುಜಂಗ ಪಾರ್ಕ್‌ನಲ್ಲಿರುವ ಸೇತುವೆಯ ಕೆಳಗಿನ ಕೊಳದಲ್ಲಿರುವ ನೀರು ಪಾಚಿಕಟ್ಟಿ ಹಸಿರು ಬಣ್ಣಕ್ಕೆ ತಿರುಗಿದೆ. ಇದು ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುತ್ತಿದೆ.
ಈ ಪಾರ್ಕ್‌ಗೆ ಹಿರಿಯ ನಾಗರಿಕರು ಮಕ್ಕಳು ಸೇರಿದಂತೆ ದಿನ ಇತ್ಯ ಸಾಕಷ್ಟು ಸಂಖ್ಯೆಯಲ್ಲಿ ನಾಗರಿಕರು ಭೇಟಿ ನೀಡುತ್ತಾರೆ. ಸಾಕಷ್ಟು ಮೇಲ್ವಿಚಾರಕರನ್ನು ನೇಮಿಸಿದರಷ್ಟೇ ಉದ್ಯಾನವನ್ನು ಸುಸ್ಥಿತಿಯಲ್ಲಿರಿಸಬಹುದು ಎನ್ನುತ್ತಾರೆ ನಡಿಗೆದಾರರು.
ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ಬಾಲಭವನದ ಪಕ್ಕದಲ್ಲೇ ಇರುವ ಉದ್ಯಾನದಲ್ಲಿ ಮಕ್ಕಳಿಗೆ ಆಟವಾಡಲು ಸಾಕಷ್ಟು ಉಪಕರಣಗಳಿದ್ದರೂ ಅವುಗಳು ಬಣ್ಣ ಮಾಸಿ, ತುಕ್ಕು ಹಿಡಿದಿವೆ.
ಕೆಲವು ಉದ್ಯಾನಗಳಲ್ಲಿ ಹುಲ್ಲು ಬೆಳೆದು ನಡೆಯುವವರಿಗೆ ಹಾವಿನ ಭಯ ಕಾಡುತ್ತದೆ. ಹೆಚ್ಚಿನ ಉದ್ಯಾನಗಳಲ್ಲಿ ಶೌಚಾಲಯ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ದೂರುತ್ತಾರೆ ಜನರು.
ಕೆಲವು ಉದ್ಯಾನಗಳ ಉಪಕರಣಗಳನ್ನು ಕಿಡಿಗೇಡಿಗಳು ಮುರಿದು ಹಾಕುತ್ತಿದ್ದಾರೆ. ಉದ್ಯಾನಗಳಲ್ಲಿ ಅನುಚಿತವಾಗಿ ವರ್ತನೆ ಮಾಡುವವರ ಮೇಲೆ ನಿಗಾ ಇರಿಸಲು ಹೆಚ್ಚಿನ ಕಾವಲು ಸಿಬ್ಬಂದಿಯನ್ನು ನೇಮಕ ಮಾಡಬೇಕುಸೋಮಶೇಖರ್ ನಾಗರಿಕ
ನಗರಸಭೆ ಅಧೀನದಲ್ಲಿರುವ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಮತ್ತು ಮೇಲ್ವಿಚಾರಕರನ್ನು ನೇಮಿಸಬೇಕುಉಮೇಶ್ ಶೆಟ್ಟಿ ನಾಗರಿಕ
ಪಡುಬಿದ್ರಿ: ಕಾಪು ತಾಲ್ಲೂಕಿನಲ್ಲಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಇದ್ದರೂ ಉದ್ಯಾನಗಳು ಕೂಡ ಬೇಕು ಎಂಬುದು ಬಹುಕಾಲದ ಬೇಡಿಕೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಪೈಕಿ ಕಾಪು ಪಟ್ಟಣ ಪಡುಬಿದ್ರಿ ಶಿರ್ವ ಕಟಪಾಡಿ ಪ್ರಮುಖವಾದುದು. ಇಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಉದ್ಯಾನ ಮಕ್ಕಳ ಆಟಿಕೆ ಸಲಕರಣೆಗಳಿರುವ ಉದ್ಯಾನ ನಡಿಗೆ ಪಥ ಶೌಚಾಲಯಗಳು ಬೇಕು ಎಂದು ಜನರು ಆಗ್ರಹಿಸಿದ್ದಾರೆ. ತಾಲ್ಲೂಕು ಕೇಂದ್ರವಾಗಿರುವ ಕಾಪುವಿನಲ್ಲಿ ಸಮರ್ಪಕವಾದ ಸರ್ಕಾರಿ ಸ್ಥಳಗಳೇ ಇಲ್ಲದೆ ಇರುವುದರಿಂದ ಖಾಸಗಿ ಸ್ಥಳವನ್ನು ಪಡೆದು ಉದ್ಯಾನ ನಿರ್ಮಾಣ ಮಾಡಬೇಕು ಎಂದೂ ಒತ್ತಾಯಿಸುತ್ತಾರೆ. ಪಡುಬಿದ್ರಿಯಲ್ಲಿ ಇರುವ ಸರ್ಕಾರಿ ಜಾಗ ಬಳಸಿಕೊಂಡು ಉದ್ಯಾನ ಮಾಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ನಗರದ ಬಹುತೇಕ ಉದ್ಯಾನಗಳಲ್ಲೂ ನಿರ್ವಹಣೆ ಕೊರತೆ ಇದೆ. ಅವುಗಳ ನಿರ್ವಹಣೆಗೆ ನಗರಸಭೆಯವರು ಹೆಚ್ಚಿನ ಒತ್ತು ನೀಡಬೇಕು. ಮೂಲಸೌಕರ್ಯ ಇಲ್ಲದ ಕಡೆ ಮೂಲ ಸೌಕರ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು –ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ಮಕ್ಕಳು ಆಟವಾಡುವಲ್ಲಿ ಅಪಾಯಕರವಾಗಿರುವ ಪ್ರವೇಶ ದ್ವಾರದ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಜನರು ಕಸ ಎಸೆಯದಂತೆ ನಿಗಾ ವಹಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಸಿಬ್ಬಂದಿಗೆ ಸೂಚಿಸಲಾಗುವುದು–ರಾಯಪ್ಪ ನಗರಸಭೆ ಪೌರಾಯುಕ್ತ
ಪೂರಕ ಮಾಹಿತಿ: ಹಮೀದ್ ಪಡುಬಿದ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.