ಉಡುಪಿ: ಪ್ರತಿವರ್ಷ ಮಳೆಗಾಲ ಬಂದರೆ ಕರಾವಳಿಯಲ್ಲಿ ‘ಕಾಲುಸಂಕದ ಸಂಕಟ’ ತಪ್ಪುವುದಿಲ್ಲ. ಈ ವರ್ಷವೂ ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆ ಗ್ರಾಮದ ಮತ್ತಾವು ಗ್ರಾಮಸ್ಥರು ಸಂಕದ ಸಂಕಟ ಎದುರಿಸಲೇಬೇಕು. ಜೀವಪಣಕ್ಕಿಟ್ಟು ಸಂಕದ ಸಾಗಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಕುತ್ತು ತಪ್ಪಿದ್ದಲ್ಲ.
ನಕ್ಸಲ್ ಪೀಡಿತ ಹಾಗೂ ತೀರಾ ಹಿಂದುಳಿದ ಗ್ರಾಮವಾದ ಮತ್ತಾವಿನಲ್ಲಿ 40 ಮಲೆಕುಡಿಯ ಕುಟುಂಬಗಳು ವಾಸವಾಗಿವೆ. ಈ ಗ್ರಾಮದ ಜನರು ಮುನಿಯಾಲು, ಮುದ್ರಾಡಿ, ಹೆಬ್ರಿ ಹಾಗೂ ಕಾರ್ಕಳಕ್ಕೆ ಬರಬೇಕಾದರೆ ಮತ್ತಾವು ಕಾಲುಸಂಕ ದಾಟಿಯೇ ಬರಬೇಕು. ಪ್ರತಿ ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಮತ್ತಾವು ಕಾಲಸಂಕ ದುಸ್ವಪ್ನವಾಗಿ ಕಾಡುತ್ತದೆ.
ಹೊಸ ಸಂಕ ನಿರ್ಮಾಣ:ಮಳೆಗಾಲ ಆರಂಭಕ್ಕೂ ಮುನ್ನ ಮತ್ತಾವು ಗ್ರಾಮಸ್ಥರೆಲ್ಲ ಸೇರಿ ಅಡಿಕೆ ಮರಗಳನ್ನು ಹಳ್ಳಕ್ಕೆ ಅಡ್ಡಲಾಗಿ ಕಟ್ಟಿ ತಾತ್ಕಾಲಿಕ ಸಂಕ ನಿರ್ಮಿಸಿಕೊಳ್ಳುತ್ತಾರೆ. ಪ್ರತಿವರ್ಷವೂ ಈ ಕಾಯಕ ತಪ್ಪಿದ್ದಲ್ಲ. ಜತೆಗೆ, ನೀರಿನ ಹರಿವು ಹೆಚ್ಚಾಗುವ ಮುನ್ನವೇ ದ್ವಿಚಕ್ರ ವಾಹನಗಳನ್ನೆಲ್ಲ ಕಾಲುಸಂಕ ದಾಟಿಸಿ ಬಯಲು ಪ್ರದೇಶದಲ್ಲಿ ನಿಲ್ಲಿಸುತ್ತಾರೆ.
ಮಳೆಗಾಲದಲ್ಲಿ ಬೈಕ್‌ಗಳನ್ನು ಸಂಕ ದಾಟಿಸಿಕೊಂಡು ಗ್ರಾಮದೊಳಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ ಹಾಗೂ ನಿತ್ಯದ ಪೇಟೆ ಕೆಲಸಗಳಿಗೆ ಓಡಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ವಾಹನಗಳನ್ನು ಸಂಕದ ಹೊರಗೆಯೇ ನಿಲ್ಲಿಸುತ್ತಾರೆ. ಅಗತ್ಯ ವಸ್ತುಗಳನ್ನು ಖರೀದಿಸಿ ಗ್ರಾಮಕ್ಕೆ ಐದಾರು ಕಿ.ಮೀ ನಡೆದುಕೊಂಡೇ ಸಾಗುತ್ತಾರೆ.
ಸಂಕಕ್ಕೆ ಹೆದರಿ ಹಾಸ್ಟೆಲ್ ಸೇರಿಸಿದರು:ಸಂಕಕ್ಕೊಂದು ಸೇತುವೆ ಕಟ್ಟಿಕೊಡಿ ಎಂಬ ಮೂರು ದಶಕಗಳ ಕೂಗಿಗೆ ಸ್ಪಂದನ ದೊರೆತಿಲ್ಲ. ಚುನಾವಣೆ ಬಂದಾಗ ಮುನ್ನಲೆಗೆ ಬರುವ ಸೇತುವೆ ನಿರ್ಮಾಣ ವಿಚಾರ, ನಂತರ ಹಿನ್ನಲೆಗೆ ಸರಿದುಬಿಡುತ್ತದೆ. ಮಳೆಗಾಲದಲ್ಲಿ ಸಂಕ ದಾಟುವಾಗ ಮಕ್ಕಳ ಜೀವಕ್ಕೆ ಕುತ್ತಾಗಬಹುದು ಎಂಬ ಭಯದಿಂದ ಗ್ರಾಮಸ್ಥರು ಮಕ್ಕಳನ್ನು ನಗರಗಳಲ್ಲಿರುವ ಹಾಸ್ಟೆಲ್‌ಗಳಿಗೆ ಸೇರಿಸುತ್ತಿದ್ದಾರೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರಾದ ಶ್ರೀಕರ ಭಾರಧ್ವಾಜ್.
ಕಾಲುಸಂಕ ನಿರ್ಮಾಣ ಬೇಡಿಕೆ 3 ದಶಕಗಳಷ್ಟು ಹಳೆಯದು. ಸೇತುವೆಗೆ ಅನುದಾನ ಬಿಡುಗಡೆಯಾಗಿದ್ದರೂ ಅರಣ್ಯೋತ್ಪನ್ನ ಕಳ್ಳಸಾಗಣೆ ಭಯದಿಂದ ಅರಣ್ಯ ಇಲಾಖೆ ಒಪ್ಪಿಗೆ ನೀಡಿಲ್ಲ. ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸಲು ದಟ್ಟ ಅರಣ್ಯವನ್ನೇ ಕೊರೆದು ಆಗುಂಬೆ ಘಾಟಿ ನಿರ್ಮಿಸಲಾಗಿದೆ. ಆಗ ಅಡ್ಡಿಯಾಗದ ನಿಯಮಗಳು ಚಿಕ್ಕ ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗುತ್ತವೆಯೇ.
ಅಷ್ಟಕ್ಕೂ ಗ್ರಾಮಸ್ಥರು ದೊಡ್ಡ ಸೇತುವೆ ನಿರ್ಮಿಸಿಕೊಡಿ ಎಂದು ಕೇಳುತ್ತಿಲ್ಲ. ವೃದ್ಧರು, ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದರೆ, ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ರಿಕ್ಷಾ ಸಾಗುವಷ್ಟು ಗಾತ್ರದ ಸೇತುವೆ ನಿರ್ಮಿಸಿದರೂ ಸಾಕು ಎನ್ನುತ್ತಾರೆ ಶ್ರೀಕರ ಭಾರಧ್ವಾಜ್.
‘₹ 2 ಕೋಟಿ ಬಿಡುಗಡೆ’
ಮತ್ತಾವು ಕಾಲುಸಂಕ ನಿರ್ಮಾಣಕ್ಕೆ ಸರ್ಕಾರದಿಂದ ₹ 2 ಕೋಟಿ ಬಿಡುಗಡೆಯಾಗಿದೆ. ಆದರೆ, ಅಭಯಾರಣ್ಯ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿಗೆ ಅನುಮತಿ ನೀಡುತ್ತಿಲ್ಲ. ಹಾಗಾಗಿ, ರಾಜ್ಯಮಟ್ಟದ ಸಮಿತಿಯಲ್ಲಿ ಕಾಮಗಾರಿಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಸಿಕ್ಕ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.