ಉಡುಪಿ: ಕೃಷ್ಣಾಪುರ ಮಠದ ಪರ್ಯಾಯದ ಅವಧಿಯಲ್ಲಿ ಕೃಷ್ಣನಿಗೆ ನಿತ್ಯ ತುಳಸಿ ಅರ್ಚನೆ ಹಾಗೂ ನಿರಂತರ ಭಜನಾ ಕಾರ್ಯಕ್ರಮ ಮಾಡುವ ಸಂಕಲ್ಪ ಮಾಡಿರುವುದಾಗಿ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಘೋಷಿಸಿದರು.
ಮಂಗಳವಾರ ಬೆಳಿಗ್ಗೆ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಹಿಂದೆ ಪಲಿಮಾರು ಮಠದ ಶ್ರೀಗಳು ನಡೆಸಿದಂತೆ ತುಳಸಿ ಅರ್ಚನೆ, ಭಜನಾ ಕಾರ್ಯಕ್ರಮವನ್ನು ಪರ್ಯಾಯದ ಅವಧಿಯಲ್ಲಿ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿ, ಈ ಕಾರ್ಯಕ್ಕೆ ಭಕ್ತರ ಸಹಕಾರ ಅಗತ್ಯ ಎಂದರು.
ಕೃಷ್ಣನ ಏಕಾಂತ ಭಕ್ತರಾಗಿರುವ ಮಧ್ವಾಚಾರ್ಯರು ಹಾಗೂ ವಾದಿಚಾರ್ಯರ ಮೂಲಕ ಭಕ್ತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರೆ ದೇವರು ಖಂಡಿತ ಈಡೇರುಸುತ್ತಾನೆ. ಪರ್ಯಾಯದ ಅವಧಿಯಲ್ಲಿ ನನ್ನದು ಎಂಬ ಭಾವ ತೋರದೆ ಎಲ್ಲರದ್ದು ಎಂಬ ಭಾವದಿಂದ ಭಗವಂತನ ಸೇವೆ ಮಾಡುವುದಾಗಿ ಶ್ರೀಗಳು ಹೇಳಿದರು.
ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಕೃಷ್ಣಾಪುರ ಮಠದ ಪರ್ಯಾಯಕ್ಕೆ ಭಕ್ತರು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದನ್ನು ಕಂಡು ಅಚ್ಚರಿಯಾಗಿದೆ. ಭಕ್ತರು ಮಠದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುವುದಾಗಿ ಪರ್ಯಾಯ ಸ್ವಾಮೀಜಿ ಹೇಳಿದರು.
ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಮಾತನಾಡಿ, ಪರ್ಯಾಯ ಪೂಜಾ ಅಧಿಕಾರ ಸೊಬಗನ್ನು ಪ್ರಪಂಚದ ಎಲ್ಲೂ ನೋಡಲು ಸಾಧ್ಯವಿಲ್ಲ. ಉಡುಪಿಯ ಕೃಷ್ಣಮಠದಲ್ಲಿ ಮಾತ್ರ ಕಣ್ತುಂಬಿಕೊಳ್ಳಬಹುದು ಎಂದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಕೃಷ್ಣನ ಸಂಸ್ಕೃತಿ ಮರೆಯಾಗುತ್ತಿದ್ದು, ಜರಾಸಂಧ, ನರಕಾಸುರನ ಸಂಸ್ಕೃತಿ ಹೆಚ್ಚಾಗುತ್ತಿದೆ. ಕಂಡದೆಲ್ಲವೂ ಬೇಕು ಎಂಬ ದುರಾಸೆ ಹೆಚ್ಚಾಗುತ್ತಿದೆ. ಲೋಕಕ್ಕೆ ಶ್ರೇಯಸ್ಸಾಗಬೇಕಾದರೆ, ಸುಖ, ಶಾಂತಿ, ನೆಮ್ಮದಿ ಬೇಕಾದರೆ ಕೃಷ್ಣನ ಆರಾಧನೆ ಅಗತ್ಯ ಎಂದರು.
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ‘ಲೋಕದಲ್ಲಿರುವ ವಸ್ತುಗಳೆಲ್ಲ ಅಶಾಶ್ವತವಾಗಿದ್ದು, ಅವುಗಳ ಮೇಲಿನ ಮೋಹ ಬಿಟ್ಟು, ಭಗವಂತನ ಭಕ್ತಿಯಲ್ಲಿ ತಲ್ಲೀನರಾಗಿ ಜ್ಞಾನ, ಮೋಕ್ಷ, ಮುಕ್ತಿ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಆಚಾರ್ಯರು ಹಾಕಿಕೊಟ್ಟ ಕ್ರಮವೇ ಪರ್ಯಾಯ’ ಎಂದರು.
‘ಪರ್ಯಾಯದ ಅವಧಿಯಲ್ಲಿ ಎಲ್ಲಿಯೂ ನನ್ನದು ಎಂಬ ಭ್ರಮೆ ಬಾರದಿರಲಿ, ಭಗವಂತರ ಆದೇಶವಾದ ಕೂಡಲೇ ಪೀಠ ಬಿಟ್ಟುಕೊಡಬೇಕು ಎಂಬ ಪಾಠವನ್ನು ಕೃಷ್ಣ ಹೇಳಿದ್ದಾನೆ’ ಎಂದರು.
ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ‘ಪರ್ಯಾಯ ಎಂದರೆ ತ್ಯಾಗ ಹಾಗೂ ಸ್ವೀಕಾರ ಎಂದರ್ಥ. ಒಬ್ಬರಿಂದ ಸ್ವೀಕರಿಸಿದ್ದನ್ನು ಮತ್ತೊಬ್ಬರಿಗೆ ಬಿಟ್ಟುಕೊಟ್ಟು ನಾಡಿನ ಉದ್ದಕ್ಕೂ ಸಂಚರಿಸಿ ಧರ್ಮದ ಸಂದೇಶ ಸಾರುವುದೇ ಪರ್ಯಾಯದ ವೈಶಿಷ್ಟ್ಯ’ ಎಂದರು.
ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ ‘ಪ್ರಪಂಚದಲ್ಲಿ ಸ್ವಾರ್ಥಕ್ಕಾಗಿ ಅಧಿಕಾರ ಇದ್ದರೆ, ಕೃಷ್ಣಮಠದಲ್ಲಿ ಮಾತ್ರ ತ್ಯಾಗಕ್ಕಾಗಿ ಪೂಜಾಧಿಕಾರ ಲಭ್ಯವಾಗುತ್ತದೆ. ಅಧಿಕಾರಕ್ಕಾಗಿ ಚುನಾವಣೆಗಳು ನಡೆದರೆ ಕೃಷ್ಣಮಠದಲ್ಲಿ ಮಾತ್ರ ಕೃಷ್ಣ ಪೂಜಾಧಿಕಾರವು ನೀತಿ ಸಂಯಮ ಹಾಗೂ ತ್ಯಾಗದಿಂದ ಲಭ್ಯವಾಗುತ್ತದೆ’ ಎಂದರು.
ವಾರ್ಷಿಕ ಪರ್ಯಾಯ ಪಂಚಶತಮಾನೋತ್ಸವ ಸ್ಮರಣಾರ್ಥ ವಾದಿರಾಜರ ವಾಙ್ಮಯನಿಧಿ ಗ್ರಂಥವನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು. ಪಿ.ವ್ಯಾಸಾಚಾರ್ಯ ಪರವಾಗಿ ಪುತ್ರ ಪಿ.ವೃಜನಾಥ ಆಚಾರ್ಯ ಅವರಿಗೆ, ವಿದ್ವಾನ್ ಕೆ.ಹರಿದಾಸ ಉಪಾಧ್ಯಾಯ ಅವರಿಗೆ, ನೇರಂಬಳ್ಳಿ ರಾಘವೇಂದ್ರ ರಾವ್ ಅವರಿಗೆ ಪರ್ಯಾಯ ದರ್ಬಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೈಕೋರ್ಟ್ ನ್ಯಾಯಧೀಶರಾದ ದಿನೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕರ ರಘುಪತಿ ಭಟ್, ಮಾಜಿ ಸಚಿವ ವಿನಯಕುಮಾರ ಸೊರಕೆ ಇದ್ದರು. ವಾಸುದೇವ ಭಟ್ ಪೆರೆಂಪಳ್ಳಿ, ಎಂ.ಎಲ್.ಸಾಮಗ ಕಾರ್ಯಕ್ರಮ ನಿರೂಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.