ಉಡುಪಿ: ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿಗಳ ದರ ತುಸು ಇಳಿಕೆಯಾದರೂ ಹಣ್ಣು – ಹಂಪಲುಗಳ ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಏಲಕ್ಕಿ ಬಾಳೆ ಹಣ್ಣಿನ ದರ ಕೆ.ಜಿ.ಗೆ ₹90 ಆಗಿದೆ. ಕಳೆದ ವಾರ ₹70 ಇತ್ತು. ಕೆ.ಜಿ.ಗೆ ₹60 ಇದ್ದ ನೇಂದ್ರ ಬಾಳೆಹಣ್ಣಿನ ದರ ₹70ಕ್ಕೆ ಏರಿಕೆಯಾಗಿದೆ.
ಕರಾವಳಿ ಭಾಗದಲ್ಲಿ ಏಲಕ್ಕಿ ಬಾಳೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಪೂಜೆ ಮೊದಲಾದ ಕಾರ್ಯಕ್ರಮಗಳಿಗೆ ಈ ಬಾಳೆಹಣ್ಣನ್ನು ಬಳಸುತ್ತಿದ್ದಾರೆ. ಇದರಿಂದಾಗಿ ದರ ಏರಿಕೆಯಾದರೂ ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಗ್ರಾಹಕರದ್ದಾಗಿದೆ.
ಸೇಬು ದರ ಸ್ಥಿರವಾಗಿದ್ದು, ಕೆ.ಜಿ.ಗೆ ₹180ರಿಂದ ₹200 ಇದೆ. ಆದರೆ ಮಲ್ಲಿಕಾ ತಳಿಯ ಮಾವಿನ ಹಣ್ಣಿನ ದರ ಕೆ.ಜಿಗೆ ₹180ಕ್ಕೇರಿದೆ. ಕಳೆದ ವಾರ ₹160ರ ಆಸುಪಾಸು ಇತ್ತು. ನೀಲಂ ಮಾವಿನ ಹಣ್ಣಿನ ಬೆಲೆ ₹110ಕ್ಕೆ ಏರಿಕೆಯಾಗಿದೆ. ಕಳೆದ ವಾರ ₹80 ಇತ್ತು.
ಕೆ.ಜಿ.ಗೆ ₹400 ಇದ್ದ ರಂಬುಟಾನ್‌ಗೆ ₹440ಕ್ಕೆ ಏರಿಕೆಯಾಗಿದೆ. ಕಿವಿ ಹಣ್ಣಿನ ಒಂದು ಬಾಕ್ಸ್‌ನ ದರ ₹140 ಆಗಿದೆ. ಕಳೆದ ವಾರ ಇದರ ಬೆಲೆ ₹100 ಇತ್ತು. ಅದೇ ರೀತಿ ಪಪ್ಪಾಯ ಹಣ್ಣಿನ ದರ ಕೆ.ಜಿ.ಗೆ ₹40 ಇದ್ದದ್ದು, ₹50ಕ್ಕೆ ಏರಿಕೆಯಾಗಿದೆ.
‘ಬಹುತೇಕ ಹಣ್ಣುಗಳ ದರ ಏರಿಕೆಯಾಗಿದೆ. ಆದರೆ ಡ್ರ್ಯಾಗನ್ ಫ್ರೂಟ್ ಮತ್ತು ಪೇರಳೆಯ ದರ ಇಳಿಕೆಯಾಗಿದೆ. ಕಳೆದ ವಾರ ಕೆ.ಜಿ.ಗೆ ₹200 ಇದ್ದ ಡ್ರ್ಯಾಗನ್ ಫ್ರೂಟ್ ದರ ₹100ಕ್ಕೆ ಇಳಿಕೆಯಾಗಿದೆ. ಕೆ.ಜಿ.ಗೆ ₹160 ಇದ್ದ ಪೇರಳೆ ಹಣ್ಣಿನ ದರ ₹140ಕ್ಕೆ ಇಳಿದಿದೆ’ ಎಂದು ಹಣ್ಣಿನ ವ್ಯಾಪಾರಿ ಸಾದಿಕ್ ತಿಳಿಸಿದರು.
ಕಳೆದೊಂದು ವಾರದಿಂದ ಎಲ್ಲೆಡೆ ಮಳೆ ಬಿರುಸುಗೊಂಡಿದ್ದರೂ ಕೆಲವು ತರಕಾರಿಗಳ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಅಲ್ಪ ಸಮಾಧಾನ ತಂದಿದೆ. ಕಳೆದ ವಾರ ಕೆ.ಜಿ.ಗೆ ₹60 ಇದ್ದ ಬೀನ್ಸ್ ದರ ₹50ಕ್ಕೆ ಇಳಿಕೆಯಾಗಿದೆ. ಕೆ.ಜಿ.ಗೆ ₹60 ಇದ್ದ ಅಲಸಂಡೆ ದರ ₹50ಕ್ಕೆ, ಕೆ.ಜಿ.ಗೆ ₹120 ಇದ್ದ ದೀವಿ ಹಲಸು ಬೆಲೆ ₹100ಕ್ಕೆ ಹಾಗೂ ಕೆ.ಜಿ.ಗೆ ₹45 ಇದ್ದ ಕ್ಯಾಬೇಜ್ ದರ ₹40ಕ್ಕೆ ಇಳಿಕೆಯಾಗಿದೆ. ಸೊಪ್ಪುಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಟೊಮ್ಯಾಟೊ ದರ ಕಳೆದ ವಾರ ಕೆ.ಜಿ.ಗೆ ₹60 ಇದ್ದದ್ದು, ₹70ಕ್ಕೆ ಏರಿಕೆಯಾಗಿದೆ.
‘ಕಳೆದ ವಾರ ಅತಿಯಾದ ಮಳೆಯಿಂದಾಗಿ ಆವಕ ಕುಸಿತ ಕಂಡಿತ್ತು ಇದರಿಂದಾಗಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ತರಕಾರಿಗಳ ದರ ಏರಿಕೆಯಾಗಿತ್ತು. ಇದರಿಂದ ತರಕಾರಿ ಕೊಂಡುಕೊಳ್ಳಲು ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿತ್ತು. ಈಗ ಕೆಲವು ತರಕಾರಿಗಳ ದರ ಇಳಿಕೆಯಾಗಿದೆ’ ಎಂದು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿಯ ತರಕಾರಿ ವ್ಯಾಪಾರಿ ಆನಂದ್ ತಿಳಿಸಿದರು.
ಮಳೆ ಜಾಸ್ತಿ ಆಗಿರುವುದರಿಂದ ಹಣ್ಣು–ಹಂಪಲುಗಳ ದರ ಏರಿಕೆಯಾಗಿದೆ. ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂತು ಮತ್ತು ಹಣ್ಣಿನ ಪೂರೈಕೆ ಕಡಿಮೆಯಾಗಿರುವುದರಿಂದ ದರ ಏರಿಕೆಯಾಗಿದೆಸಾದಿಕ್, ಹಣ್ಣಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.