ADVERTISEMENT

ಉಡುಪಿ: ಹಾವಿನ ಕಡಿತ- ಎಚ್ಚರ ತಪ್ಪಿದರೆ ಅಪಾಯ

ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕೆಲಸ ಮಾಡುವವರು ಕಡಿತಕ್ಕೊಳಗಾಗುವ ಸಾಧ್ಯತೆ ಹೆಚ್ಚು

ನವೀನ ಕುಮಾರ್ ಜಿ.
Published 12 ಜುಲೈ 2024, 7:52 IST
Last Updated 12 ಜುಲೈ 2024, 7:52 IST
ನಾಗರ ಹಾವು
ನಾಗರ ಹಾವು   

ಉಡುಪಿ: ಮಳೆಗಾಲ ಬಂತೆಂದರೆ ಕುರುಚಲು ಕಾಡು, ಗಿಡಗಂಟಿಗಳ ಮಧ್ಯೆ ಆವಾಸಸ್ಥಾನ ಮಾಡಿಕೊಂಡಿರುವ ಸರೀಸೃಪಗಳು ಹೆಚ್ಚಾಗಿ ಜನವಸತಿ ಪ್ರದೇಶಗಳತ್ತ ಬರುತ್ತವೆ.

ಜೋರು ಮಳೆ ಬಂದು ಪ್ರವಾಹ ಬಂದಾಗ ಅದರಲ್ಲಿ ತೇಲಿ ಬರುವ ಹಾವುಗಳೂ ಕೂಡ ಬೆಚ್ಚನೆಯ ಜಾಗ ಹುಡುಕಿ ಜನರು ವಾಸಿಸುವ ಸ್ಥಳಗಳತ್ತ ನುಗ್ಗುತ್ತವೆ. ತೋಟ, ಗದ್ದೆಗಳಲ್ಲಿ ಕೆಲಸ ಮಾಡುವವರು, ಹುಲ್ಲಿನ ಪ್ರದೇಶಗಳಲ್ಲಿ ನಡೆದಾಡುವವರು ಎಚ್ಚರ ವಹಿಸದಿದ್ದರೆ ಹಾವುಗಳ ಕಡಿತಕ್ಕೊಳಗಾಗುವ ಸಾಧ್ಯತೆ ಹೆಚ್ಚು. ಹಾವಿನ ಕಡಿತ ಪ್ರಕರಣಗಳು ಮಳೆಗಾಲದಲ್ಲೇ ಹೆಚ್ಚಾಗಿ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 151 ಹಾವಿನ ಕಡಿತದ ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ ಜಿಲ್ಲಾಧಿಕಾರಿ ಕಚೇರಿ ಮೂಲಗಳು.

ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಹಾವಿನ ಕಡಿತಕ್ಕೊಳಗಾದ 26 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಅನೇಕ ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಾವಿನ ಕಡಿತಕ್ಕೊಳಗಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಿಂದ ಇಂತಹ ವ್ಯಕ್ತಿಗಳನ್ನು ದೂರದ ಆಸ್ಪತ್ರೆಗೆ ಕರೆದೊಯ್ಯುವಾಗ ತಡವಾದರೆ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳೂ ಇವೆ. ಹಾವಿನ ಕಡಿತಕ್ಕೊಳಗಾಗಿಯೂ ಅದನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಪ್ರವಾಹ ಬರುವ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗುವ ನೆರೆ ನೀರಿನ ಜೊತೆ ಹಾವು‌ಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಮನೆಗಳಲ್ಲಿ ನೆರೆ ನೀರು ಇಳಿಕೆಯಾದ ಮೇಲೆ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಎಲ್ಲಾ ಕಡೆ ಪರಿಶೀಲಿಸಬೇಕು ಎನ್ನುತ್ತಾರೆ ಉರಗ ತಜ್ಞ ಗುರುರಾಜ್‌ ಸನಿಲ್‌.

ADVERTISEMENT

ಉಡುಪಿ ಪ್ರದೇಶದಲ್ಲಿ ನಾಗರ ಹಾವು, ಕನ್ನಡಿ ಹಾವುಗಳ (ಕೊಳಕು ಮಂಡಲ) ಕಡಿತಕ್ಕೊಳಗಾಗುವ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತವೆ. ಹಾವುಗಳು ಮಳೆಯಲ್ಲಿ ಹೊರಗೆ ಬರುವುದಿಲ್ಲ. ಮಳೆ ನಿಂತ ಮೇಲೆ ಬೆಚ್ಚಗಿನ ಜಾಗ ಹುಡುಕಿ ಹೊರಗೆ ಬರುತ್ತವೆ ಎನ್ನುತ್ತಾರೆ ಅವರು.

ಮನುಷ್ಯರು ಹಾವಿಗೆ ಮೆಟ್ಟಿದಾಗ ಅದು ಮೊದಲ ಸಲ ಕಚ್ಚಿದಾಗ ಸಣ್ಣ ಪ್ರಮಾಣದಲ್ಲಿ ವಿಷವನ್ನು ಬಿಡುಗಡೆಗೊಳಿಸುತ್ತದೆ. ಎರಡನೇ ಬಾರಿ ಕಚ್ಚಿದರೆ ವಿಷದ ಪ್ರಮಾಣವು ಅಧಿಕವಾಗಿರುತ್ತದೆ. ಆದ್ದರಿಂದ ಎರಡನೇ ಬಾರಿಯ ಕಡಿತ ಮಾರಣಾಂತಿಕವಾಗಬಹುದು ಎಂದೂ ಅವರು ತಿಳಿಸಿದರು.

ನಾಗರ ಹಾವು ಮತ್ತು ಕಡಂಬಳ ಹಾವು ಹೆಚ್ಚಾಗಿ ಮನೆಗಳೊಳಗೆ ಬರುತ್ತವೆ. ಮನೆಯೊಳಗೆ ಕಸಕಡ್ಡಿಗಳಿದ್ದರೆ ಅವುಗಳಲ್ಲಿ ಬಂದು ಸೇರಿಕೊಳ್ಳುತ್ತವೆ. ಇಲಿಯನ್ನು ಹಿಡಿಯಲಿಕ್ಕೂ ಮನೆಯೊಳಗೆ ಧಾವಿಸುತ್ತವೆ. ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಹಾವುಗಳ ಕಡಿತದಿಂದ ಪಾರಾಗಬಹುದು ಎನ್ನುತ್ತಾರೆ ಅವರು.

ಅಧಿಸೂಚಿತ ರೋಗಗಳ ಪಟ್ಟಿಗೆ: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವಿನ ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಿದ್ದು, ಹಾವಿನ ಕಡಿತಕ್ಕೊಳಗಾದವರ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ ‘ಆ್ಯಂಟಿ ಸ್ನೇಕ್ ವೆನಮ್’ ಅನ್ನು ಉಚಿತವಾಗಿ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಕೆಲ ತಿಂಗಳ ಹಿಂದೆ ಸುತ್ತೋಲೆ ಹೊರಡಿಸಿತ್ತು. ಹಾವಿನ ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಲಾಗಿದ್ದು, ಇಂತಹ ಪ್ರಕರಣ ಹಾಗೂ ಮರಣವನ್ನು ಐಎಚ್‌ಐಪಿ ಪೋರ್ಟಲ್‌ನಲ್ಲಿ ವರದಿ ಮಾಡಬೇಕು ಎಂದೂ ಸುತ್ತೋಲೆಯಲ್ಲಿ ಹೇಳಲಾಗಿತ್ತು.

ಆಶಾ ಕಾರ್ಯಕರ್ತೆಯರು ಹಾವಿನ ಕಡಿತಕ್ಕೊಳಗಾದ ವ್ಯಕ್ತಿಯನ್ನು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಉಚಿತವಾಗಿ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು.

ಪ್ರತಿ ವರ್ಷ ಮಳೆಗಾಲದಲ್ಲೂ ಹಾವಿನ ಕಡಿತಕ್ಕೊಳಗಾದವರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ನಮ್ಮಲ್ಲಿ ಹಾವಿನ ಕಡಿತಕ್ಕೆ ಬಳಸುವ ಪ್ರತಿರೋಧ ಚುಚ್ಚುಮದ್ದು (ಆ್ಯಂಟಿ ಸ್ನೇಕ್ ವೆನಮ್) ದಾಸ್ತಾನಿದೆ

–ಡಾ. ಎಚ್‌.ಅಶೋಕ್ ಜಿಲ್ಲಾ ಶಸ್ತ್ರಚಿಕಿತ್ಸಕ

ನೋವಾಗದೆ ಅಥವಾ ಮನುಷ್ಯರ ಸ್ಪರ್ಶವಾಗದೆ ಯಾವುದೇ ಹಾವುಗಳು ಕಚ್ಚುವುದಿಲ್ಲ. ಮನುಷ್ಯರು ನೋಡದೆ ಮೆಟ್ಟಿದಾಗ ಅವುಗಳು ಕಚ್ಚುತ್ತವೆ. ಕೆಲವೊಮ್ಮೆ ಆಹಾರ ಎಂದು ತಿಳಿದು ಮನುಷ್ಯರ ಕಾಲುಗಳಿಗೆ ಕಾಲ ಬೆರಳುಗಳಿಗೆ ಕಚ್ಚುವ ಸಾಧ್ಯತೆ ಇರುತ್ತದೆ

–ಗುರುರಾಜ್‌ ಸನಿಲ್‌ ಉರಗ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.