ADVERTISEMENT

ಉಡುಪಿ | ಮತ್ತೆ ಬೀಚ್‌ಗಳತ್ತ ಪ್ರವಾಸಿಗರು; ಗರಿಗೆದರುತಿದೆ ಪ್ರವಾಸೋದ್ಯಮ ಚಟುವಟಿಕೆ

ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳ

ನವೀನ ಕುಮಾರ್ ಜಿ.
Published 23 ಸೆಪ್ಟೆಂಬರ್ 2024, 6:43 IST
Last Updated 23 ಸೆಪ್ಟೆಂಬರ್ 2024, 6:43 IST
ಪಡುಬಿದ್ರಿಯ ಬ್ಲೂಫ್ಲ್ಯಾಗ್‌ ಬೀಚ್‌ನ ಪ್ರವೇಶ ದ್ವಾರ
ಪಡುಬಿದ್ರಿಯ ಬ್ಲೂಫ್ಲ್ಯಾಗ್‌ ಬೀಚ್‌ನ ಪ್ರವೇಶ ದ್ವಾರ    

ಉಡುಪಿ: ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಬರುತ್ತಿದ್ದಂತೆ ಜಿಲ್ಲೆಯಲ್ಲೂ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಗರಿಗೆದರಲು ಆರಂಭಿಸಿವೆ.

ಜಿಲ್ಲೆಯ ಪ್ರಮುಖ ಬೀಚ್‌ಗಳಿಗೆ ರಜಾದಿನಗಳಂದು ಭೇಟಿ ನೀಡುವ ಪ್ರವಾಸಿಗರ, ಸ್ಥಳೀಯರ ಸಂಖ್ಯೆ ಹೆಚ್ಚಾಗುತ್ತಿದೆ. ಬೀಚ್‌ ಪರಿಸರದಲ್ಲಿ ವಾಣಿಜ್ಯ ಚಟುವಟಿಕೆಗಳು ಕೂಡ ಚುರುಕುಗೊಂಡಿವೆ.

ಬೀಚ್‌ಗಳು ಮತ್ತು ದೇವಸ್ಥಾನಗಳು ಜಿಲ್ಲೆಯಲ್ಲಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ತಾಣಗಳಾಗಿವೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜನರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆಯು ಹಲವು ಪ್ರಚಾರ ಕಾರ್ಯಗಳನ್ನೂ ನಡೆಸಿವೆ.

ADVERTISEMENT

ಮಳೆಗಾಲದಲ್ಲಿ ಜನರ ಸುರಕ್ಷತೆಯ ದೃಷ್ಟಿಯಿಂದ ಬೀಚ್‌ಗಳಿಗೆ ತೆರಳದಂತೆ ಜಿಲ್ಲಾಡಳಿತವು ನಿರ್ಬಂಧ ಹೇರುತ್ತದೆ. ಅಲ್ಲದೆ ಮಲ್ಪೆ ಸೇರಿದಂತೆ ಪ್ರಮುಖ ಬೀಚ್‌ಗಳಲ್ಲಿ ಜನರು ಸಮುದ್ರಕ್ಕಿಳಿಯದಂತೆ ತಡೆಬೇಲಿಯನ್ನೂ ಹಾಕಲಾಗುತ್ತದೆ.

ಮಲ್ಪೆ ಬೀಚ್‌ನಲ್ಲಿ ತಡೆಬೇಲಿಯನ್ನು ತೆರವುಗೊಳಿಸದಿದ್ದರೂ, ಅಲೆಗಳ ಅಬ್ಬರ ಕಡಿಮೆಯಾಗಿರುವ ಕಾರಣ ಪ್ರವಾಸಿಗರು ಸಮುದ್ರದ ಪಕ್ಕಕ್ಕೆ ತೆರಳುತ್ತಾರೆ.

ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳಿನಿಂದ ಬೀಚ್‌ಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ವಿದೇಶಿಯರು ಕೂಡ ಭೇಟಿ ನೀಡುತ್ತಾರೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆಯ ಮೂಲಗಳು.

ಬೀಚ್‌ಗಳಲ್ಲಿ ವಾಟರ್‌ ಸ್ಫೋರ್ಟ್ಸ್ ಚಟುವಟಿಕೆಗಳು ಆರಂಭವಾದರೆ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಬಹುದು ಎಂದು ತಿಳಿಸಿವೆ.

ದ್ವೀಪಕ್ಕೆ ಪ್ರವಾಸಿಗರ ದಂಡು: ಮಲ್ಪೆಯ ಸೇಂಟ್‌ ಮೇರೀಸ್‌ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ದೋಣಿ ಸೇವೆ ಆರಂಭಗೊಂಡಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ದ್ವೀಪಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಈ ದ್ವೀಪಕ್ಕೆ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.

ದೇಗುಲಗಳಿಗೂ ಭೇಟಿ: ಜಿಲ್ಲೆಯಲ್ಲಿ ಬೀಚ್‌ ಪ್ರವಾಸೋದ್ಯಮ ಮತ್ತು ದೇವಾಲಯ ಪ್ರವಾಸೋದ್ಯಮ ಪ್ರಮುಖವಾಗಿದೆ. ಕೊಲ್ಲೂರು, ಉಡುಪಿಯ ಶ್ರೀಕೃಷ್ಣ ಮಠ, ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ಹಬ್ಬದ ಋತು ಆರಂಭವಾಗುವುದರೊಂದಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಆರಂಭಿಸುತ್ತಾರೆ.

ಮೂಲಸೌಕರ್ಯಕ್ಕೆ ಕೊರತೆ: ಬೀಚ್‌ಗಳು ಸೇರಿದಂತೆ ಜಿಲ್ಲೆಯ ಹೆಚ್ಚಿನ ಪ್ರವಾಸಿ ಕೇಂದ್ರಗಳಲ್ಲಿ ಸಮರ್ಪಕ ಮೂಲಸೌಕರ್ಯಗಳ ಕೊರತೆ ಇದೆ ಎಂದು ಪ್ರವಾಸಿಗರು ದೂರುತ್ತಾರೆ.

ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ, ವಿಶ್ವನಾಥ ಆಚಾರ್ಯ

ಮಲ್ಪೆ ಬೀಚ್‌ ಪರಿಸರದಲ್ಲಿ ಗರಿಗೆದರಿದ ವಾಣಿಜ್ಯ ಚಟುವಟಿಕೆ
ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕಿಳಿದ ಪ್ರವಾಸಿಗರು
ಮಲ್ಪೆ ಬೀಚ್‌ನಿಂದ ಕಾಣುವ ಸೇಂಟ್ ಮೇರಿ ದ್ವೀಪ
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು

Highlights - null

Quote - ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಹಾಕಿರುವ ಬೇಲಿಯನ್ನು ಶೀಘ್ರ ತೆರವುಗೊಳಿಸುತ್ತೇವೆ. ಅಲ್ಲದೆ ಬೀಚ್‌ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತೇವೆ ರಾಯಪ್ಪ ಪೌರಾಯುಕ್ತ ಉಡುಪಿ ನಗರಸಭೆ

Quote - ಈಗ ಮಳೆ ಕಡಿಮೆಯಾಗಿರುವ ಕಾರಣ ಕುಟುಂಬ ಸಮೇತ ಬೀಚ್‌ಗೆ ಭೇಟಿ ನೀಡಿದ್ದೇನೆ. ರಜಾ ದಿನಗಳಲ್ಲಿ ಹೆಚ್ಚಾಗಿ ಮಲ್ಪೆ ಬೀಚ್‌ಗೆ ನಾವು ಭೇಟಿ ನೀಡುತ್ತೇವೆ ಸುಮಂತ್ ಪ್ರವಾಸಿಗ

Quote - ಸೋಮೇಶ್ವರ ಬೀಚ್ ಹಾಗೂ ದೇವಸ್ಥಾನಕ್ಕೆ ಈಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ಮೂಲಸೌಕರ್ಯಗಳ ಕಾಮಗಾರಿ ನಡೆಯುತ್ತಿದ್ದು ಅದನ್ನು ಶೀಘ್ರ ಪೂರ್ಣಗೊಳಿಸಬೇಕು ವೆಂಕಟೇಶ ಭಟ್ಟಅರ್ಚಕರು ಸೋಮೇಶ್ವರ ದೇವಸ್ಥಾನ ಪಡುವರಿ

Quote - ಸೋಮೇಶ್ವರ ಕಡಲ ತೀರವು ಪ್ರಕೃತಿಯ ಎಲ್ಲಾ ಸೊಬಗನ್ನು ಒಳಗೊಂಡಿದೆ. ನದಿ ಹಾಗೂ ಕಡಲಿನ ಸಂಗಮ ಬೃಹತ್ ಗಾತ್ರದ ಬಂಡೆಗಳು ಮನಸೆಳೆಯುತ್ತವೆ ಶಿವಾನಂದ ಶೇಟ್ ಪ್ರವಾಸಿಗ ಕುಮಟಾ

Cut-off box - ‘ಬೀಚ್‌ ಅಭಿವೃದ್ಧಿಗೆ ಪ್ರಸ್ತಾವನೆ’ ಕುಂದಾಪುರದ ಕೋಡಿ ಬೀಚ್‌ ಬಳಿ ಇನ್ನೊಂದು ಬೀಚ್ ಗುರುತಿಸಿದ್ದು ಅದನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಕಳೆದೆರಡು ವರ್ಷ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಬ್ಲಾಗರ್ಸ್‌ ಮೀಟ್‌ ಮಾಡಿದ್ದೆವು. ಈ ಬಾರಿಯೂ ಮಾಡಲಿದ್ದೇವೆ. ಬ್ಲಾಗರ್‌ಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಇನ್‌ಸ್ಟಾಗ್ರಾಂ ಖಾತೆ ಹಾಗೂ ಪೇಸ್‌ಬುಕ್‌ ಪೇಜ್‌ಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಿದ್ದಾರೆ. ಇದರಿಂದ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಸಿ.ಯು. ತಿಳಿಸಿದ್ದಾರೆ. ಮಕ್ಕಳಿಗೆ ರಜೆ ಇರುವ ಸಂದರ್ಭದಲ್ಲಿ ಹೆಚ್ಚಿನ ಜನರು ಬೀಚ್‌ಗಳಿಗೆ ಭೇಟಿ ನೀಡುತ್ತಾರೆ. ಕೊಲ್ಲೂರಿನಲ್ಲಿ ಕೊಡಚಾದ್ರಿ ಬೆಟ್ಟಕ್ಕೆ ರೋಪ್‌ ವೇ ಸ್ಥಾಪಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಈ ಯೋಜನೆ ಜಾರಿಯಾದರೆ ಈ ಕ್ಷೇತ್ರಕ್ಕೆ ಇನ್ನಷ್ಟು ಭಕ್ತರು ಭೇಟಿ ನೀಡಲಿ‌ದ್ದಾರೆ ಎಂದು ಅವರು ವಿವರಿಸಿದರು.

Cut-off box - ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕಾಪು ಬೀಚ್  ಬ್ರಿಟಿಷರ ಕಾಲದಲ್ಲಿ ಅಭಿವೃದ್ಧಿ ಪಡಿಸಿದ್ದ ಕಾಪು ಬೀಚ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿಯ ಬೃಹದಾಕಾರದ ಕರಿಬಂಡೆಯ ಮೇಲೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ದೀಪಸ್ಥಂಭ ನೋಡಲು ಮನೋಹರವಾಗಿದೆ. ಇದನ್ನು ನೋಡಲೆಂದೇ ಪ್ರವಾಸಿಗರು ಜಿಲ್ಲೆ ಮಾತ್ರವಲ್ಲದೆ ರಾಜ್ಯ ಹಾಗೂ ದೇಶ ವಿದೇಶಗಳಿಂದಲೂ ಬರುತ್ತಾರೆ. ಮಳೆಗಾಲದಲ್ಲಿ ಬೀಚ್‌ಗೆ ನಿರ್ಬಂಧವಿತ್ತು. ಇದೀಗ ನಿರ್ಬಂಧವನ್ನು ತೆಗೆಯಲಾಗಿದೆ. ಈ ತಿಂಗಳ ಆರಂಭದಿಂದ ಪ್ರವಾಸಿಗರಿಗೆ ಬೀಚ್‌ಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿರುವ ಜಿಲ್ಲೆಯ ಏಕೈಕ ಬೀಚ್‌. ಬ್ಲೂಫ್ಲ್ಯಾಗ್ ಮಾನ್ಯತೆ ಲಭಿಸಿದ ಬಳಿಕ ಈ ಬೀಚ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಈ‌ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.

Cut-off box - ಪ್ರವಾಸಿಗರ ಸೆಳೆಯುವ ಮರವಂತೆ ಬೀಚ್‌ ಬೈಂದೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಮರವಂತೆ ಹಾಗೂ ಸೋಮೇಶ್ವರ ಕಡಲ ತೀರಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಆದರೆ ಮಳೆಗಾಲದಲ್ಲಿ ಕಡಲ ಅಬ್ಬರ ಜಾಸ್ತಿ ಇದ್ದು ಕಡಲು ಪ್ರಕ್ಷುಬ್ಧವಾಗುವ ಕಾರಣ ಜೂನ್ ತಿಂಗಳಿನಿಂದ ಬೀಚ್‌ಗೆ ಪ್ರವೇಶ ನಿಷೇಧಿಸಲಾಗಿತ್ತು. ಪ್ರಸ್ತುತ ಮಳೆ ಕಡಿಮೆಯಾಗುತ್ತಿದ್ದು ಪ್ರವಾಸಿಗರು ಈ ಎರಡು ಕಡಲ ತೀರಗಳಿಗೆ ಭೇಟಿ ಕೊಡಲು ಪ್ರಾರಂಭಿಸಿದ್ದಾರೆ. ವಿಶಾಲವಾದ ಅರಬ್ಬಿ ಸಮುದ್ರ ಇನ್ನೊಂದೆಡೆ ಸೌಪರ್ಣಿಕಾ ನದಿ ಇವುಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಇದು ಮರವಂತೆ ಕಡಲತೀರದ ಪ್ರಮುಖವಾದ ಆಕರ್ಷಣೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಇಲ್ಲಿಗೆ ದಿನವೂ ಸಾವಿರಾರು ಪ್ರವಾಸಿಗರು ನೀಡುತ್ತಾರೆ. ಸೋಮೇಶ್ವರ ಬೀಚ್ ಪರಿಸರದಲ್ಲಿ ಸುಮನಾವತಿ ನದಿ ಕಡಲು ಸೇರುವ ವಿಹಂಗಮ ನೋಟ ಮನಮೋಹಕ. ದಡದಲ್ಲಿನ ಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೂ ಪ್ರವಾಸಿಗರು ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.