ಉಡುಪಿ: ನಗರವು ದಿನೇ ದಿನೇ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆ ಅಧಿಕವಾಗುತ್ತಿದ್ದರೂ ಸೂಕ್ತ ಪಾರ್ಕಿಂಗ್ ಸೌಲಭ್ಯವಿಲ್ಲದೆ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.
ಪಾದಚಾರಿ ಮಾರ್ಗ ಸೇರಿದಂತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಪಾದಚಾರಿಗಳು ನಡುರಸ್ತೆಯಲ್ಲೇ ನಡೆದಾಡುವ ಅನಿವಾರ್ಯತೆ ಎದುರಾಗಿದೆ.
ನಗರದ ಕವಿ ಮುದ್ದಣ ರಸ್ತೆ, ಸರ್ವೀಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣದಿಂದ ಶ್ರೀಕೃಷ್ಣ ಮಠದ ಕಡೆಗೆ ಹೋಗುವ ರಸ್ತೆಗಳು ಸೇರಿದಂತೆ ವಿವಿಧ ರಸ್ತೆಗಳ ಪಾದಚಾರಿ ಮಾರ್ಗದ ಮೇಲೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ.
ಇನ್ನು ಕೆಲವೆಡೆ ಹೋಟೆಲ್, ಅಂಗಡಿಯವರು ಬೋರ್ಡ್‌ಗಳನ್ನೂ ಪಾದಚಾರಿ ಮಾರ್ಗದ ಮೇಲೆಯೇ ಇರಿಸುತ್ತಾರೆ ಇದು ಕೂಡ ಸಮಸ್ಯೆಗೆ ಕಾರಣವಾಗಿದೆ.
ನಗರ ಸಾಕಷ್ಟು ಅಭಿವೃದ್ಧಿಯಾದರೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರು ಮುತುವರ್ಜಿ ತೋರಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಮಣಿಪಾಲದಲ್ಲೂ ಆಸ್ಪತ್ರೆ ಮೊದಲಾದೆಡೆ ಬರುವವರು ತಮ್ಮ ವಾಹನಗಳನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸುವುದರಿಂದ ರಸ್ತೆ ಸಂಚಾರಕ್ಕೂ ತೊಡಕುಂಟಾಗುತ್ತಿದೆ. ಕೆಲವೊಮ್ಮೆ ಕಿಲೋಮೀಟರ್ ಗಟ್ಟಲೆ ದೂರದವರೆಗೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ.
ಕೆಲವು ಸಂಸ್ಥೆಗಳು ವಾಹನ ಪಾರ್ಕಿಂಗ್‌ಗೆ ಹೆಚ್ಚು ಶುಲ್ಕ ಪಡೆಯುವುದರಿಂದ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದೇವೆ ಎನ್ನುತ್ತಾರೆ ವಾಹನ ಚಾಲಕರು.
ನಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸಿದರೂ ಈ ಬೇಡಿಕೆ ಈಡೇರಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ನಗರದ ಪ್ರಮುಖ ದೇಗುಲಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗೆ ಬರುವವರು ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೆಲ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲದ ಕಾರಣ ಗ್ರಾಹಕರೂ ತೊಂದರೆ ಅನುಭವಿಸುತ್ತಿದ್ದಾರೆ.
ನಗರಸಭೆ ಕಚೇರಿಯಲ್ಲೂ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲದ ಕಾರಣ ಜನರು ಮುಂಭಾಗದ ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ಮಾಡಬೇಕಾಗುತ್ತಿದೆ.
ಹೊಸ ನಗರಸಭೆ ಕಟ್ಟಡ ನಿರ್ಮಾಣವಾದರೆ ಕಚೇರಿಗೆ ಬರುವವರಿಗೆ ವಾಹನ ನಿಲುಗಡೆ ಸಮಸ್ಯೆ ಎದುರಾಗದು ಎನ್ನುತ್ತಾರೆ ಅಧಿಕಾರಿಗಳು.
ಉಡುಪಿ ನಗರದ ಕೆಲ ವಾಣಿಜ್ಯ ಕಟ್ಟಡ, ವಸತಿ ಸಮುಚ್ಚಯಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ವಾಹನಗಳನ್ನು ಆ ಕಟ್ಟಡಗಳ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಲಾಗುತ್ತದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ.
ನಗರದಲ್ಲಿ ಬಹುಮಹಡಿಯ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಿದರೆ ವಾಹನ ನಿಲುಗಡೆಯ ಸಮಸ್ಯೆ ಪರಿಹಾರವಾಗಬಹುದು. ಆದರೆ ಸಂಬಂಧಪಟ್ಟವರು ಇಂತಹ ಯೋಜನೆ ರೂಪಿಸಲು ಮುತುವರ್ಜಿ ತೋರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ನಗರದಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತವೆ. ಆದರೆ ಅವುಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಈ ಕಾರಣಕ್ಕೆ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತದೆ
-ಗಣೇಶ್‌ರಾಜ್ ಸರಳೆಬೆಟ್ಟು
ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ
- ಕೃಷ್ಣಪ್ರಸಾದ್ ಖಾಸಗಿ ಕಂಪನಿ ಉದ್ಯೋಗಿ
‘ಯೋಜನೆ ರೂಪಿಸಲು ಚಿಂತನೆ’
ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆ ಮತ್ತು ಕೆಎಸ್‌ಆರ್‌ಟಿಸಿ ಹಳೆ ಬಸ್ ನಿಲ್ದಾಣ ಪ್ರದೇಶದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತು ಶಾಸಕರ ಜೊತೆಯೂ ಚರ್ಚಿಸಿದ್ದೇನೆ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು. ಸದ್ಯ ನಗರದ ವಿವಿಧೆಡೆ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಸ್ಥಾಪಿಸಲು ಸಂಚಾರ ಠಾಣೆಯ ಪೊಲೀಸರಿಗೆ ಸೂಚಿಸಲಾಗುವುದು. ಕೆಲವು ಸಂಸ್ಥೆಗಳು ಅಧಿಕ ಪಾರ್ಕಿಂಗ್ ಶುಲ್ಕ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಪಾದಚಾರಿ ಮಾರ್ಗದ ಮೇಲೆ ಕೆಲವು ಅಂಗಡಿ ಹೋಟೆಲ್‌ನವರು ಬೋರ್ಡ್ ಹೂವಿನ ಕುಂಡ ಕ್ರೇಟ್‌ಗಳನ್ನು ಇರಿಸುತ್ತಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ವಾಹನ ಪಾರ್ಕಿಂಗ್ ಸೇರಿದಂತೆ ಸಕಲ ಸೌಲಭ್ಯಗಳೊಂದಿಗೆ ನೂತನ ನಗರಸಭೆ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು.
‘ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಮುಂದಾಗಿ’
ಉಡುಪಿ ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆಯೇ ಇಲ್ಲ. ಜನರು ಕೂಡ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಪ್ರಶ್ನಿಸಿದರೆ ನಮ್ಮನ್ನೇ ಬೈತಾರೆ. ನಡೆದು ಹೋಗುವವರಿಗೆ ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು. ನಗರದಲ್ಲಿ ರಸ್ತೆಗಳು ಇಕ್ಕಟ್ಟಾಗಿವೆ. ನಗರ ಸಭೆಯವರು ಕಡ್ಡಾಯವಾಗಿ ಪಾರ್ಕಿಂಗ್ ಸೌಲಭ್ಯವಿರುವ ಕಟ್ಟಡಗಳಿಗೆ ಮಾತ್ರ ಪರವಾನಗಿ ನೀಡಬೇಕು. ನಗರಸಭೆ ಮತ್ತು ಸಂಬಂಧಪಟ್ಟ ಇಲಾಖೆಯವರು ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ನಗರದ ಅಲ್ಲಲ್ಲಿ ಸಿಗ್ನಲ್ ಸ್ಥಾಪಿಸಲು ರಸ್ತೆಯಲ್ಲಿ ಕಟ್ಟೆ ಕಟ್ಟಲಾಗಿದೆ ಇದರಿಂದ ರಸ್ತೆ ಇನ್ನಷ್ಟು ಇಕ್ಕಟ್ಟಾಗಿದೆ. ಕಲ್ಸಂಕ ಮೊದಲಾದೆಡೆ ಕೆಲವೊಮ್ಮೆ ಆಂಬುಲೆನ್ಸ್‌ಗೆ ಹೋಗಲು ದಾರಿ ಸಿಗುವುದಿಲ್ಲ ಎಂದು ಹೇಳುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.