ಬೈಂದೂರು: ಇತಿಹಾಸ ಪ್ರಸಿದ್ದ ಉಪ್ಪುಂದದ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಮನ್ಮಹಾರಥೋತ್ಸವ ‘ಉಪ್ಪುಂದ ಕೊಡಿಹಬ್ಬ’ ಶನಿವಾರ ಸಂಭ್ರಮದಿಂದ ಜರುಗಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಪ್ರಭಾರ ಕಾರ್ಯ ನಿರ್ವಹಣಾಕಾರಿ ಸುದರ್ಶನ ಎಸ್. ಅವರ ಉಸ್ತುವಾರಿ, ತಂತ್ರಿ ಶ್ರೀನಿವಾಸ ಅಡಿಗ ಮಾರ್ಗದರ್ಶನದಲ್ಲಿ ಉಪ್ಪುಂದ ದೇವಳದ ಪ್ರಧಾನ ಅರ್ಚಕ ಪ್ರಕಾಶ ಉಡುಪ ನೇತೃತ್ವದ ವೈದಿಕ ತಂಡದಿಂದ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಭೂತಬಲಿ, ರಥಶುದ್ಧಿ ಹೋಮ ನಂತರ ರಥಬಲಿ, ರಥಾರೋಹಣ ಸೇರಿದಂತೆ ಧಾರ್ಮಿಕ ವಿಧಿವಿಧಾನ ನಡೆದವು.
ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ಖಾರ್ವಿ, ರಾಮ ಎಸ್., ಲಲಿತಾ ಅರುಣ್‌ಕುಮಾರ್ ಶೆಟ್ಟಿ, ಅಂಬಿಕಾ ದೇವಾಡಿಗ, ರಾಜೇಶ ದೇವಾಡಿಗ, ಯು. ರವೀಂದ್ರ ಪ್ರಭು, ಜನಾರ್ದನ ಮಾಚ ಪೂಜಾರಿ, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.
‘ಕರಾವಳಿಯ ಅತಿದೊಡ್ಡ ಜಾತ್ರೆ ಆಗಿರುವ ಕೋಟೇಶ್ವರದ ಕೊಡಿಹಬ್ಬ ಮತ್ತು ಉಪುಂದ ಕೊಡಿಹಬ್ಬ ಈ ಬಾರಿ ಹಿಂದೆ ಮುಂದೆ ಆಗಿದೆ. ಕೋಟೇಶ್ವರ ಕೊಡಿಹಬ್ಬದ ಮರುದಿನವೇ ಉಪ್ಪುಂದ ಕೊಡಿಹಬ್ಬ ನಡೆಯುವುದು ವಾಡಿಕೆ. ಆದರೆ ಈ ಬಾರಿ ಉಪ್ಪುಂದ ಕೊಡಿಹಬ್ಬ ಮೊದಲಿಗೆ ಬಂದಿದ್ದು, ತಿಂಗಳ ಬಳಿಕ ಕೋಟೇಶ್ವರ ಕೊಡಿಹಬ್ಬ ನಡೆಯಲಿದೆ. 35 ವರ್ಷಗಳಿಗೊಮ್ಮೆ ಈ ರೀತಿ ಅಪರೂಪದ ವಿದ್ಯಾಮಾನ ಘಟಿಸುತ್ತದೆ’ ಎಂದು ಅರ್ಚಕರೊಬ್ಬ ತಿಳಿಸಿದರು.
ಉಪ್ಪುಂದ ಕೊಡಿಹಬ್ಬವು ಕುಡಿ ಅರಳಿಸುವ ಹಬ್ಬ ಎಂದೇ ಖ್ಯಾತಿ ಪಡೆದಿದೆ. ಅಸಂಖ್ಯ ಭಕ್ತರು ದೇವರ ಪ್ರೀತ್ಯಾರ್ಥ ಕಬ್ಬು ಖರೀದಿಸಿ ಮನೆಗೆ ಕೊಂಡೊಯ್ಯುವ ಪದ್ಧತಿಯಿದೆ. ಜಾತ್ರೆಗೆ ಹೋಗುವವರು ಕಬ್ಬು (ಕೊಡಿ) ತರುವುದು ಶುಭ. ಅದರಲ್ಲಿ ನವ ದಂಪತಿಗಳು ಕೊಡಿ ತರುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಜಾತ್ರೆಯಲ್ಲಿ ಗೃಹಿಣಿಯರ ಅಸಕ್ತಿಯ ಆರ್ಟಿಫಿಶಿಯಲ್ ಆಭರಣಗಳ ಮಳಿಗೆಗಳು, ಮಿಠಾಯಿ ಅಂಗಡಿಗಳಿದ್ದು ಮನರಂಜನೆಗಾಗಿ ವಿವಿಧ ಅಮ್ಯೂಸ್‌ಮೆಂಟ್‌ಗಳು ಜಾತ್ರೆಯ ಮೆರಗು ಹೆಚ್ಚಿಸಿದವು.
ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನ. 11ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ದೇವಳದ ಮನವಿ ಮೇರೆಗೆ ಊರಿನ ಹತ್ತು ಸಮಸ್ತರು, ಭಕ್ತರು ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ, ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್, ನವೀನ್ ಬೋರ್ಕರ್ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಭಾನುವಾರ (ನ. 17) ರಾತ್ರಿ ದೇವರ ಅವಭೃತ ಸ್ನಾನ ನಡೆಯಲಿದ್ದು, ಸೋಮವಾರ (ನ. 18) ಧ್ವಜಾವರೋಹಣದ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.