ಬೈಂದೂರು: ‘ಯುವಜನರು ಯಕ್ಷಗಾನ ಕಲೆಗೆ ಒಲವು ತೋರಿಸದ ಹಿನ್ನೆಲೆ ಯಕ್ಷಗಾನಕ್ಕೆ ಪ್ರೇಕ್ಷಕರ ಒಗ್ಗೂಡಿಸುವಿಕೆ ಕಷ್ಟಸಾಧ್ಯವಾಗಿದೆ. ಫಿಲ್ಮಿಡಾನ್ಸ್ ಸುದ್ದಿ ತಿಳಿದಾಕ್ಷಣ ಅಸಂಖ್ಯಾತ ಪ್ರೇಕ್ಷಕರು ಜಮಾಯಿಸುವ ಹಾಗೇ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ನೋಡುಗರ ಸಂಖ್ಯೆ ಹೆಚ್ಚಾಗಬೇಕು’ ಎಂದು ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ವೃತ್ತಿಪರ ಕಲಾವಿದರ ಶ್ರೀದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್‌ನ 8ನೇ ವರ್ಷದ ವಾರ್ಷಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಮಾಧ್ಯಮಗಳಿಂದ ನೈಜ ಯಕ್ಷಗಾನ ಕಲಾವಿದರ ಬದುಕು ಹೈರಾಣಾಗಿಸಿದೆ. ಕೆಲವು ದೇವಸ್ಥಾನಗಳು ನಡೆಸುತ್ತಿರುವ ಹರಕೆ ಬಯಲಾಟದ ಕಲಾವಿದರಿಗೆ ಉತ್ತಮ ಸೌಲಭ್ಯವಿದ್ದು, ಇತರೇ ಬಯಲಾಟ ಕಲಾವಿದರಿಗೆ ಜೀವನ ನಡೆಸುವುದು ಕಷ್ಟಕರ ಸ್ಥಿತಿಯಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಡ ಕಲಾವಿದರ ನೆರವಿಗೆ ಧಾವಿಸುವ ಮೂಲಕ ಅವರ ಜೀವನಾಧಾರಕ್ಕಾಗಿ ಹೆಚ್ಚಿನ ಸವಲತ್ತು ನೀಡುವಂತಾಬೇಕು ಎಂದರು.
ಉದ್ಯಮಿ ಯು.ಎ.ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮದ್ದಳೆ ವಾದಕ ನಾಗೇಶ ಭಂಡಾರಿ ಕರ್ವ, ಹೊಸ್ಕೋಟೆ ಅವರನ್ನು ಸನ್ಮಾನಿಸಲಾಯಿತು.
ಹಟ್ಟಿಯಂಗಡಿ ವಸತಿ ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ, ಉಪ್ಪುಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಗಣಕಯಂತ್ರ ಶಿಕ್ಷಕ ದಿನೇಶ ಕುಂದರ್, ನಿವೃತ್ತ ಶಿಕ್ಷಕ ಗಿರೀಶ ಶ್ಯಾನುಭಾಗ್, ಕ್ರೈಸ್ತ ಸಂಘದ ಸಿಇಒ ವಿಷ್ಣು ಆರ್. ಪೈ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸುಧಾಕರ ದೇವಾಡಿಗ, ಉಪ್ಪುಂದ ಜೇಸಿಐ ಅಧ್ಯಕ್ಷ ಮಂಜುನಾಥ ದೇವಾಡಿ, ರಥಬೀದಿ ಶ್ರೀದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಮಂಜುನಾಥ ದೇವಾಡಿಗ, ಉಪ್ಪುಂ ಕಾಲೇಜಿನ ಉಪಪ್ರಾಂಶುಪಾಲ ಚಂದ್ರಹಾಸ ಗೌಡ, ಸಂಘದ ಗೌರವಾಧ್ಯಕ್ಷ ನಾರಾಯಣ ಬಿಜೂರು ಇದ್ದರು.
ಟ್ರಸ್ಟಿನ ಕಾರ್ಯದರ್ಶಿ ಶ್ರೀಧರ ದೇವಾಡಿಗ ಸ್ವಾಗತಿಸಿದರು. ಅಧ್ಯಕ್ಷ ಗಣೇಶ ದೇವಾಡಿಗ ವಂದಿಸಿದರು. ರಾಮಕೃಷ್ಣ ಡಿ. ನಿರೂಪಿಸಿದರು. ನಂತರ ಕಂಸವಧೆ ಯಕ್ಷಗಾನ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.