ADVERTISEMENT

ಶಿಳ್ಳೆಕ್ಯಾತರಿಗೆ ಸವಲತ್ತು ಒದಗಿಸಿ: ಸಂತೋಷ್‌ ಬಜಾಲ್‌

‌‌ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 4:49 IST
Last Updated 3 ಜುಲೈ 2024, 4:49 IST
ಶಿಳ್ಳೆಕ್ಯಾತರಿಗೆ ಮನೆ, ನಿವೇಶನ ಸಹಿತ ಹಲವು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು
ಶಿಳ್ಳೆಕ್ಯಾತರಿಗೆ ಮನೆ, ನಿವೇಶನ ಸಹಿತ ಹಲವು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು   

ಉಡುಪಿ: ‘ಜಿಲ್ಲೆಯ ಬ್ರಹ್ಮಾವರ, ಪಾಂಗಳ, ಮಲ್ಪೆ, ಕಟ್ ಬೆಳ್ತೂರು, ಗುಲ್ವಾಡಿ ನದಿ ತಟದಲ್ಲಿ ಬದುಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡಬೇಕು’ ಎಂದು ಕರಾವಳಿ ವೃತ್ತಿನಿರತ ಅಲೆಮಾರಿ (ಶಿಳ್ಳೆಕ್ಯಾತ) ಹಕ್ಕುಗಳ ಸಮಿತಿಯ ಗೌರವ ಸಲಹೆಗಾರ ಸಂತೋಷ್‌ ಬಜಾಲ್‌ ಆಗ್ರಹಿಸಿದರು.

ಶಿಳ್ಳೆಕ್ಯಾತರಿಗೆ ಮನೆ, ನಿವೇಶನ ಸಹಿತ ಹಲವು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಶಿಳ್ಳೆಕ್ಯಾತ ಮಹಿಳೆಯರ ಮೇಲಿನ ದೈಹಿಕ ಹಲ್ಲೆಗಳಿಗೆ ಇಲ್ಲಿನ ಶಾಸಕ, ಸಂಸದರು ಸ್ಪಂದಿಸುತ್ತಿಲ್ಲ. ಅವರು ಧರ್ಮ ರಾಜಕಾರಣಕ್ಕೆ ಮಾತ್ರ ಅಬ್ಬರಿಸುತ್ತಿರುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೆಕ್ಯಾತ ಸಮುದಾಯಗಳು ಅಲೆಮಾರಿಯಾಗಿ ಬದುಕುತ್ತಿರುವ ಕಾರಣ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯಗಳ ಉನ್ನತಿಗಾಗಿ ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮಗಳು ಇದ್ದರೂ ಇವರ ಸಮಸ್ಯೆಗಳನ್ನು ‌ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಕುರಿತು ಸಮೀಕ್ಷೆ ನಡೆಸಬೇಕು, ಆರೋಗ್ಯ ಕಾರ್ಡ್‌ ಮತ್ತು ಇತರ ಗುರುತಿನ ಚೀಟಿ ವಿತರಿಸಬೇಕು, ಉಚಿತ ಮನೆ, ನಿವೇಶನ ಒದಗಿಸಬೇಕು, ಕುಡಿಯುವ ನೀರು, ವಿದ್ಯುತ್‌ ಮತ್ತು ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿ ಅಧ್ಯಕ್ಷ ಶಂಕರ ಮಾತನಾಡಿ, ಸ್ಥಳೀಯ ಕೆಲವರು ಹಲ್ಲೆ ನಡೆಸುತ್ತಿರುವುದರಿಂದ ಒಂದು ತಿಂಗಳಿಂದ ಮೀನು ಹಿಡಿಯಲು ಹೋಗಿಲ್ಲ. ದುಷ್ಕರ್ಮಿಗಳು ಬಂದು ನಮ್ಮ ಬಲೆಗಳನ್ನು ತುಂಡರಿಸುತ್ತಾರೆ. ದೋಣಿಗಳಿಗೆ ಹಾನಿ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಗೌರವಾಧ್ಯಕ್ಷ ಕವಿರಾಜ್ ಎಸ್. ಕಾಂಚನ್ ಮಾತನಾಡಿ, ಗಂಗೊಳ್ಳಿ ಕಡೆಯಿಂದ ಬಂದು ಶಿಳ್ಳೆಕ್ಯಾತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧನದಿಂದ ರಕ್ಷಿಸಲು ಮತ್ತು ನಿರೀಕ್ಷಣಾ ಜಾಮೀನು ಪಡೆಯಲು ಸಹಾಯ ಮಾಡಿದವರಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಲಾಢ್ಯರು ಇದ್ದಾರೆ ಎಂಬ ಅನುಮಾನಗಳಿವೆ ಎಂದರು.

ಸಿಐಟಿಯು ಕಾರ್ಮಿಕ ಸಂಘಟನೆಯ ಉಡುಪಿ ಜಿಲ್ಲಾ ಮುಖಂಡ ಶಶಿಧರ್ ಗೊಲ್ಲ, ಅಲೆಮಾರಿ ಸಮುದಾಯದ ಮುಖಂಡ ಶಂಕರ ಗುಲ್ವಾಡಿ, ದೀಪು ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸಂಚಾಲಕ ಪ್ರಭಾಕರ್ ಪೂಜಾರಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ‌ಜಿಲ್ಲಾ ಘಟಕ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಸಿಐಟಿಯು ಮುಖಂಡರಾದ ವೋಹನ್, ನಳಿನಿ ಎಸ್., ಕರಾವಳಿ ವೃತ್ತಿನಿರತ ಅಲೆಮಾರಿ ಸಮುದಾಯದ ರಾಜ್ಯ ಮುಖಂಡರಾದ ವೆಂಕಟೇಶ, ಲೋಕೇಶ್, ಬಾಬು, ಪ್ರಕಾಶ್, ಲೋಕೇಶ್, ಸಿದ್ದಪ್ಪ, ಸ್ವಾಮಿ, ನಾಗರಾಜ್ ಇದ್ದರು. ಸಮಿತಿಯ ಕಾರ್ಯದರ್ಶಿ ರಾಮ ಟಿ.ಎನ್. ಸ್ವಾಗತಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಮನವಿ ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ಹೆಂಗಸರು ಮಕ್ಕಳ ಮೇಲೂ ಹಲ್ಲೆ’

ಗಂಗೊಳ್ಳಿ ಪ್ರದೇಶದ ಕೆಲವರು ಬೋಟ್‌ಗಳಲ್ಲಿ ಬಂದು ನಮ್ಮವರ ಮೇಲೆ ಹೆಂಗಸರು ಮಕ್ಕಳು ಎಂದು ನೋಡದೆ ಹಲ್ಲೆ ನಡೆಸಿದ್ದಾರೆ ಎಂದು ಶಿಳ್ಳೆಕ್ಯಾತ ಸಮುದಾಯದ ಜಯಮಾಲಾ ಅವರು ಅಳಲು ತೋಡಿಕೊಂಡರು. ಹೆಂಗಸರ ತಾಳಿಯನ್ನೂ ಕಿತ್ತುಕೊಂಡು ಹೋಗಿದ್ದಾರೆ ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು. ಈ ಊರು ಬಿಟ್ಟು ಹೋಗಿ ಎಂದು ನಮ್ಮಲ್ಲಿ ಹೇಳುತ್ತಿದ್ದಾರೆ. ನಾವು ಶಿಕ್ಷಣ ಪಡೆದಿಲ್ಲ. ನಮ್ಮ ಮಕ್ಕಳಿಗಾದರೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಅವರನ್ನು ಶಾಲೆಗೆ ಸೇರಿಸಿದ್ದೇವೆ. ಹೀಗಿರುವಾಗ ನಾವು ಊರು ಬಿಟ್ಟು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಹಿಂದೆ ನಾವು ಊರಿಂದ ಊರಿಗೆ ಅಲೆದಾಡುತ್ತಿದ್ದೆವು. ಆದರೆ ಈಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಂದೇ ಕಡೆ ನೆಲೆಸಿದ್ದೇವೆ. ಸುತ್ತಲೂ ನೀರು ತುಂಬಿರುವ ಪ್ರದೇಶದಲ್ಲಿ ಟಾರ್ಪಲ್ ಹಾಕಿ ವಾಸಿಸುತ್ತಿದ್ದೇವೆ. ಗಾಳಿ ಮಳೆ ಬಂದರೆ ಜೀವ ಭಯ ಕಾಡುತ್ತದೆ ಎಂದು ಜಯಮಾಲಾ ಅವರು ಸಂಕಷ್ಟಗಳನ್ನು ತೆರೆದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.