ADVERTISEMENT

ಪೆರ್ಡೂರು ಪಿಡಿಒ ವರ್ಗಾವಣೆ ಮಾಡಿ: ಚೇತನಾ ಶೆಟ್ಟಿ

ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:41 IST
Last Updated 30 ಜೂನ್ 2024, 6:41 IST

ಉಡುಪಿ: ಪೆರ್ಡೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಮನ ಕೆ. ಅವರನ್ನು ವರ್ಗಾವಣೆ ಮಾಡದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಚೇತನಾ ಶೆಟ್ಟಿ, ತಮ್ಮ ವಿರುದ್ಧ ಯಾರಾದರು ಮಾತನಾಡಿದರೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಪಿಡಿಒ ಅವರು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಜನರು ಗ್ರಾಮ ಪಂಚಾಯಿತಿ ಕಚೇರಿಗೆ ಬರಲು ಭಯಪಡುತ್ತಾರೆ ಎಂದು ಆರೋಪಿಸಿದರು.

ಪಿಡಿಒ ಅವರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು, ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರು ಅಳಲು ತೋಡಿಕೊಂಡಾಗ, ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಅವರು, ಜನರಿಗೆ ತೊಂದರೆ ಕೊಡಬೇಡಿ ಎಂದು ಪಿಡಿಒಗೆ ಸೂಚಿಸಿದ್ದರು ಎಂದು ವಿವರಿಸಿದರು.

ADVERTISEMENT

ಆದರೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್‌ ಉತ್ತರ ವಲಯ ಅಧ್ಯಕ್ಷ ಸಂತೋಷ್‌ ಕುಲಾಲ್‌ ಅವರು, ಶಾಸಕರು  ದಲಿತ  ಪಿಡಿಒಗೆ ದೌರ್ಜನ್ಯ ಎಸಗಿದ್ದಾರೆ ಎಂದು  ಆರೋಪಿಸಿದ್ದಾರೆ ಮತ್ತು ಈ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ತಿಳಿಸಿರುವ ವಿಷಯಗಳು ಸತ್ಯಕ್ಕೆ ದೂರವಾದುದು ಎಂದು ಚೇತನಾ ಅವರು ತಿಳಿಸಿದರು.

ಪಿಡಿಒಗೆ ಪೆರ್ಡೂರು ಮತ್ತು ಬೈರಂಪಳ್ಳಿ ಗ್ರಾಮ ಪಂಚಾಯಿತಿಗಳ ಹೊಣೆ ಇದೆ. ಆದರೆ ಅವರು ಎರಡೂ ಗ್ರಾಮ ಪಂಚಾಯಿತಿಗಳಿಗೂ ಸರಿಯಾಗಿ ಬರುವುದಿಲ್ಲ. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.

ಪೆರ್ಡೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವು ಪೂಜಾರಿ, ಸದಸ್ಯರಾದ ತುಕಾರಾಮ್‌ ನಾಯಕ್‌, ಬೈರಂಪಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಾನಂದ ಹೆಗಡೆ, ಹರ್ಷಿತ್‌ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.