ಉಡುಪಿ: ಕರಾವಳಿ ಕಂಬಳದಲ್ಲಿ ಉಸೇನ್ ಬೋಲ್ಟ್‌ನಂತೆ ಓಡುವ ಬಹಳಷ್ಟು ಓಟಗಾರರು ಇದ್ದಾರೆ. ಬೋಲ್ಟ್ ದಾಖಲೆಯನ್ನು ಹಿಂದೆಯೇ ಪುಡಿಗೈದವರೂ ಇದ್ದಾರೆ. ಆದರೆ, ಆ ದಾಖಲೆಗಳು ‘ದಾಖಲೆಗಳಲ್ಲಿ’ ಉಳಿದಿಲ್ಲ ಎನ್ನುತ್ತಾರೆ ಕಂಬಳ ತೀರ್ಪುಗಾರರಾದ ವಿಜಯ್‌ಕುಮಾರ್ ಕಂಗಿನಮನೆ.
ಕಂಬಳದ ಮಿಂಚಿನ ಓಟಗಾರರು ಎಂದೇ ಹೆಸರಾದ ಪ್ರವೀಣ್ ಕೋಟ್ಯಾನ್, ಕೊಳಕೆ ಇರ್ವತ್ತೂರು ಆನಂದ, ಅಳದಂಗಡಿ ರವಿ, ಅಕ್ಕೇರಿ ಸುರೇಶ್ ಶೆಟ್ಟಿ, ನಿಶಾಂತ್ ಶೆಟ್ಟಿ,ಶ್ರೀನಿವಾಸ ಗೌಡ ಸೇರಿದಂತೆ ಹಲವರು 9.58 ಸೆಕೆಂಡ್‌ನೊಳಗೆ 100 ಮೀಟರ್ ಓಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಡೆದ ಬಹುತೇಕ ಕಂಬಳಗಳ ಪ್ರಶಸ್ತಿಗಳು ಇವರೇ ಬಾಚಿಕೊಂಡಿದ್ದಾರೆ ಎನ್ನುತ್ತಾರೆ ಅವರು.
ಹಿಂದೆಲ್ಲ ‘ಸ್ಟಾಪ್ ವಾಚ್’ ತಂತ್ರಜ್ಞಾನದ ಮೂಲಕ ಕಂಬಳ ಫಲಿತಾಂಶವನ್ನು ಅಳೆಯಲಾಗುತ್ತಿತ್ತು. ಕೆಲ ವರ್ಷಗಳ ಹಿಂದಷ್ಟೆ ಸೆನ್ಸಾರ್ ಎಲೆಕ್ಟ್ರಾನಿಕ್ ವ್ಯವಸ್ಥೆ ಬಂದಿದ್ದು, ಓಟದ ಅವಧಿಯನ್ನು ದಾಖಲು ಮಾಡಲಾಗುತ್ತಿದೆ. ಕಂಬಳ ಓಟವನ್ನು ಒಲಿಂಪಿಕ್ಸ್ ಮಾದರಿಯಲ್ಲಿ ನಿಖರವಾಗಿ ಅಳೆಯುವ ವ್ಯವಸ್ಥೆ ಜಾರಿಗೆ ಬಂದರೆ ಹೆಚ್ಚು ದಾಖಲೆಗಳು ಸೃಷ್ಟಿಯಾಗುವುದು ಖಚಿತ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಮೊದಲ ಉಸೇನ್ ಬೋಲ್ಟ್ ಆನಂದ್:ಎರಡು ದಶಕಗಳಿಂದ ಕಂಬಳದಲ್ಲಿ ಮಿಂಚುತ್ತಿರುವ ಕಾರ್ಕಳದ ಇರ್ವತ್ತೂರಿನ ಆನಂದ್ ಕರಾವಳಿಯ ಮೊದಲ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧರು. ಕಂಬಳದ ‘ಕೊಳಕೆ ರಾಕೆಟ್’ ಅಂತಲೂ ಕರೆಸಿಕೊಳ್ಳುವ ಆನಂದ್ ಇದುವರೆಗೂ ಹಗ್ಗ ಹಿರಿಯ, ನೇಗಿಲು ಹಿರಿಯ ವಿಭಾಗಗಳಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇಡೀ ಜೀವನವನ್ನೇ ಕಂಬಳ ಓಟಕ್ಕಾಗಿ ಮೀಸಲಿಟ್ಟಿದ್ದಾರೆ.
ಸತತ ಮೂರು ವರ್ಷ ಚಾಂಪಿಯನ್ ಆಗಿ ಮೆರೆದಿರುವ ಆನಂದ್ ಸದ್ಯ ಕಂಬಳ ಅಕಾಡೆಮಿಯಲ್ಲಿ ಯುವ ಕಂಬಳ ಓಟಗಾರರಿಗೆ ತರಬೇತಿ ಕೊಡುತ್ತಿದ್ದಾರೆ. 144 ಮೀಟರ್ ಅಂತರವನ್ನು 13.68 ಸೆಕೆಂಡ್‌ಗಳಲ್ಲಿ ಓಡಿರುವುದಾಗಿ ಹೇಳುತ್ತಾರೆ ಅವರು.
‘ಚಿನ್ನದ ಓಟಗಾರ’ ಅಳದಂಗಡಿ ರವಿ:ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯ 51 ವರ್ಷದ ರವಿ 27 ವರ್ಷಗಳಿಂದ ಕಂಬಳ ಓಟಗಾರ. ಇದುವರೆಗೂ 300ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 142 ಮೀಟರ್ ಕಂಬಳ ಕರೆಯನ್ನು 13.40 ಸೆಕೆಂಡ್‌ಗಳಲ್ಲಿ ಓಡಿರುವುದಾಗಿ ಹೇಳುತ್ತಾರೆ ರವಿ ಅಳದಂಗಡಿ.
ಮೂರು ಬಾರಿ ಚಾಂಪಿಯನ್:ಮೂಡುಬಿದರೆಯ ಪಣಪಿಲದ ಪ್ರಶಾಂತ್ 6 ವರ್ಷಗಳಿಂದ ಕಂಬಳದಲ್ಲಿ ಓಡುತ್ತಿದ್ದು, ಭರವಸೆ ಓಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ 80ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಪುತ್ತೂರು ಕಂಬಳದಲ್ಲಿ ನಡೆದ 147.75 ಮೀಟರ್ ಕರೆಯನ್ನು 14.05 ಸೆಕೆಂಡ್‌ಗಳಲ್ಲಿ ಮುಟ್ಟಿರುವುದಾಗಿ ಪ್ರಶಾಂತ್ ಹೇಳುತ್ತಾರೆ.
ನಿಶಾಂತ್ ಶೆಟ್ಟಿ:ಕಾರ್ಕಳ ತಾಲ್ಲೂಕಿನ ಬಜಗೋಳಿ ನಿವಾಸಿ ನಿಶಾಂತ್ ಶೆಟ್ಟಿ ಈಚೆಗೆ 143 ಮೀಟರ್ ಟ್ರ್ಯಾಕ್ ಅನ್ನು 13.61 ಸೆಕೆಂಡ್‌ಗಳಲ್ಲಿ ಓಡಿದ್ದಾರೆ. ಭವಿಷ್ಯದ ಭರವಸೆಯ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಆಟಗಾರ ನಿಶಾಂತ್.
ಈ ಎಲ್ಲ ಆಟಗಾರರು ಓಡಿದ ಅವಧಿಯನ್ನು 100 ಮೀಟರ್ ಓಟಕ್ಕೆ ಇಳಿಸಿದರೆ ಎಲ್ಲರೂ 9.50 ಸೆಕೆಂಡ್‌ಗಳ ಆಸುಪಾಸಿನಲ್ಲಿ ಓಡಿರುವುದು ಸ್ಪಷ್ಟವಾಗುತ್ತದೆ.
ಓಟಗಾರ ಕಂಬಳದ ಕರೆ– ಕ್ರಮಿಸಿದ ಅವಧಿ–100 ಮೀಟರ್‌ಗೆ ಇಳಿಸಿದರೆ
––––––––––––––
ಇರ್ವತ್ತೂರು ಆನಂದ್–144 ಮೀಟರ್–13.68–9.50
ಅಳದಂಗಡಿ ರವಿ–142 ಮೀಟರ್–13.40–9.43
ಪಣಪಿಲದ ಪ್ರಶಾಂತ್–147.75 ಮೀಟರ್–14.05– 9.50
ನಿಶಾಂತ್ ಶೆಟ್ಟಿ–143 ಮೀಟರ್–13.61 9.51
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.