ADVERTISEMENT

ವಿಕ್ರಂ ಗೌಡ ಎನ್‌ಕೌಂಟರ್: ಯುಎಪಿಎ ಅಡಿ ಪ್ರಕರಣ

ಎನ್‌ಕೌಂಟರ್‌: ಹೆಬ್ರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 19:19 IST
Last Updated 21 ನವೆಂಬರ್ 2024, 19:19 IST
ವಿಕ್ರಂ ಗೌಡ
ವಿಕ್ರಂ ಗೌಡ   

ಉಡುಪಿ: ಪೀತುಬೈಲ್‌ನಲ್ಲಿ ನಡೆದಿರುವ ಎನ್‌ಕೌಂಟರ್‌ಗೆ ಸಂಬಂಧಿಸಿ ಕಾರ್ಕಳ ಎನ್‌ಎನ್‌ಎಫ್‌ನ ಡಿವೈಎಸ್‌ಪಿ ರಾಘವೇಂದ್ರ ಆರ್‌. ನಾಯ್ಕ್‌ ಅವರು ನೀಡಿರುವ ದೂರಿನ ಅನ್ವಯ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಅಡಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ನಿಷೇಧಿತ ಉಗ್ರವಾದಿ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರ ಚಲನವಲನಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೋಮವಾರ ಸಂಜೆ 5 ಗಂಟೆಗೆ ನಾಡ್ಪಾಲು ಗ್ರಾಮದ ಪೀತುಬೈಲಿನ ಕಾಡಿನೊಳಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸಂಜೆ 6 ಗಂಟೆಯ ವೇಳೆಗೆ ಮೂರರಿಂದ ನಾಲ್ಕು ಮಂದಿ ಕಂಡು ಬಂದಿದ್ದಾರೆ. ಅವರು ವಿಕ್ರಂ ಗೌಡ ಮತ್ತು ಇತರರು ಎಂಬುದನ್ನು ಖಚಿತಪಡಿಸಿಕೊಂಡು, ‘ನಾವು ಪೊಲೀಸರು ಶರಣಾಗಿ’ ಎಂದು ಪದೇ ಪದೇ ಕೂಗಿ ಹೇಳಿದರೂ ಸಹ ಅದನ್ನು ಧಿಕ್ಕರಿಸಿ ನಮ್ಮನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಿದ್ದಾರೆ ಎಂದು ರಾಘವೇಂದ್ರ ಆರ್‌. ನಾಯ್ಕ್‌ ದೂರಿನಲ್ಲಿ ಹೇಳಿದ್ದಾರೆ.

ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ವಿಕ್ರಂ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಬಳಿ 9 ಎಂ.ಎಂ. ಕಾರ್ಬೈನ್‌ ಬಂದೂಕು ಇತ್ತು. ರಾಷ್ಟ್ರೀಯ ಭದ್ರತೆಗೆ ಭಂಗ ತರುವ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸುಲಿಗೆ ಮೊದಲಾದ ಅಪರಾಧ ಚಟುವಟಿಕೆಗಳಲ್ಲಿ ಆತ ಭಾಗಿಯಾಗಿದ್ದ. ವಿಕ್ರಂ ಮೃತಪಟ್ಟಿದ್ದು, ಪರಾರಿಯಾಗಿರುವ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಶೋಧ ಕಾರ್ಯಾಚರಣೆ ಮುಂದುವರಿಕೆ’

ಹೆಬ್ರಿ ತಾಲ್ಲೂಕಿನ ಪೀತುಬೈಲ್‌ನಲ್ಲಿ ಎನ್‌ಕೌಂಟರ್‌ ನಡೆದ ಬಳಿಕವೂ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ನಕ್ಸಲ್‌ ನಿಗ್ರಹ ಪಡೆಯ ಎಸ್‌ಪಿ ಜಿತೇಂದ್ರ ದಯಾಮ ಗುರುವಾರ ತಿಳಿಸಿದರು.

ಹೆಬ್ರಿ ಮತ್ತು ಕಾರ್ಕಳ ವ್ಯಾಪ್ತಿಯ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಸಕ್ರಿಯವಾಗಿ ನಡೆಯುತ್ತಿದೆ ಎಂದೂ ಅವರು ಹೇಳಿದರು.

ಎನ್‌ಕೌಂಟರ್‌: ಕೂಡ್ಲು ಫಾಲ್ಸ್‌ ಬಂದ್‌

ಹೆಬ್ರಿ (ಉಡುಪಿ ಜಿಲ್ಲೆ): ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್‌ ಎನ್‌ಕೌಂಟರ್‌ ನಡೆದ ಕಾರಣ ಮುಂಜಾಗ್ರತಾ ಕ್ರಮವಾಗಿ ಕೂಡ್ಲು ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಕೂಡ್ಲು ಫಾಲ್ಸ್‌ ಇರುವ ಪ್ರದೇಶದಲ್ಲೇ ನಕ್ಸಲ್‌ ಚಟುವಟಿಕೆ ಮತ್ತೆ ಬಿರುಸುಗೊಂಡಿರುವುದು ಹಾಗೂ ನಕ್ಸಲ್‌ ನಿಗ್ರಹ ಪಡೆಯವರಿಂದ ಹತನಾದ ನಕ್ಸಲ್‌ ನಾಯಕ ವಿಕ್ರಂ ಗೌಡನ ಮನೆ ಜಲಪಾತದ ಸಮೀಪದಲ್ಲೇ ಇರುವುದರಿಂದ ಒಂದು ವಾರ ಜಲಪಾತಕ್ಕೆ ಪ್ರವೇಶ ಇಲ್ಲ ಎಂದು ಸೋಮೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ ಶಿವರಾಂ ಬಾಬು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.