ಉಡುಪಿ: ಪೇಜಾವರಅಧೋಕ್ಷಜ ಮಠದ ವಿಶ್ವೇಶತೀರ್ಥ ಶ್ರೀಗಳು 5 ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೃಷ್ಣಮಠದ ಇತಿಹಾಸದಲ್ಲಿಯೇ ಸುದೀರ್ಘ 5 ಅವಧಿಯ ಪರ್ಯಾಯ ಪೂರೈಸಿದ ಏಕೈಕ ಯತಿ ಎಂಬ ಅಗ್ಗಳಿಕೆ ಪೇಜಾವರ ಶ್ರೀಗಳದ್ದು.
ಮೊದಲ ಪರ್ಯಾಯ:ಪೇಜಾವರ ಮಠದ ಮೊದಲ ಪರ್ಯಾರ್ಯದ ಅವಧಿ ಆರಂಭವಾಗಿದ್ದು 1952ರಲ್ಲಿ. ಆಗ ಶ್ರೀಗಳಿಗೆ 20ರ ಹರೆಯ. 2 ವರ್ಷಗಳ ಪರ್ಯಾಯದ ಅವಧಿಯಲ್ಲಿ ಅನ್ನದಾನ, ಜ್ಞಾನದಾನಗಳಿಗೆ ಆದ್ಯತೆ ನೀಡಲಾಗಿತ್ತು. ಶ್ರೀಕೃಷ್ಣಮಠದಲ್ಲಿ ಉಚಿತ ಭೋಜನ ವ್ಯವಸ್ಥೆ ಆರಂಭವಾಗಿದ್ದು ಇದೇ ಅವಧಿಯಲ್ಲಿ.
ಶ್ರೀಗಳ ಪ್ರಥಮ ಸುಧಾ ಮಂಗಳ ಪಾಠ ನಡೆದಿದ್ದು ಇದೇ ಸಂದರ್ಭ. ಜ.4, 1953ರಲ್ಲಿ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ಅಖಿಲಭಾರತ ಮಾಧ್ವ ಮಹಾಮಂಡಲ ಜನ್ಮತಾಳಿತು. ಅಂದು ಮೈಸೂರು ಮಹಾರಾಜರು ಸಮ್ಮೇಳನ ಉದ್ಘಾಟಿಸಿದ್ದರು.
ಎರಡನೇ ಪರ್ಯಾಯ:1968ರಲ್ಲಿ ಪೇಜಾವರ ಶ್ರೀಗಳು ಎರಡನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಿದರು. ಈ ಅವಧಿಯಲ್ಲಿ ಅನ್ನದಾನ, ವಿದ್ಯಾದಾನ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಕಚೇರಿ, ನಿರಂತರ ಪುರಾಣ ಪ್ರವಚನ, ಹರಿಕಥೆಗಳು ಕೃಷ್ಣನೂರಿಗೆ ಚೈತನ್ಯ ತುಂಬಿದವು. ಧರ್ಮ ಸಂಸತ್ ಸಾಧು ಸಂತರ ಸಮಾಗಮಕ್ಕೆ ಸಾಕ್ಷಿಯಾಯಿತು.
2ನೇ ಪರ್ಯಾಯದ ಕೊನೆಯಲ್ಲಿ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಥಮ ಪ್ರಾಂತೀಯ ಸಮ್ಮೇಳನ ಜರುಗಿತು. ಮೊದಲ ಬಾರಿಗೆ ಹಿಂದೂ ಏಕತೆಯ ಘೋಷಣೆ ಮೊಳಗಿದ್ದು ಉಡುಪಿಯಲ್ಲಿಯೇ. ಹಿಂದವಃ ಸೋದರಾಃ ಸರ್ವೇ, ನ ಹಿಂದುಃ ಪತಿತೋ ಭವೇತ್ (ಹಿಂದೂಗಳೆಲ್ಲ ಸೋದರರು, ಯಾವ ಹಿಂದುವೂ ಪತಿತನಲ್ಲ) ಎಂಬ ಶ್ರೀಗಳ ಘೋಷವಾಕ್ಯ ಹಿಂದೂಗಳಲ್ಲಿ ಮಿಂಚಿನ ಸಂಚಾರ ಮೂಡಿಸಿತ್ತು.
ಇದೇ ಅವಧಿಯಲ್ಲಿ ಮಾಧ್ವ ಮಹಾ ಸಮ್ಮೇಳನ ನಡೆಯಿತು. ಕೃಷ್ಣಮಠದ ನವೀಕರಣ, ಸುತ್ತುಪೌಳಿ, ಮಂಟಪ, ಚಂದ್ರಶಾಲೆಗಳಿಗೆ ಅಮೃತ ಶಿಲೆಯ ಹಾಸು, ಭವ್ಯ ಬಡಗುಮಾಳಿಗೆಯ ನವೀಕರಣ ನಡೆದು ಕೃಷ್ಣಮಠದ ಸುಂದರವಾಗಿ ಕಂಗೊಳಿಸುವಂತಾಯಿತು.
ಮೂರನೇ ಪರ್ಯಾಯ:1984ರಲ್ಲಿ ಮೂರನೇ ಪರ್ಯಾಯ ಪೀಠ ಅಲಂಕರಿಸಿದ ಯತಿಗಳು ರಥಬೀದಿಯಲ್ಲಿ ಬಡವರಿಗೆ ಕೃಷ್ಣ ಚಿಕಿತ್ಸಾಲಯ ತೆರೆದರು. ಇಂದಿಗೂ ಚಿಕಿತ್ಸಾಲಯ ಅಸ್ತಿತ್ವದಲ್ಲಿದ್ದು, ಭಿಕ್ಷಕರು, ನಿರಾಶ್ರಿತರು ಚಿಕಿತ್ಸೆ ಪಡೆಯುತ್ತಾರೆ.
ನಾಲ್ಕನೇ ಪರ್ಯಾಯ:2000ನೇ ಇಸವಿಯಲ್ಲಿನಡೆದ 4ನೇ ಪರ್ಯಾಯದಲ್ಲಿ ಬೃಹತ್ ರಾಜಾಂಗಣ ನಿರ್ಮಾಣ ಮಾಡಲಾಯಿತು. ಪ್ರತಿನಿತ್ಯ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು ನಡೆಯುವುದು ವಿಶೇಷ. ಇದೇ ಅವಧಿಯಲ್ಲಿ ಕನಕ ಮಂಟಪ ಕೂಡ ನಿರ್ಮಾಣವಾಯಿತು.
ಐದನೇ ಪರ್ಯಾಯ:2016ರಲ್ಲಿ ನಡೆದ 5ನೇ ಪರ್ಯಾಯದಲ್ಲಿ 16 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮಧ್ವಾಂಗಣ, ಕೃಷ್ಣ ಮಠದ ಒಳಗೆ ₹6 ಕೋಟಿ ವೆಚ್ಚದಲ್ಲಿ ಕಾಷ್ಠಶಿಲ್ಪ ಪೌಳಿ ಜೀರ್ಣೋದ್ಧಾರ ಕಾರ್ಯ, ಯಾತ್ರಿಕರಿಗಾಗಿ ವಸತಿ ಛತ್ರ, ಪಾಜಕದಲ್ಲಿ ಆನಂದ ತೀರ್ಥ ಶಾಲೆ ನಿರ್ಮಾಣ ಮಾಡಲಾಗಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.