ಉಡುಪಿ: ಮಳೆಗಾಲ ಕಳೆದು ಸಮುದ್ರ ಶಾಂತವಾಗುತ್ತಿದ್ದಂತೆ ಜಿಲ್ಲೆಯ ಕಡಲ ತೀರಗಳಲ್ಲಿ ಮತ್ತೆ ಪ್ರವಾಸೋದ್ಯಮ ಚಟುವಟಿಕೆಗಳು ಚುರುಕುಗೊಂಡಿದ್ದು, ಜಲ ಕ್ರೀಡೆಗಳ (ವಾಟರ್ ಸ್ಫೋರ್ಟ್ಸ್) ಮೋಜು ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಉಡುಪಿಯ ಮಲ್ಪೆ, ಕಾಪು, ಕುಂದಾಪುರ ಬೀಚ್‌ಗಳಲ್ಲಿ ಪವರ್ ಬೋಟ್‌ಗಳು ಅಬ್ಬರಿಸಿದರೆ, ಪ್ಯಾರಾಸೈಲಿಂಗ್ ಪ್ರವಾಸಿಗರ ಆನಂದವನ್ನು ಆಕಾಶದೆತ್ತರಕ್ಕೇರಿಸಿದೆ. ಹಿನ್ನೀರು ಪ್ರದೇಶಗಳಲ್ಲಿ ಕಯಾಕಿಂಗ್ ಪ್ರವಾಸಿಗರ ಆನಂದವನ್ನು ಹೆಚ್ಚಿಸುತ್ತಿವೆ. ಜೆಟ್ ಸ್ಕೀ ರೈಡ್, ಬನಾನ ಬೋಟ್ ರೈಡ್, ಪವರ್ ಬೋಟ್ ರೈಡ್ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಮುದ ನೀಡುತ್ತವೆ.
ರಜಾದಿನಗಳಲ್ಲಿ ವಾರಾಂತ್ಯಗಳಲ್ಲಿ ಬೀಚ್‌ಗಳಿಗೆ ಭೇಟಿ ನೀಡುವ ಸ್ಥಳೀಯರು, ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುತ್ತಿವೆ ಪ್ರವಾಸೋದ್ಯಮ ಇಲಾಖೆಯ ಮೂಲಗಳು.
ಜಿಲ್ಲೆಯಲ್ಲಿ ಬೀಚ್ ಮತ್ತು ದೇಗುಲ ಪ್ರವಾಸೋದ್ಯಮವೇ ಪ್ರಮುಖವಾಗಿದ್ದು, ಇಲ್ಲಿನ ದೇವಾಲಯಗಳಿಗೆ ಬರುವ ಜನರು ಬೀಚ್‌ಗಳಿಗೂ ಭೇಟಿ ನೀಡಿ, ಜಲಕ್ರೀಡೆಗಳ ಆನಂದ ಸವಿದೇ ಊರಿಗೆ ಮರಳುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಿಗೆ ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇವರಲ್ಲಿ ಬಹುತೇಕರು ಕುಂದಾಪುರ, ಮಲ್ಪೆ ಬೀಚ್‌ಗಳಿಗೆ ಭೇಟಿ ನೀಡಿಯೇ ಮನೆಗೆ ಮರಳುತ್ತಾರೆ.
ಪ್ರವಾಸಿಗರನ್ನು ಬೀಚ್‌ಗಳತ್ತ ಸೆಳೆಯುವ ಉದ್ದೇಶದಿಂದಲೇ ಬಗೆ ಬಗೆಯ ಜಲ ಕ್ರೀಡೆಗಳನ್ನು ಆರಂಭಿಸಲಾಗಿದೆ. ಜೊತೆಗೆ ಇನ್ನಷ್ಟು ಜನರನ್ನು ಆಕರ್ಷಿಸಲು ಹೆಚ್ಚಿನ ಪ್ರಚಾರ ನೀಡುತ್ತಿದ್ದೇವೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆಯ ಮೂಲಗಳು.
ಹೆಜಮಾಡಿ, ಮರವಂತೆ, ಸಾಲಿಗ್ರಾಮ ಮೊದಲಾದೆಡೆ ಹಿನ್ನೀರಿನಲ್ಲಿ ಕಯಾಕಿಂಗ್ ಸೌಲಭ್ಯವಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ 3ರಿಂದ ನಾಲ್ಕು ಅಡಿ ಆಳವಿರುವ ನೀರಿನಲ್ಲಿ ಮಾತ್ರ ಕಯಾಕಿಂಗ್‌ಗೆ ಅವಕಾಶ ನೀಡುತ್ತೇವೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು.
ಮಲ್ಪೆಯ ಪ್ಲೋಟಿಂಗ್ ಬ್ರಿಡ್ಜ್‌ಗೆ (ತೇಲುವ ಸೇತುವೆ) ವಾರಾಂತ್ಯದಲ್ಲಿ ಸಾವಿರಕ್ಕೂ ಹೆಚ್ಚು ಜನ ತೆರಳುತ್ತಾರೆ. ಈ ಬಾರಿಯೂ ಪ್ರವಾಸಿಗರನ್ನು ಆಕರ್ಷಿಸಲು ಬ್ಲಾಗರ್ಸ್ ಮೀಟ್ ಮಾಡಲಾಗುವುದು. ಈ ಸಲ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನಪ್ರಿಯರಾಗಿರುವವರನ್ನೇ ಕರೆಸಲಾಗುವುದು ಎಂದೂ ಹೇಳಿದರು.
‘ಸ್ಕೂಬಾ ಡೈವಿಂಗ್ ಉತ್ತಮ ಪ್ರತಿಕ್ರಿಯೆ’
ಪ್ರವಾಸಿಗರನ್ನು ಆಕರ್ಷಿಸಲು ಕಾಪು ಮತ್ತು ಕೊಡಿಯಲ್ಲಿ ಸ್ಕೂಬಾ ಡೈವಿಂಗ್ ಆರಂಭಿಸಿದ್ದು ಅದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನ ದೊರಕಿದೆ. ಸ್ಕೂಬಾ ಡೈವಿಂಗ್ ನಡೆಸುವವರು 12 ವರ್ಷದಿಂದ 60 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಎಲ್ಲಾ ರೀತಿಯ ಸುರಕ್ಷತಾ ಮಾನದಂಡಗಳನ್ನು ಬಳಸಿಕೊಂಡು ಅವರನ್ನು ಸ್ಕೂಬಾ ಡೈವಿಂಗ್‌ಗೆ ಕರೆದೊಯ್ಯಲಾಗುತ್ತದೆ. ನುರಿತ ತರಬೇತುದಾರರು ಸ್ಕೂಬಾ ಡೈವಿಂಗ್ ಹೋಗುವವರಿಗೆ ಮೊದಲು ಅಳವಿಲ್ಲದ ಜಾಗದಲ್ಲಿ ತರಬೇತಿ ಕೊಟ್ಟು ಬಳಿಕ ಕರೆದೊಯ್ಯುತ್ತಾರೆ. ಸಮುದ್ರದಲ್ಲಿ 25ರಿಂದ 30 ಅಡಿ ಆಳಕ್ಕೆ ಕರೆದೊಯ್ಯಲಾಗುತ್ತದೆ. ಸಮುದ್ರದಾಳದ ಹವಳ ಮೀನುಗಳನ್ನು ತೋರಿಸುವ ಸಲುವಾಗಿ ಸ್ಕೂಬಾ ಡೈವಿಂಗ್ ಆರಂಭಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು. ತಿಳಿಸಿದರು.
‘ಮಲ್ಪೆ ಬೀಚ್‌ಗೆ ದಿನಕ್ಕೆ 10 ಸಾವಿರ ಜನ ಭೇಟಿ’
ಮಲ್ಪೆ ಬೀಚ್‌ಗೆ ವಾರಂತ್ಯದಲ್ಲಿ ಒಂದೇ ದಿನ 5 ಸಾವಿರದಿಂದ 6 ಸಾವಿರ ಜನರು ಭೇಟಿ ನೀಡುತ್ತಾರೆ. ಸರಣಿ ರಜೆ ಇದ್ದರೆ ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನಿಡುತ್ತಾರೆ. ರಜಾ ದಿನಗಳಲ್ಲಿ ಬೆಳಿಗ್ಗೆಯಿಂದಲೇ ಜನರು ಮಲ್ಪೆ ಬೀಚ್‌ಗೆ ಭೇಟಿ ನೀಡುತ್ತಾರೆ. ಚಂಡಮಾರುತ ಕಾರಣದಿಂದ ಮಳೆ ಬಂದರೆ ಬೀಚ್‌ಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸಬೇಕಾಗುತ್ತದೆ. ಪ್ರತಿ ವರ್ಷವೂ ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕ್ರಿಸ್‌ಮಸ್ ರಜೆ ಇರುವುದರಿಂದ ಬೇರೆ ರಾಜ್ಯಗಳ ಜನರೂ ಬರುತ್ತಾರೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ
ಸುರಕ್ಷತೆಗೆ ಆದ್ಯತೆ
ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬೀಚ್ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಸಾಕಷ್ಟು ಜೀವರಕ್ಷಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಬೀಚ್‌ಗಳಲ್ಲೂ ಪ್ರವಾಸಿಗರು ಸಮುದ್ರದ ಆಳ ಪ್ರದೇಶಕ್ಕೆ ತೆರಳದಂತೆ ಇವರು ನಿಗಾ ವಹಿಸುತ್ತಾರೆ. ಸಾರಂಗ ಪ್ರಮಾಣಪತ್ರ ಪಡೆದವರನ್ನೇ ಜಿವರಕ್ಷಕ ಸಿಬ್ಬಂದಿಯಾಗಿ ನೇಮಿಸಲಾಗುತ್ತಿದೆ ಎಂದು ಕುಮಾರ್ ಸಿ.ಯು. ತಿಳಿಸಿದರು.
ಮಳೆಗಾಲದಲ್ಲಿ ಸ್ತಬ್ಧ ಜಿಲ್ಲೆಯ ಪ್ರವಾಸೋದ್ಯಮವು ಪ್ರಮುಖವಾಗಿ ಬೀಚ್‌ಗಳನ್ನೇ ಆಧರಿಸಿದೆ. ಆದರೆ ಮಳೆಗಾಲ ನಾಲ್ಕು ತಿಂಗಳು ಇಲ್ಲಿನ ಎಲ್ಲಾ ಚಟುವಟಿಕೆಗಳು ಸ್ಥಬ್ದಗೊಳ್ಳುತ್ತವೆ. ಈ ಅವಧಿಯಲ್ಲಿ ಸಮುದ್ರವು ಬೋರ್ಗರೆಯುವುದರಿಂದ ಪ್ರವಾಸಿಗರ ಸುರಕ್ಷತೆಗಾಗಿ ಬೀಚ್‌ಗಳಲ್ಲಿ ನೀರಿಗಿಳಿಯದಂತೆ ಬೇಲಿ ಹಾಕಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.