ADVERTISEMENT

ಕುಂದಾಪುರ: ‘ಕನ್ನಡ ಶಾಲೆಗಳ ಉಳಿವಿಗೆ ಚಿಂತನೆ ನಡೆಸಬೇಕು’

18ನೇ ಕುಂದಾಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನ:

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 5:43 IST
Last Updated 20 ಫೆಬ್ರುವರಿ 2023, 5:43 IST
ಕುಂದಾಪುರ ತಾಲ್ಲೂಕು 18ನೇ ಸಾಹಿತ್ಯ ಸಮ್ಮೇಳನ ‘ಗಂಗಾವಳಿ ಅನಿಮಿಷದ ಗುಣಗಾನ’ವನ್ನು ಹೋಟೆಲ್ ಉದ್ಯಮಿ ಜಗನ್ನಾಥ ವಿ.ಪೈ ಗಂಗೊಳ್ಳಿ ಭಾನುವಾರ ಉದ್ಘಾಟಿಸಿದರು
ಕುಂದಾಪುರ ತಾಲ್ಲೂಕು 18ನೇ ಸಾಹಿತ್ಯ ಸಮ್ಮೇಳನ ‘ಗಂಗಾವಳಿ ಅನಿಮಿಷದ ಗುಣಗಾನ’ವನ್ನು ಹೋಟೆಲ್ ಉದ್ಯಮಿ ಜಗನ್ನಾಥ ವಿ.ಪೈ ಗಂಗೊಳ್ಳಿ ಭಾನುವಾರ ಉದ್ಘಾಟಿಸಿದರು   

ಕುಂದಾಪುರ: ‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮುಚ್ಚುತ್ತಿರುವ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆಯಿದೆ’ ಎಂದು ಬೆಂಗಳೂರು ಹೋಟೆಲ್ ಉದ್ಯಮಿ ಜಗನ್ನಾಥ ವಿ.ಪೈ ಗಂಗೊಳ್ಳಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲ್ಲೂಕು ಘಟಕದ ಆಶ್ರಯದಲ್ಲಿ ಗಂಗೊಳ್ಳಿ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಕುಂದಾಪುರ ತಾಲ್ಲೂಕು 18ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿನ ಬಹುತೇಕ ಉನ್ನತ ಹುದ್ದೆಗಳು ಬೇರೆ ರಾಜ್ಯದವರ ಪಾಲಾಗುತ್ತಿರುವುದನ್ನು ತಡೆಗಟ್ಟಿ, ಸ್ಥಳೀಯರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಸಮ್ಮೇಳನಾಧ್ಯಕ್ಷ ಕೋ.ಶಿವಾನಂದ ಕಾರಂತ ಮಾತನಾಡಿ, ‘ಸಂಸ್ಕೃತಿಯ ಗೂಡನ್ನು ಹೊಂದಿರುವ ಕನ್ನಡ ಭಾಷೆ ನಾಡಿನಲ್ಲಿ ಉಳಿ ಯಬೇಕಾದರೆ ಭಾಷಾಭಿಮಾನ ಹೆಚ್ಚಾ ಗಬೇಕು. ಇದಕ್ಕೆ ಸರ್ಕಾರ ವಿಶೇಷ ಒತ್ತು ನೀಡಬೇಕು’ ಎಂದು ಆಗ್ರಹಿಸಿದರು.

ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದರು. ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಪುಸ್ತಕ ಬಿಡುಗಡೆ ಮಾಡಿದರು. ಆಶಯ ಭಾಷಣ ಮಾಡಿದ ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕನ್ನಡ ಧ್ವಜ ಹಸ್ತಾಂತರಿಸಿದರು. ಎಸ್.ವಿ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಾಹಿತಿ ಬೆಳಗೋಡು ರಮೇಶ್ ಭಟ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಸ್ವಾಗತಿಸಿ, ಗೌರವ ಕಾರ್ಯದರ್ಶಿ ದಿನಕರ ಆರ್ ಶೆಟ್ಟಿ ನಿರೂಪಿಸಿದರು. ಗೌರವ ಕೋಶಾಧ್ಯಕ್ಷ ಮಂಜುನಾಥ ಕೆ.ಎಸ್. ವಂದಿಸಿದರು.

ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್, ಸ್ವಾಗತ ಸಮಿತಿ ಅಧ್ಯಕ್ಷ ಗಣೇಶ್ ಕಾಮತ್, ಕುಂದಪ್ರಭ ಸಂಸ್ಥೆಯ ಯು.ಎಸ್ ಶೆಣೈ, ಎಸ್.ವಿ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ, ಕುಸುಮ ಕಾರಂತ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಶಾಧ್ಯಕ್ಷ ಮನೋಹರ್ ಪಿ, ಕುಂದಾಪುರ ತಾಲ್ಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಅಕ್ಷತಾ ಗಿರೀಶ್, ಉಡುಪಿ ಕ.ಸಾ.ಪ ಅಧ್ಯಕ್ಷ ರವಿರಾಜ್, ಕಾಪು ಅಧ್ಯಕ್ಷ ಪುಂಡಲೀಕ ಮರಾಠೆ, ಹೆಬ್ರಿ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಬೈಂದೂರು ಅಧ್ಯಕ್ಷ ರಘು ನಾಯ್ಕ್, ಕಾರ್ಕಳ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ಅಧ್ಯಕ್ಷ ರಾಮಚಂದ್ರ ಐತಾಳ್, ಉಮೇಶ್ ಕುಂದರ್ ಗಂಗೊಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.