ಉಡುಪಿ: ರಾಜ್ಯದಲ್ಲಿ ಏ.18ರಂದು ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ14 ಜಿಲ್ಲೆಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಅರಿಯಲು ವೆಬ್ ಕಾಸ್ಟಿಂಗ್ ಅಳವಡಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ರಾಜ್ಯದಲ್ಲೇ ಉಡುಪಿ ಜಿಲ್ಲೆ ಶೇ 100 ಸಾಧನೆ ಮಾಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ರಾಜ್ಯದ ಇತರೆಜಿಲ್ಲೆಗಳ ಮತಗಟ್ಟೆಗಳಲ್ಲಿ ಅಳವಡಿಸಿದ್ದ ವೆಬ್ ಕ್ಯಾಮೆರಾಗಳಲ್ಲಿ ಕೆಲವು ಸಮರ್ಪಕವಾಗಿ ಕಾರ್ಯ ನಿರ್ವಹಿಸಿರಲಿಲ್ಲ. ಆದರೆ, ಉಡುಪಿ ಜಿಲ್ಲೆಯ ಮತಗಟ್ಟೆಗಳಲ್ಲಿ ಅಳವಡಿಸಿದ್ದ ಎಲ್ಲ 54 ಕೆಮೆರಾಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿವೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ 54 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಪರಿಶೀಲಿಸಲು ಹಾಗೂ ಮತಗಟ್ಟೆಗಳಲ್ಲಿ ಅಹಿತಕರ ಘಟನೆಗಳು ನಡದರೆ ತಕ್ಷಣ ಕ್ರಮ ಕೈಗೊಳ್ಳಲು ವೆಬ್ ಕೆಮೆರಾಗಳನ್ನು ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ವೆಬ್‌ಕಾಸ್ಟಿಂಗ್ ಪ್ರಕ್ರಿಯೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಳವಡಿಸಲಾಗಿದ್ದ 110 ವೆಬ್ ಕ್ಯಾಮೆರಾಗಳಲ್ಲಿ 104 ಕೆಮೆರಾಗಳು ಕಾರ್ಯ ನಿರ್ವಹಿಸಿವೆ. ಹಾಗೆಯೇ ಮೈಸೂರಿನ 179ರಲ್ಲಿ 163, ಚಿತ್ರದುರ್ಗದ 80 ರಲ್ಲಿ 66, ತುಮಕೂರಿನ 140ರಲ್ಲಿ 131, ಮಂಡ್ಯದ 101ರಲ್ಲಿ 89, ಬೆಂಗಳೂರು ಸೆಂಟ್ರಲ್‌ನ 87 ರಲ್ಲಿ 69, ಬೆಂಗಳೂರು ಉತ್ತರ ಕ್ಷೇತ್ರದ 101ರಲ್ಲಿ 95, ಕೋಲಾರದ 100ರಲ್ಲಿ 86, ರಾಮನಗರದ 60ರಲ್ಲಿ 59, ಬೆಂಗಳೂರು ದಕ್ಷಿಣದ 100ರಲ್ಲಿ 91 , ಬೆಂಗಳೂರು ನಗರ ವ್ಯಾಪ್ತಿಯ 100ರಲ್ಲಿ 95 , ಹಾಸನ ವ್ಯಾಪ್ತಿಯ 134ರಲ್ಲಿ 129, ಚಿಕ್ಕಬಳ್ಳಾಪುರದ 70ರಲ್ಲಿ 69 ವೆಬ್ ಕ್ಯಾಮೆರಾಗಳು ಕಾರ್ಯ ನಿರ್ವಹಿಸಿವೆ ಆದರೆ, ಉಡುಪಿಯ 54ರಲ್ಲಿ 54 ಕಾರ್ಯ ನಿರ್ವಹಿಸಿವೆ.
ಜಿಲ್ಲಾಧಿಕಾರಿ ಹಾಗೂಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ನಿರ್ದೇಶದನದಲ್ಲಿ ಏ.7ರಿಂದಲೇ ಜಿಲ್ಲೆಯ 54 ಮತಗಟ್ಟೆಗಳಿಗೆ ಭೇಟಿನೀಡಿ, ವಿದ್ಯುತ್ ವ್ಯವಸ್ಥೆ, ಸಿಗ್ನಲ್ ದೊರೆಯುವ ಸ್ಥಳಗಳನ್ನು ಗುರುತಿಸಲಾಗಿತ್ತು. ಸಂಬಂದಪಟ್ಟ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಅಗತ್ಯ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಲಾಗಿತ್ತು.
ಎಲ್ಲಾ ಮತಗಟ್ಟೆಗಳನ್ನು ವ್ಯವಸ್ಥಿತಗೊಳಿಸಿದ ಬಳಿಕ ಮತದಾನ ಹಿಂದಿನ ದಿನವೂ ಮತಗಟ್ಟೆಗಳಿಗೆ ಭೇಟಿನೀಡಿ, ಮತಗಟ್ಟೆ ಅಧಿಕಾರಿಗಳಿಗೆ ವೆಬ್ ಕೆಮೆರಾ ಅಳವಡಿಸಿದ ಪ್ಗಗ್ ಬದಲಾಯಿಸದಂತೆ, ಸೂಕ್ತ ಸ್ಥಳದಲ್ಲಿ ಮತದಾನದ ಸ್ಥಳ ನಿರ್ಮಾಣ ಮಾಡುವಂತೆ ಸೂಚಿಸಲಾಗಿತ್ತು ಎಂದು ಜಿಲ್ಲಾ ವೆಬ್ ಕಾಸ್ಟಿಂಗ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಸರ ಅಧಿಕಾರಿ ಡಾ.ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಏ.23ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ 16 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕೆಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.