ADVERTISEMENT

ಶಿರ್ವ: ಸೊರ್ಕಳ ಕೆರೆಯ ಅಭಿವೃದ್ಧಿ ಯಾವಾಗ?

18 ವರ್ಷಗಳೂ ಕಳೆದರೂ ಹೂಳೆತ್ತುವ ಕಾಮಗಾರಿ ಇ್ಲಲ

​ಪ್ರಜಾವಾಣಿ ವಾರ್ತೆ
Published 15 ಮೇ 2024, 7:57 IST
Last Updated 15 ಮೇ 2024, 7:57 IST
ಮೂರು ಗ್ರಾಮಗಳಿಗೆ ನೀರುಣಿಸುವ ಸೊರ್ಕಳ ಕೆರೆ ಹೂಳು ತುಂಬಿ ಸೊರಗಿದೆ
ಮೂರು ಗ್ರಾಮಗಳಿಗೆ ನೀರುಣಿಸುವ ಸೊರ್ಕಳ ಕೆರೆ ಹೂಳು ತುಂಬಿ ಸೊರಗಿದೆ   

ಶಿರ್ವ: ಕಾಪು ವಿಧಾನಸಭಾ ಕ್ಷೇತ್ರದ ಕುತ್ಯಾರು, ಶಿರ್ವ, ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರುಣಿಸುತ್ತಿದ್ದ ಸೊರ್ಕಳ ಕೆರೆ ಹೂಳು ತುಂಬಿಕೊಂಡು ಸೊರಗಿ ಹೋಗಿದ್ದು, ಕೆರೆಯ ಅಭಿವೃದ್ಧಿ ಕಾರ್ಯ ತುರ್ತಾಗಿ ನಡೆಯಬೇಕಿದೆ.

10 ಎಕರೆ ಪ್ರದೇಶದಲ್ಲಿರುವ ಸೊರ್ಕಳ ಕೆರೆಯ 7.55 ಎಕರೆ ಪ್ರದೇಶವು ಕುತ್ಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟರೆ, ಉಳಿದ ಭಾಗ ಶಿರ್ವ ಹಾಗೂ ಮುದರಂಗಡಿ ಗ್ರಾಮ ಪಂಚಾಯಿತಿಯ ಪಿಲಾರು ಗ್ರಾಮದ ವ್ಯಾಪ್ತಿಗೆ ಸೇರಿದೆ.

ಕೆರೆಯನ್ನು ಜಿಲ್ಲಾ ಪಂಚಾಯಿತಿಯ 11ನೇ ಹಣಕಾಸು ಯೋಜನೆಯಡಿ 2003–04ರಲ್ಲಿ ಮಂಜೂರಾದ ಹಣದಿಂದ 2005–06ರಲ್ಲಿ ಕುತ್ಯಾರು ಗ್ರಾಮ ಪಂಚಾಯಿತಿ ವತಿಯಿಂದ ₹3.6 ಲಕ್ಷ ವೆಚ್ಚದಲ್ಲಿ ಹೂಳೆತ್ತಲಾಗಿತ್ತು. ಅದಾಗಿ 18 ವರ್ಷ ಕಳೆದರೂ ಹೂಳೆತ್ತುವ ಕಾಮಗಾರಿ ನಡೆದಿಲ್ಲ. ಇದರಿಂದ ಕೆರೆಯ ವಿಸ್ತೀರ್ಣವೂ ಕ್ಷೀಣಿಸುತ್ತಿದೆ.

ADVERTISEMENT

ಈ ಭಾಗದ ಕೃಷಿಕರು ಸೊರ್ಕಳ ಕೆರೆಯ ನೀರನ್ನೇ ನಂಬಿಕೊಂಡು ಭತ್ತ, ಅಡಿಕೆ, ತೆಂಗು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ, ಕಾಲ ಕ್ರಮೇಣ ಕೆರೆಯ ಹೂಳೆತ್ತುವ ಕಾಮಗಾರಿ ನಡೆಯದೆ, ತೋಡುಗಳ ನಿರ್ವಹಣೆಯೂ ಇಲ್ಲದೆ ಕಸ ಕಡ್ಡಿ ತುಂಬಿಕೊಂಡಿದೆ.

ಪ್ರತಿ ವರ್ಷ ಕಾವೇರಿ ಸಂಕ್ರಮಣದಂದು ಗ್ರಾಮಸ್ಥರೆಲ್ಲ ಸೇರಿ ಕೆರೆಯಿಂದ ಹೊರ ಹೋಗುವ ನೀರಿಗೆ ಅಣೆಕಟ್ಟು ಕಟ್ಟುವ ಪದ್ಧತಿಯೂ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಈ ಪದ್ಧತಿ ನಿಂತು ಹೋಗಿ ಅಣೆಕಟ್ಟಿನ ನಿರ್ವಹಣೆಯಿಲ್ಲದೆ ಕೃಷಿಯೂ ಇಲ್ಲ. ಜೊತೆಗೆ ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ.

ವಿಸ್ತಾರವಾಗಿ ಹರಡಿಕೊಂಡಿರುವ ಸೊರ್ಕಳ ಕೆರೆಯ ಹೂಳೆತ್ತುವ ಕಾಮಗಾರಿ ನಡೆದು ಸಮಗ್ರ ಅಭಿವೃದ್ಧಿ ಹೊಂದಿದಲ್ಲಿ, ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತದೆ. ಅಲ್ಲದೆ ಪರಿಸರದ ಬಾವಿಗಳಲ್ಲಿಯೂ ನೀರಿನ ಒರತೆ ಹೆಚ್ಚಾಗುವ ಸಾಧ್ಯತೆಯಿದೆ.

ಒಂದು ಬದಿಯಲ್ಲಿ ಬಂಡೆಕಲ್ಲು ಜೊತೆಗೆ ಪ್ರಕೃತಿದತ್ತ ಸೌಂದರ್ಯದಿಂದ ಕಂಗೊಳಿಸುತ್ತಿರುವ 10 ಎಕರೆ ಪ್ರದೇಶದ ಈ ಕೆರೆಯನ್ನು ಹೂಳು ತೆಗೆದು ಅಭಿವೃದ್ಧಿ ಪಡಿಸಿದಲ್ಲಿ ಪ್ರವಾಸಿ ತಾಣವಾಗಿಯೂ ಮಾಡಬಹುದು. ಕೆರೆಯು ವರ್ಷವಿಡೀ ನೀರಿನಿಂದ ತುಂಬಿದ್ದು, ಸರಿಯಾದ ನಿರ್ವಹಣೆಯ ಜೊತೆ ಸುತ್ತಲು ವಾಕಿಂಗ್ ಟ್ರ್ಯಾಕ್‌, ಬೋಟಿಂಗ್, ವಿಶ್ರಾಂತಿಗಾಗಿ ಆಸನ ವ್ಯವಸ್ಥೆ ಕಲ್ಪಿಸಿದಲ್ಲಿ ನಿತ್ಯ ನೂರಾರು ಜನರು ಪ್ರಕೃತಿ ಸೌಂದರ್ಯ ಸವಿಯಲು ಬರುತ್ತಾರೆ. ಆದ್ದರಿಂದ ಶಿರ್ವ, ಮುದರಂಗಡಿ, ಕುತ್ಯಾರಿನ ಗ್ರಾಮ ಪಂಚಾಯಿತಿಗಳು ಒಮ್ಮನಸ್ಸಿನಿಂದ ಒಗ್ಗಟ್ಟಾಗಿ ಕೆರೆಯ ಅಭಿವೃದ್ಧಿ ಕಾಮಗಾರಿ ಬಗ್ಗೆ ಚಿಂತನೆ ನಡೆಸಿ, ನೀರಾವರಿ ಇಲಾಖೆಗೆ ಮನವಿ ಮಾಡುವ ಮೂಲಕ ಸೊರ್ಕಳ ಕೆರೆಯ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹ.

ಮೂರು ಗ್ರಾಮಗಳಿಗೆ ನೀರುಣಿಸುವ ಸೊರ್ಕಳ ಕೆರೆ ಹೂಳು ತುಂಬಿ ಸೊರಗಿದೆ

ಸಾವಿರಾರು ಎಕರೆ ಕೃಷಿಭೂಮಿಗೆ ವರದಾನ ಸೊರ್ಕಳ ಕೆರೆ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದರಿಂದ ಇದರ ನಿರ್ವಹಣೆಯ ಬಗ್ಗೆ ಸಮಗ್ರ ಚಿಂತನೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಗಳ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಈ ಕೆರೆ ಅಭಿವೃದ್ಧಿಯಾದಲ್ಲಿ ಸಾವಿರಾರು ಎಕರೆ ಕೃಷಿಭೂಮಿಗೆ ವರದಾನವಾಗಲಿದೆ ಎಂದು ಕುತ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷ ಜನಾರ್ದನ ಆಚಾರ್ಯ ಹೇಳಿದರು.

ಕೆರೆ ಅಭಿವೃದ್ಧಿ ಬಗ್ಗೆ ಚಿಂತನೆ ಕೆರೆ ಅಭಿವೃದ್ಧಿಯ ಕುರಿತು ಮೂರು ಗ್ರಾಮ ಪಂಚಾಯತಿ ಆಡಳಿತಗಳು ಜೊತೆಯಾಗಿ ಚರ್ಚಿಸಿ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕುತ್ಯಾರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಜನಿ ರಾವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.