ADVERTISEMENT

ಉಡುಪಿ | ವಿಶ್ವ ಬಂಟರ ಸಮ್ಮೇಳನ: ಬಂಟರ ಕ್ರೀಡೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 6:46 IST
Last Updated 28 ಅಕ್ಟೋಬರ್ 2023, 6:46 IST
   

ಉಡುಪಿ: ಜಾಗತಿಕ ಬಂಟರ ಒಕ್ಕೂಟದ ವತಿಯಿಂದ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು.

ಬೆಳಿಗ್ಗೆ ಬೋರ್ಡ್ ಹೈಸ್ಕೂಲ್ ಎದುರು ಸಾಲಂಕೃತ ಮೆರವಣಿಗೆಗೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಬಾರ್ಕೂರು ಭಾರ್ಗವ ಮಹಾಸಂಸ್ಥಾನದ ವಿಶ್ವ ಸಂತೋಷ್ ಭಾರತಿ ಸ್ವಾಮೀಜಿ ಚಾಲನೆ ನೀಡಿದರು.

ಬಂಟರ ಸಾಂಸ್ಕೃತಿಕ ಶ್ರೀಮಂತಿಕೆ ಮೆರವಣಿಗೆಯಲ್ಲಿ ಬಿಂಬಿತವಾಗಿತ್ತು. ಕಂಬಳದ ಕೋಣಗಳನ್ನು ಹಿಡಿದು ಸಾಗಿದ ಕಂಬಳ ಓಟಗಾರರು ಗಮನ ಸೆಳೆದರು.

ADVERTISEMENT

ಕಡೆಗೋಲು ಕೃಷ್ಣ, ಕಟೀಲು ದುರ್ಗಾ ಪರಮೇಶ್ವರಿ ದೇವರ ಸ್ಥಬ್ಧಚಿತ್ರಗಳು, ಚಂಡೆ, ಕೀಲುಕುದುರೆ, ಕೇರಳದ ತೈಯಂ, ಹುಲಿವೇಷ, ಬ್ಯಾಂಡ್ ಸೆಟ್, ಡೋಲು, ವಾದ್ಯ, ನಾದಸ್ವರ, ವೇಷಧಾರಿಗಳು ಗಮನ ಸೆಳೆದರು.

ಮೆರವಣಿಗೆಯಲ್ಲಿ ನಾಡಿನ 60ಕ್ಕೂ ಹೆಚ್ಚು ಬಂಟರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮುದಾಯದ ನೂರಾರು ಕ್ರೀಡಾಪಟುಗಳು ಇದ್ದರು. ಸುಮಾರು ಒಂದು ಕಿ.ಮೀಗೂ ಉದ್ದದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಬೋರ್ಡ್ ಹೈಸ್ಕೂಲ್‌ನಿಂದ ಕೆ.ಎಂ ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆ‌ ಮಾರ್ಗವಾಗಿ ಸಾಗಿದ ಮೆರವಣಿಗೆ ಬಂಟರ ಕ್ರೀಡೋತ್ಸವ ನಡೆಯುವ ಜಿಲ್ಲಾ ಕ್ರೀಡಾಂಗಣ ತಲುಪಿತು.

ಕ್ರೀಡಾಂಗಣದಲ್ಲಿ ಬಂಟರ ಸಮುದಾಯದ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವ ಬಂಟರ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

29ರಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಮೈದಾನದಲ್ಲಿ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದ್ದು, ಗೃಹ ಸಚಿವ ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.