ADVERTISEMENT

ಉಡುಪಿ | ವಿಶ್ವ ಬಂಟರ ಸಮ್ಮೇಳನ: ಆಕರ್ಷಕ ಪಥ ಸಂಚಲನ, ಬಂಟರ ಒಗ್ಗಟ್ಟು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 7:45 IST
Last Updated 28 ಅಕ್ಟೋಬರ್ 2023, 7:45 IST
<div class="paragraphs"><p>ಆಕರ್ಷಕ ಪಥ ಸಂಚಲನ</p></div>

ಆಕರ್ಷಕ ಪಥ ಸಂಚಲನ

   

ಉಡುಪಿ: ದೇಶದ ವಿವಿಧ ಭಾಗಗಳಲ್ಲಿ ನೆಲೆಸಿ, ಅಲ್ಲೇ ಸಂಘಟನೆ ಕಟ್ಟಿಕೊಂಡ ಬಂಟರ ತಂಡಗಳು ಸಮವಸ್ತ್ರ ಧಾರಿಗಳಾಗಿ ಹೆಜ್ಜೆ ಹಾಕುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ‌ ಇಲ್ಲಿ ಏರ್ಪಡಿಸಿರುವ 'ವಿಶ್ವ ಬಂಟರ ಸಮ್ಮೇಳನ 2023'ರ ಅಂಗವಾಗಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಆಕರ್ಷಕ ಪಥ ಸಂಚಲನ ತುಳುನಾಡಿನ ನೆಲದ ಸಂಸ್ಕೃತಿ ಮತ್ತು ಬಂಟರ ನಡುವಿನ ನಂಟಿನ ಪ್ರದರ್ಶನಕ್ಕೆ ವೇದಿಕೆಯಾಯಿತು‌.

ADVERTISEMENT

ಪಥ ಸಂಚಲನದಲ್ಲಿ ಸಾಗಿಬಂದ ಕಂಬಳದ ಕೋಣಗಳು, ಹುಲಿ ವೇಷಧಾರಿಗಳು, ಚೆಂಡೆವಾದನ, ಯಕ್ಷಗಾನ ವೇಷ, ನೊಗ, ನೇಗಿಲು, ಏತ ನೀರಾವರಿಯ, ಮೊರಾಯಿ, ಮೊರ, ಕಲಶ, ಮೊದಲಾದ ಕೃಷಿ ಪರಿಕರಗಳೊಂದಿಗೆ ಸಾಗಿ ಬಂದ‌ ಬಂಟರ ಸಂಘದ ಪ್ರತಿನಿಧಿಗಳು ನೆಲದ ಸಂಪ್ರದಾಯಗಳ ಕುರಿತು ತಮಗೆಷ್ಟು ತುಡಿತವಿದೆ ಎಂಬುದನ್ನು ತೋರ್ಪಡಿಸಿದರು.

ಒಪ್ಪ ಓರಣವಾಗಿ ಸಮವಸ್ತ್ರ ಧರಿಸಿ ಬಿಗುಮಾನದಿಂದ ಹೆಜ್ಜೆ ಹಾಕಿದ ಬಂಟರ‌ ಸಂಘಗಳ ಪ್ರತಿನಿಧಿಗಳು ತಮ್ಮ ಸಂಘಟನೆಯ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸಿದರು. ಬಿಳಿ, ನೀಲಿ, ಹಸಿರು, ಗುಲಾಬಿ, ತಿಳಿ ನೀಲಿ, ಹಳದಿ, ಮೆರೂನ್, ಕೇಸರು ಹೀಗೆ ಬಗೆ ಬಗೆಯ ಬಣ್ಣದ ಸಮವಸ್ತ್ರ, ರಂಗು ರಂಗಿನ ಪೇಟಗಳು ಪ್ರತಿ ಸಂಘಟನೆಯ ವೈಶಿಷ್ಟ್ಯ ಸಾರಿದವು‌.

ಕೆಲವು ತಂಡಗಳು ರ಼ಾಷ್ಟ್ರಧ್ವಜದಲ್ಲಿರುವ ಕೇಸರಿ ಬಿಳಿ ಹಸಿರು ಬಣ್ಣಗಳ ಸಮವಸ್ತ್ರದ ಮೂಲಕ ಗಮನ ಸೆಳೆದವು. ಕೆಲವು ತಂಡಗಳ ಮಹಿಳಾ ಪ್ರತಿನಿಧಿಗಳು ಕಳಶ ಕೈಯಲ್ಲಿ ಹಿಡಿದು ಸಾಗಿದರೆ, ಮತ್ತೆ ಕೆಲವು ತಂಡಗಳ ಮಹಿಳೆಯರು ರಾಣಿ ಅಬ್ಬಕ್ಕನ ರೀತಿ ವೇಷ ಧರಿಸಿ ಪಥ ಸಂಚಲನದ ಮೆರುಗು ಹೆಚ್ಚಿಸಿದರು. ಇನ್ನು ಕೆಲವು ತಂಡಗಳ ಸದಸ್ಯರು ಆಕರ್ಷಕ ಸೀರೆ, ಧೋತಿಯ ಮೂಲಕ ಕರಾವಳಿಯ ಸಾಂಪ್ರದಾಯಿಕ ಉಡುಪುಗಳ ಗತ್ತುಗೈರತ್ತುಗಳ ಮೂಲಕ ಗಮನ‌ಸೆಳೆದರು. ‌

ಪಡುಬಿದ್ರಿ ತಂಡದ ಜೊತೆ ಸಾಗಿ ಬಂದ ಕಂಬಳದ ಕೋಣ ವೇದಿಕೆಗೆ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆಯಿತು.

‌62 ತಂಡಗಳಿಂದ ಪಥಸಂಚಲನ

ಪಡುಬಿದ್ರಿ, ಉಳ್ಳಾಲ, ಬಜಗೋಳಿ, ಮೀಂಜ, ಪುತ್ತೂರು, ಕಂಕನಾಡಿ, ಹಿರಿಯಡ್ಕ, ಬೈಂದೂರು, ಬೆಂಗಳೂರು, ಚಿಕ್ಕಮಗಳೂರು, ಶಂಕರಪುರ ಕಟಪಾಡಿ, ಕಳಸ, ಮೂಡುಬಿದಿರೆ, ಬಂಟ್ವಾಳ, ಅದ್ಯಪಾಡಿ, ಬಜಪೆ, ಮುಂಬೈ, ಮಂಜೇಶ್ವರ,ಕೊಡಗು, ಜೆಪ್ಪು, ಉಡುಪಿ ಗ್ರಾಮೀಣ, ಉಪ್ಪೂರು, ಪುತ್ತೂರು ನಗರ, ಗೋವಾ, ಜೆಪ್ಪಿನಮೊಗರು, ಸುರತ್ಕಲ್, ಸುಳ್ಯ, ಬೆಳ್ತಂಗಡಿ, ಕಾವೂರು, ಗುರುಪುರ, ಬೆಳ್ಮಣ್ಣು, ಬೆಳ್ಳಂಪಳ್ಳಿ, ಕುಕ್ಕುಂದೂರು, ಶಿರ್ವ, ಹಾವಂಜೆ, ಪುಣೆ, ಮೂಲ್ಕಿ, ಪಳ್ಳಿ ನಿಂಜೂರು, ಕುಂಬಳೆ ಕಾಸರಗೋಡು, ಮೈಸೂರು, ಕಾರ್ಕಳ, ಉಜಿರೆ, ಎಕ್ಕಾರು, ಕೊಡವೂರು, ಕುಂದಾಪುರ, ಉಡುಪಿ ಬಂಟರ‌ ಸಂಘಗಳ ತಂಡಗಳು ಸೇರಿದಂತೆ ಒಟ್ಟು 62 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.