ADVERTISEMENT

ವಿಶ್ವ ಹೃದಯ ದಿನ | ಹೃದ್ರೋಗ: ಅಕಾಲಿಕ ಮರಣ ಪ್ರಮಾಣ ಹೆಚ್ಚು

ವಿಶ್ವ ಹೃದಯ ದಿನ: ಕೆಎಂಸಿಯಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ, ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:15 IST
Last Updated 29 ಸೆಪ್ಟೆಂಬರ್ 2022, 13:15 IST
ಮಣಿಪಾಲದ ಕಸ್ತೂರ ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವಿಶ್ವ ಹೃದಯ ದಿನ ಆಚರಿಸಲಾಯಿತು.
ಮಣಿಪಾಲದ ಕಸ್ತೂರ ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವಿಶ್ವ ಹೃದಯ ದಿನ ಆಚರಿಸಲಾಯಿತು.   

ಉಡುಪಿ: ಮಣಿಪಾಲದ ಕಸ್ತೂರ ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ, ಹೃದಯ ರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗ, ಸಮುದಾಯ ವೈದ್ಯಕೀಯ ವಿಭಾಗಗಳ ಆಶ್ರಯದಲ್ಲಿ ಗುರುವಾರವಿಶ್ವ ಹೃದಯ ದಿನ ಆಚರಿಸಲಾಯಿತು.

ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ ಮಾಡಲಾಯಿತು. ಇದೇವೇಳೆ ಸಾರ್ವಜನಿಕರಿಗೆ ಉಚಿತವಾಗಿ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಪ್ರತಿವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದರು.

ADVERTISEMENT

ಕರಾವಳಿ ಭದ್ರತಾ ಪಡೆಯ ಎಸ್‌ಪಿಅಬ್ದುಲ್ ಅಹದ್ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣಗೊಳಿಸಿ ಮಾತನಾಡಿ, ಕುಟುಂಬದ ಮುಖ್ಯಸ್ಥ ಅಥವಾ ಮುಖ್ಯಸ್ಥೆಯ ಅಕಾಲಿಕ ಮರಣ ಕುಟುಂಬವನ್ನು ದೊಡ್ಡ ತೊಂದರೆಗೆ ಸಿಲುಕಿಸುತ್ತದೆ. ಅವಲಂಬಿತರ ಬಗ್ಗೆ ಒಮ್ಮೆ ಯೋಚಿಸಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಕಾಲಕಾಲಕ್ಕೆ ಹೃದಯ ತಪಾಸಣೆ ಮಾಡಿಸಿಕೊಂಡು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್‌ ಬಿಡುಗಡೆ ಮಾಡಿ ಮಾತನಾಡಿ, ಹೃದಯ ವ್ಯಕ್ತಿ ಜೀವಂತವಾಗಿರಲು ಯಂತ್ರದಂತೆ ಕೆಲಸ ಮಾಡುತ್ತದೆ. ದೇಹದ ಎಲ್ಲ ಜೀವಕೋಶಗಳಿಗೆ ರಕ್ತ, ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಪೂರೈಸುವ ಹೃದಯ ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನೂ ಮಾಡುತ್ತದೆ. ಇಂತಹ ಬಹುಮೂಲ್ಯ ಅಂಗವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ‘ಸಾರ್ವಜನಿಕರ ಬೇಡಿಕೆ ಮೇರೆಗೆ ಆಸ್ಪತ್ರೆಯಲ್ಲಿ ವಿಶೇಷ ಹೃದಯ ತಪಾಸಣಾ ‌ಪ್ಯಾಕೇಜ್ (₹ 3000), ಸುಧಾರಿತ ಹೃದಯ ತಪಾಸಣಾ ಪ್ಯಾಕೇಜ್ (₹ 4000) ಪರಿಚಯಿಸಲಾಗಿದೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಮಲ್ಪೆ ಭದ್ರತಾ ಪೊಲೀಸ್ ನಿರೀಕ್ಷಕ ಡಾ.ಎಸ್‌.ಕೆ.ಶಂಕರ್ ಉಪಸ್ಥಿತರಿದ್ದರು. ವಿಶ್ವ ಹೃದಯ ದಿನದ ಕುರಿತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಅವಲೋಕನ ನೀಡಿದರು. ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ಸ್ವಾಗತಿಸಿದರು. ಹೃದ್ರೋಗ ತಪಾಸಣೆ ಪ್ಯಾಕೇಜ್‌ಗಳ ಕುರಿತು ಮಾಹಿತಿ ನೀಡಿದರು.

ಹೃದಯನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್ ವಂದಿಸಿದರು. ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಪರಿಸರ ಸ್ನೇಹಿ ವಸ್ತುಗಳಿಂದ ಶಿಲ್ಪ ತಯಾರಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತವಾಗಿ, ಮಧುಮೇಹ, ರಕ್ತದ ಒತ್ತಡ, ಇಸಿಜಿ ಮತ್ತು ವೈದ್ಯರೊಂದಿಗೆ ಸಮಾಲೋಚನೆ ಸೇವೆಗಳನ್ನು ಒದಗಿಸಲಾಯಿತು. ಡಾ.ಈಶ್ವರಿ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.