ಉಡುಪಿ: ಕೋಡಿಬೆಂಗ್ರೆ ಗ್ರಾಮವು ತಂಬಾಕು ಮುಕ್ತ ಗ್ರಾಮವಾಗಬೇಕು ಎಂಬ ಗ್ರಾಮಸ್ಥರ 20 ವರ್ಷಗಳ ಶ್ರಮ ಫಲಿಸಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಘಟಕ ಸೇರಿದಂತೆ ಹಲವು ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ದಿನ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಮುಕ್ತ ಗ್ರಾಮವಾಗಿಸಲು ದಶಕಗಳ ಹಿಂದೆಯೇ ಶ್ರಮವಹಿಸುತ್ತಿರುವ ಕೋಡಿ ಬೆಂಗ್ರೆ ಗ್ರಾಮ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹವಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃಧ್ದಿ ಕಾರ್ಯಗಳಿಗೆ ಹಾಗೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಬದ್ಧ ಎಂದು ಶಾಸಕರು ಹೇಳಿದರು.
ಮುಖಂಡ ರಮೇಶ್ ಎಸ್.ತಿಂಗಳಾಯ ಮಾತನಾಡಿ, ಕೋಡಿಬೆಂಗ್ರೆ ಗ್ರಾಮ 290 ಮನೆಗಳನ್ನು ಹೊಂದಿದ್ದು, 1,375ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಂದು ಶಾಲೆ, 6 ದೇವಸ್ಥಾನ,1 ಮಸೀದಿ, 12 ದಿನಸಿ ಅಂಗಡಿಗಳನ್ನು ಒಳಗೊಂಡಿರುವ ಕೋಡಿಬೆಂಗ್ರೆ ತಂಬಾಕು ಮುಕ್ತವಾಗಿರುವುದು ವಿಶೇಷ ಎಂದರು.
ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ಪಾನಮತ್ತರಾಗುವುದನ್ನು ಕಂಡು ಊರಿನ ಹಿರಿಯರು ಮದ್ಯಪಾನ ಹಾಗೂ ನಶಾ ಮುಕ್ತ ಗ್ರಾಮವಾಗಿಸಲು ದೃಢ ಸಂಕಲ್ಪ ಮಾಡಿದ್ದರು. ಹಿರಿಯರ ಆಶಯ ಈಡೇರಿದೆ ಎಂದರು. ಗ್ರಾಮಸ್ಥರಿಗೆ ಸ್ಥಳೀಯ ವ್ಯಾಪಾರಿಗಳು ಕೈಜೋಡಿಸಿದ್ದು ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಅನಧಿಕೃತ ಮದ್ಯದಂಗಡಿ ತೆರವುಗೊಳಿಸುವಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾಗಿದೆ ಎಂದರು.
ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ರೋಗಗಳಿಂದ ದೂರವಿರಲು ದುಶ್ಚಟಗಳಿಂದ ದೂರ ಇರುವುದು ಏಕೈಕ ಮಾರ್ಗ ಎಂದರು.
ಮದ್ಯ ಮತ್ತು ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಿದ ಹಿರಿಯರು ಹಾಗೂ ಯುವಕರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಡಿಎಚ್‌ಒ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ನಾಗರತ್ನ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರೇಮಾನಂದ, ಉಡುಪಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಏಡ್ಸ್ ನಿಯಂತ್ರಣಾಧಿಕಾರಿ ಚಿದಾನಂದ ಸಂಜು, ತಾಲ್ಲೂಕು ಪಂಚಾಯಿತಿ ಇಒ ಇಬ್ರಾಹಿಂಪುರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವ ಕುಂದರ್, ದುರ್ಗಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಜಯ ಕುಂದರ್, ಮಣಿಪಾಲ ವಿವಿಯ ಡಾ.ಮುರಳೀಧರ್ ಕುಲಕರ್ಣಿ, ಕೋಡಿ ಬೆಂಗ್ರೆ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯ ಡಾ.ಸಚ್ಚಿದಾನಂದ, ಮುಖಂಡ ಬಿ.ಬಿ.ಕಾಂಚನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.