ADVERTISEMENT

ಶಿಶು ಸಾಹಿತ್ಯ ಎರಡನೇ ದರ್ಜೆಯದ್ದಲ್ಲ‌: ಸಾಹಿತಿ ಇಂದಿರಾ ಹಾಲಂಬಿ

‘ಅಕಲಂಕ ದತ್ತಿ ಪುರಸ್ಕಾರ’ ಸ್ವೀಕರಿಸಿ ಸಾಹಿತಿ ಇಂದಿರಾ ಹಾಲಂಬಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 4:18 IST
Last Updated 24 ಜೂನ್ 2024, 4:18 IST
‘ಅಕಲಂಕ ದತ್ತಿ ಪುರಸ್ಕಾರ’ವನ್ನು ಸಾಹಿತಿ ಇಂದಿರಾ ಹಾಲಂಬಿ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು
‘ಅಕಲಂಕ ದತ್ತಿ ಪುರಸ್ಕಾರ’ವನ್ನು ಸಾಹಿತಿ ಇಂದಿರಾ ಹಾಲಂಬಿ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು   

ಉಡುಪಿ: ಶಿಶು ಸಾಹಿತ್ಯ ಎಂದರೆ ಎರಡನೇ ದರ್ಜೆಯ ಸಾಹಿತ್ಯವಲ್ಲ. ಈ ಸಾಹಿತ್ಯ ಪ್ರಕಾರವು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿ ಅವರನ್ನು ಸತ್ಪ್ರಜೆಗಳನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಾಹಿತಿ ಇಂದಿರಾ ಹಾಲಂಬಿ ಪ್ರತಿಪಾದಿಸಿದರು.

ಉಪ್ಪಂಗಳ ರಾಮಭಟ್ಟ ಮತ್ತು ಶಂಕರಿ ಆರ್. ಭಟ್ಟ ಸ್ಥಾಪಿಸಿರುವ ಅಕಲಂಕ ಪ್ರಕಾಶನ ಮತ್ತು ಪ್ರತಿಷ್ಠಾನದ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನೀಡುವ 2023ನೇ ಸಾಲಿನ ‘ಅಕಲಂಕ ದತ್ತಿ ಪುರಸ್ಕಾರ’ವನ್ನು ಭಾನುವಾರ ಸ್ವೀಕರಿಸಿ ಅವರು ಮಾತನಾಡಿದರು.

ಎಳೆಯರಿಗೆ ಹಿರಿಯರು ಸರಿಯಾದ ದಾರಿ ತೋರಿಸಬೇಕು. ಆದರೆ ಇಂದು ಹಿರಿಯರಿಗೆ ಅದಕ್ಕೆಲ್ಲ ಸಮಯ ಸಿಗುವುದಿಲ್ಲ. ಆದ್ದರಿಂದ ಮಕ್ಕಳು ಮೊಬೈಲ್‌ ಗೀಳಿಗೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಟಿ.ವಿ., ಮೊಬೈಲ್‌ಗಳಲ್ಲಿ ಒಳ್ಳೆಯದು ಮತ್ತು ಕೆಟ್ಟ ವಿಚಾರಗಳು ಬರುತ್ತವೆ. ಆದರೆ ಯಾವುದನ್ನು ಸ್ವೀಕರಿಸಬೇಕು ಎಂಬುದನ್ನು ಹಿರಿಯರು ಮಕ್ಕಳಿಗೆ ಮನವರಿಗೆ ಮಾಡಬೇಕು. ಹಿಂದೆ ಪುಣ್ಯಕೋಟಿ ಕಥೆಯನ್ನು ಕೇಳುವಾಗ ಮಕ್ಕಳ ಕಣ್ಣಾಲಿಗಳು ತೇವಗೊಳ್ಳುತ್ತಿದ್ದವು, ಆದರೆ ಇಂದು ಟಿ.ವಿ.ಗಳಲ್ಲಿ ಹಿಂಸೆ, ಹೊಡೆದಾಟಗಳ ದೃಶ್ಯಗಳನ್ನು ನೋಡಿ ಮಕ್ಕಳು ಖುಷಿ ಪಡುತ್ತಿದ್ದಾರೆ. ಇದು ದುರಂತ ಎಂದರು.

ಭವಿಷ್ಯದ ಆಶಾಕಿರಣಗಳಾಗಿ ಕೆಲವು ಮಾದರಿ ವ್ಯಕ್ತಿತ್ವದ ಮಕ್ಕಳೂ ಇದ್ದಾರೆ. ಅಂಥವರ ಸಂಖ್ಯೆ ಹೆಚ್ಚಾಗಬೇಕು. ಅಕಲಂಕ ವ್ಯಕ್ತಿತ್ವದ ಮಹಾನ್‌ ವ್ಯಕ್ತಿ ಉಪ್ಪಂಗಳ ರಾಮಭಟ್ಟರ ಹೆಸರಿನ ಪ್ರಶಸ್ತಿ ಸ್ವೀಕರಿಸಿರುವುದರಿಂದ ಸಾರ್ಥಕ ಭಾವ ಮೂಡಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಜಿಎಂ ಕಾಲೇಜಿನ ಪ್ರಾಚಾರ್ಯ ಲಕ್ಷ್ಮಿನಾರಾಯಣ ಕಾರಂತ, ಎಂಜಿಎಂ ಕಾಲೇಜಿನ ಧೀಮಂತ ಪ್ರಾಧ್ಯಾಪಕರಾಗಿದ್ದ ಉಪ್ಪಂಗಳ ರಾಮಭಟ್ಟ ಅವರು, ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದರು ಮತ್ತು ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿದ್ದರು ಎಂದು ಹೇಳಿದರು.

ರಾಮಭಟ್ಟ ಅವರು ಕಾಲೇಜಿನಲ್ಲಿ ಸಾಹಿತ್ಯ ಸಂಘವನ್ನು ಕಟ್ಟಿಕೊಂಡು, ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದರು. ನಿವೃತ್ತಿಯ ಬಳಿಕವೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮಾರ್ಗದರ್ಶಕರಾಗಿ, ಹಲವಾರು ಸಂಶೋಧಕರಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ಬಣ್ಣಿಸಿದರು.

ಉಪನ್ಯಾಸಕರಾಗಿದ್ದ ರಾಮಭಟ್ಟರ ಹೆಸರಿನ ಪ್ರಶಸ್ತಿಯನ್ನು ಶಿಕ್ಷಕಿಗೆ ಪ್ರದಾನ ಮಾಡಿರುವುದು ಸಾರ್ಥಕ ಕಾರ್ಯ ಎಂದು ಹೇಳಿದರು.‌

ಕ.ಸಾ.ಪ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಭಾಷಣ ಮಾಡಿದರು. ಪೂರ್ಣಿಮಾ ಜನಾರ್ದನ ಅವರು ಕೃತಿ ಪರಿಚಯಿಸಿದರು. ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ದತ್ತಿ ದಾನಿಗಳಾದ ಶಂಕರಿ ಉಪ್ಪಂಗಳ ರಾಮ ಭಟ್ಟ, ರಾಜೇಶ ಯು. ಇದ್ದರು. ಕಾರ್ಯಕ್ರಮದಲ್ಲಿ ರಾಮಭಟ್ಟರ ಕವನಗಳ ವಾಚನ ನಡೆಯಿತು.

‌‘ಓದಿಸುವ ಕಾರ್ಯಕ್ರಮ ನಿರಂತರ ನಡೆಯಲಿ’

ಓದುವ ಓದಿಸುವ ಮತ್ತು ಸಾಹಿತ್ಯಾಸಕ್ತಿ ಬೆಳೆಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಸಾಹಿತಿ ಎಚ್‌. ಗೋಪಾಲ ಭಟ್‌ (ಕು.ಗೋ) ಆಶಿಸಿದರು. ಉಪ್ಪಂಗಳ ರಾಮ ಭಟ್ಟ ಅವರ ‘ಒಳ-ಹೊರಗೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಭಾಷಾತಜ್ಞ ರಾಮ ಭಟ್ಟರ ಹೆಸರಿನ ಪ್ರಶಸ್ತಿಯನ್ನು ‘ಅಕಲಂಕ’ ವ್ಯಕ್ತಿತ್ವದ ಇಂದಿರಾ ಹಾಲಂಬಿ ಅವರಿಗೆ ನೀಡಿರುವುದು ಸೂಕ್ತವಾಗಿದೆ ಎಂದರು. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಅದರಿಂದ ಸಾಹಿತ್ಯಾಸಕ್ತಿ ಮೂಡುವುದರ ಜೊತೆಗೆ ವ್ಯಕ್ತಿತ್ವವೂ ವಿಕಸನವಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.