ADVERTISEMENT

ಜನರ ಆರಾಧನೆಯಿಂದ ಬೆಳೆದ ಯಕ್ಷಗಾನ: ಸಚಿವ ಸುನಿಲ್‌ ಕುಮಾರ್‌

ಕಾರ್ಕಳದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:05 IST
Last Updated 2 ಏಪ್ರಿಲ್ 2022, 2:05 IST
ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಪಾರ್ತಿಸುಬ್ಬ ಪ್ರಶಸ್ತಿ’ಯನ್ನು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ‍ಪ್ರದಾನ ಮಾಡಿದರು. ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಕುಮಟಾ, ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ಆರತಿ ಪಟ್ರಮೆ ಇದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಪಾರ್ತಿಸುಬ್ಬ ಪ್ರಶಸ್ತಿ’ಯನ್ನು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ‍ಪ್ರದಾನ ಮಾಡಿದರು. ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಕುಮಟಾ, ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ಆರತಿ ಪಟ್ರಮೆ ಇದ್ದಾರೆ.   

ಕಾರ್ಕಳ: ‘ಸಾಹಿತ್ಯ ಸಂಗೀತ ಹಾಗೂ ಸಂಸ್ಕೃತಿಯಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂದಿದೆ. ಕರ್ನಾಟಕವು ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಇತರ ರಾಜ್ಯಗಳಿಗೆ ನೇತೃತ್ವ ವಹಿಸಬೇಕು. ಇದಕ್ಕೆ ಪೂರಕವಾದ ಪ್ರಯತ್ನವನ್ನು ಎಲ್ಲ ಕ್ಷೇತ್ರಗಳಲ್ಲೂ ಮಾಡಲಾಗುತ್ತಿದೆ’ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಇಲ್ಲಿನ ಭುವನೇಂದ್ರ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ರಾಜ್ಯ ಯಕ್ಷಗಾನ ಅಕಾಡೆಮಿಯು ಕೊಡಮಾಡುವ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ನೀಡಿ ಮಾತನಾಡಿದ ಅವರು, ‘ಬೆಂಗಳೂರು ಕೇಂದ್ರಿತ ಕಾರ್ಯಕ್ರಮ ಗಳನ್ನು ಬದಲಾಯಿಸಿ, ರಾಜ್ಯದ ಬೇರೆಡೆ ನಡೆಸಲಾಗುತ್ತಿದೆ. ಮುಂದಿನ ವಾರ ಕೋಲಾರದಲ್ಲಿ ಜಾನಪದ ಅಕಾಡೆಮಿಯ ಕಾರ್ಯಕ್ರಮ ನಡೆಯ ಲಿದೆ. ಕಾರ್ಕಳ ಉತ್ಸವದ ಮೂಲಕ ಕಾರ್ಕಳದ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿತ್ತು. ಪಾರ್ತಿಸುಬ್ಬ ಪ್ರಶಸ್ತಿಯನ್ನು ಪಡೆದ ವಸಂತ ಭಾರದ್ವಾಜ್ ಅವರು ಕಾರ್ಕಳದವರು ಎನ್ನುವ ಕಾರಣಕ್ಕೆ ಹಿರಿಮೆ ಮತ್ತಷ್ಟು ಜಾಸ್ತಿಯಾಗಿದೆ’ ಎಂದರು.

‘ಯಕ್ಷಗಾನವು ಪ್ರಶಸ್ತಿಯಿಂದ ಬೆಳೆಯುವುದಕ್ಕಿಂತ ಜನರ ನಿರಂತರ ಭಾಗವಹಿಸುವಿಕೆ, ಜನರ ಪ್ರೀತಿ, ಆರಾಧನೆಗಳಿಂದ ಬೆಳೆದುಕೊಂಡು ಬಂದಿದೆ. ಆದರೆ, ಇದನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕಾಗಿದೆ. ಯಕ್ಷಗಾನ ಮತ್ತು ನಾಟಕ ಎರಡೂ ಜೊತೆಯಾಗಿ ಬೆಳೆಯಬೇಕು. ಯುವಕರನ್ನು ಅದರಲ್ಲಿ ತೊಡಗಿಸಬೇಕು ಎಂಬ ಕಲ್ಪನೆಯಿಂದ ಮೂರು ಜಿಲ್ಲೆಗಳಿಗೆ ಸಂಬಂಧಿಸಿ ಕಾರ್ಕಳದಲ್ಲಿ ಯಕ್ಷರಂಗಾಯಣಕ್ಕೆ ಚಾಲನೆ ನೀಡಲಾಗಿದೆ. ಯಕ್ಷಗಾನ ಸಮ್ಮೇಳನವನ್ನು ನಡೆಸಲು ಮುಖ್ಯಮಂತ್ರಿ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿದ್ದು, ಈ ಪರಿಸರದಲ್ಲಿ ಅದನ್ನು ನಡೆಸಲಾಗುವುದು. ಮುಂದಿನ ವರ್ಷದಿಂದ ‘ದೊಡ್ಡ ಪರಮಯ್ಯ’ ಎಂಬ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿಯನ್ನು ಉತ್ತರ ಕರ್ನಾಟಕದ ಹಾಸ್ಯಗಾರ ಕುಟುಂಬಕ್ಕೆ ನೀಡಲು ಚಿಂತನೆ ನಡೆದಿದೆ’ ಎಂದರು.

ADVERTISEMENT

ಸಂಸ್ಕೃತಿ ಇಲಾಖೆಯು ಎಲ್ಲ ಅಕಾಡೆಮಿಗಳ ಮೂಲಕ ಮುಂದಿನ ದಿನಗಳಲ್ಲಿ ಹೊಸ ರೀತಿಯ ಪರಿಕಲ್ಪನೆಗಳನ್ನು ಇಟ್ಟುಕೊಂಡು ಕಾರ್ಯಕ್ರಮ ನಡೆಸಲು ಪ್ರಯತ್ನಿಸುತ್ತಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಘೋಷಣೆಯ ಮೂಲಕ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಾಗುವುದು. ಕರ್ನಾಟಕದ ಸಾಂಸ್ಕೃತಿಕ ಸಂಗತಿಗಳು ಇಡೀ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಯಾವ ರೀತಿಯ ಕೊಡುಗೆಗಳನ್ನು ನೀಡಿವೆ ಎನ್ನುವುದನ್ನು ಪರಿಚಯಿಸುವ ಅಭಿಯಾನದ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಮಕ್ಕಳಿಗೆ ಆಸಕ್ತಿ ಮೂಡಿಸಲು ಬರಹಗಾರರ ಸಮ್ಮೇಳನ ನಡೆಸಲಾಗುವುದು. ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಗೆ ಸಂಬಂಧಿಸಿ ರಾಜ್ಯದ ಎಲ್ಲ ಕಡೆ ಜಿಲ್ಲಾ ಉತ್ಸವಗಳನ್ನು ನಡೆಸಲಾಗುವುದು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಮೂಡುಬಿದಿರೆ ಜೈನ ಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಪುರಸ್ಕೃತರ ಸಾಧನೆ ದೊಡ್ಡದು. ಕಾರ್ಕಳದಂತಹ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅಭಿಮಾನ ತಂದಿದೆ’ ಎಂದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯ ಶ್ರೀನಿವಾಸ ಸಾಸ್ತಾನ ಸ್ವಾಗತಿಸಿದರು. ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯರಾದ ನವನೀತ ಶೆಟ್ಟಿ ಕದ್ರಿ, ಮಾಧವ ಭಂಡಾರಿ, ಆರತಿ ಪಟ್ರಮೆ, ರಮೇಶ್ ಬೇಗಾರ್, ದಿವಾಕರ ಹೆಗಡೆ, ಯೋಗೀಶ್ ರಾವ್ ಚಿಗುರು ಪಾದೆ, ಜಿ.ಎಸ್.ಭಟ್ಟ, ನಿರ್ಮಲಾ ಹೆಗಡೆ, ಎಂ.ದಾಮೋದರ ಶೆಟ್ಟಿ, ಮುನಿ ರೆಡ್ಡಿ ಪಿ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.

ಸದಸ್ಯ ಕೆ.ಎಂ.ಶೇಖರ್ ನಿರೂಪಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಶಿವಾನಂದ ಪೈ, ಪ್ರಾಂಶುಪಾಲ ಡಾ.ಮಂಜುನಾಥ್ ಎ. ಕೋಟ್ಯಾನ್, ಯಕ್ಷರಂಗಾಯಣ ಕಾರ್ಕಳದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಸ್.ಆರ್.ಅರುಣ ಕುಮಾರ್ ಇದ್ದರು.

ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ

ಪಾರ್ತಿಸುಬ್ಬ ಪ್ರಶಸ್ತಿಯನ್ನು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಪ್ರದಾನ ಮಾಡಲಾಯಿತು. ಗೌರವ ಪ್ರಶಸ್ತಿಗಳನ್ನು ಸತ್ಯನಾರಾಯಣ ವರದ ಹಾಸ್ಯಗಾರ, ಮುತ್ತಪ್ಪ ತನಿಯ ಪೂಜಾರಿ, ಎಸ್.ಬಿ.ನರೇಂದ್ರ ಕುಮಾರ್, ಮೂಡಲಗಿರಿಯಪ್ಪ, ಎನ್.ಟಿ.ಮೂರ್ತಾಚಾರ್ಯ ಅವರಿಗೆ ನೀಡಲಾಯಿತು.

ಹಳ್ಳಾಡಿ ಜಯರಾಮ ಶೆಟ್ಟಿ, ಗೋಪಾಲ ಗಾಣಿಗ ಅಜ್ರಿ, ಬೋಳಾರ ಸುಬ್ಬಯ್ಯ ಶೆಟ್ಟಿ, ಸೀತೂರು ಅನಂತ ಪದ್ಮನಾಭರಾವ್, ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರು, ರಾಮ ಸಾಲಿಯಾನ್ ಮಂಗಲ್ಪಾಡಿ, ಕೊಕ್ಕಡ ಈಶ್ವರ ಭಟ್, ಅಡಿಗೋಣ ಬೀರಣ್ಣ ನಾಯ್ಕ, ಭದ್ರಯ್ಯ, ಬಸವರಾಜಪ್ಪ ಅವರಿಗೆ ಯಕ್ಷಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2020ನೇ ಸಾಲಿನ ಪುಸ್ತಕ ಬಹುಮಾನ ಪಡೆದ ಡಾ.ಕೆ.ರಮಾನಂದ ಬನಾರಿ, ಡಾ.ಎಚ್.ಆರ್.ಚೇತನ ಅವರಿಗೆವಾರ್ಷಿಕ ಯಕ್ಷಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.