ADVERTISEMENT

ಯಕ್ಷಗಾನಕ್ಕಿದೆ ಸುಸಂಸ್ಕೃತಗೊಳಿಸುವ ಶಕ್ತಿ: ವಿದ್ಯಾಸಾಗರ ತೀರ್ಥರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:23 IST
Last Updated 27 ಅಕ್ಟೋಬರ್ 2024, 4:23 IST
ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಮಿತ್ರ ಯಕ್ಷಗಾನ ಮಂಡಳಿ, ಮಿತ್ರ ಕಲಾನಿಕೇತನ ಟ್ರಸ್ಟ್, ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ, ವಿಟ್ಲಜೋಶಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು 40ನೇ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಿತು.
ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಮಿತ್ರ ಯಕ್ಷಗಾನ ಮಂಡಳಿ, ಮಿತ್ರ ಕಲಾನಿಕೇತನ ಟ್ರಸ್ಟ್, ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ, ವಿಟ್ಲಜೋಶಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು 40ನೇ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಿತು.   

ಉಡುಪಿ: ಕರಾವಳಿಯ ಪ್ರಸಿದ್ಧ ಜಾನಪದ ಕಲೆಯಾಗಿರುವ ಯಕ್ಷಗಾನ ಅವಿದ್ಯಾವಂತರಿಗೂ ನೈತಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಸುಸಂಸ್ಕೃತರನ್ನಾಗಿಸುತ್ತಿದೆ ಎಂದು ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಅಭಿಪ್ರಾಯಪಟ್ಟರು.

ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಮಠದ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ ಮಿತ್ರ ಯಕ್ಷಗಾನ ಮಂಡಳಿ ಸರಳೆಬೆಟ್ಡು, ಶ್ರೀಮಿತ್ರ ಕಲಾನಿಕೇತನ ಟ್ರಸ್ಟ್ ಸರಳೆಬೆಟ್ಟು, ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ವಿಟ್ಲಜೋಶಿ ಪ್ರತಿಷ್ಠಾನ ಪರ್ಕಳದ  ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು 40ನೇ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಾಣದ ನೀತಿ ಕಥೆಗಳು ಜನರಲ್ಲಿ ನೈತಿಕತೆ ಬೆಳೆಸಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತವೆ. ಯಕ್ಷಗಾನ ಕೂಡ ದೊಡ್ಡ ಸಮಾರಾಧನೆಯಂತೆ. ಯಕ್ಷಗಾನದಲ್ಲಿ ಸಂಗೀತ, ನಾಟ್ಯ, ಹಾಡುಗಾರಿಕೆ ಸೇರಿದಂತೆ ನವರಸಗಳು ತುಂಬಿದ್ದು ಅಭಿರುಚಿಯುಳ್ಳ ಪ್ರೇಕ್ಷಕರ ಮನ ತಣಿಸುತ್ತಿದೆ. ಯಕ್ಷಗಾನಕ್ಕೆ ರಾಜಾಶ್ರಯ ಇಲ್ಲದಿರುವುದರಿಂದ ಪ್ರೇಕ್ಷಕನೇ ರಾಜನಾಗಿ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಮಿತ್ರ ಯಕ್ಷಗಾನ ಮಂಡಳಿಯ ಕಲಾ ಸೇವೆ ಅಭಿನಂದನೀಯ ಎಂದರು.

ADVERTISEMENT

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, 40 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಮಿತ್ರ ಯಕ್ಷಗಾನ ಮಂಡಳಿಯ ಕಲಾರಾಧನೆ ಮಾದರಿ. ಕಲಾರಾಧಕರ ಪ್ರೋತ್ಸಾಹದಿಂದಾಗಿ ಮಾತ್ರ ಇಂತಹ ಕಾರ್ಯ ಸಾಧ್ಯವಾಗಬಲ್ಲದು. ವಿವಿಧ ಕ್ಷೇತ್ರಗಳ ಕಲಾ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಮಂಡಳಿಯ ವತಿಯಿಂದ ಪ್ರತಿ ವರ್ಷ ಸಾಮಾಜಿಕ, ಧಾರ್ಮಿಕ, ಶಿಕ್ಷಣ, ಯಕ್ಷಗಾನ ರಂಗಗಳ ಸಾಧಕರಿಗೆ 10 ಪ್ರಶಸ್ತಿಗಳಂತೆ ಈವರೆಗೆ 150 ಕಲಾವಿದರಿಗೆ ₹ 1.80 ಲಕ್ಷ ದತ್ತಿನಿಯೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಎಚ್. ಪ್ರಕಾಶ ಶಾನುಭಾಗ್ ತಿಳಿಸಿದರು.

ಕಲಾ ವಿಮರ್ಶಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ, ಕಲಾಭಿಮಾನಿ ನರಹರಿ ಬಿ., ವಿಟ್ಲಜೋಶಿ ಪ್ರತಿಷ್ಠಾನದ ಡಾ.ಹರೀಶ್ ಜೋಶಿ, ಮಂಡಳಿಯ ಸ್ಥಾಪಕಾಧ್ಯಕ್ಷ ಉಪೇಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಬಿ., ಎಸ್.ಅನಂತ ನಾಯ್ಕ್, ಶಂಕರ ನಾಯ್ಕ್ ಇದ್ದರು. ನಂತರ ಬಾಲ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಶಸ್ತಿ ಪುರಸ್ಕೃತರು

ವಿವಿಧ ಕ್ಷೇತ್ರದ ಕಲಾ ಸಾಧಕರಾದ ರಾಮಕೃಷ್ಣ ಭಟ್ ಯಲ್ಲಾಪುರ ಕೆ.ಎಸ್.ಮಂಜುನಾಥ ಹರಿಹರ ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಸುಧೀರ್‌ರಾಜ್ ಕೆ. ನಿಟ್ಟೆ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇಂದ್ರಾಳಿ ನಿರ್ಮಲಾ ವಾಸುದೇವ ಪೈ ಗುಂಡಿಬೈಲು ಲಲಿತಾ ಸತೀಶ್ ಎನ್. ಮಣಿಪಾಲ ವಿದುಷಿ ಪಾವನಾ ಬಿ. ಆಚಾರ್ ಮಣಿಪಾಲ ಈಶ್ವರ ಮಣಿಪಾಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.