ಉಡುಪಿ: ಅಲ್‌ಖೈದಾ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ಹಿಜಾಬ್ ಪರವಾಗಿ ನೀಡಿರುವ ಹೇಳಿಕೆಯಿಂದ ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ.
ಬುಧವಾರ ನಿವಾಸದಲ್ಲಿ ಮಾತನಾಡಿದ ಅವರು, ಹಿಜಾಬ್ ವಿವಾದದ ಹಿಂದೆ ದೇಶದ್ರೋಹಿ ಸಂಘಟನೆಯ ಕೈವಾಡ ಇರುವ ಬಗ್ಗೆ ಶಂಕೆ ಇತ್ತು. ಇದೀಗ ಭಯೋತ್ಪಾದಕನ ಹೇಳಿಕೆಯಿಂದ ದೃಢವಾಗಿದೆ. ಹಿಜಾಬ್ ಗೊಂದಲ ಹುಟ್ಟುಹಾಕಿದ ಉಡುಪಿಯ ಆರು ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ವಿರುದ್ಧ ಎನ್‌ಐಎ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್‌ಗೆ ಬಹುಮಾನ ಕೊಟ್ಟವರ ವಿರುದ್ಧವೂ ಎನ್‌ಐಎ ತನಿಖೆ ನಡೆಯಬೇಕು. ಭಯೋತ್ಪಾದನಾ ಸಂಘಟನೆಗಳ ಜತೆಗಿನ ನಂಟು ಬಹಿರಂಗವಾಗಬೇಕು ಎಂದರು.
ದಿಟ್ಟ ಸಿಎಂ, ಗೃಹಸಚಿವರು ಬೇಕು:
ರಾಜ್ಯಕ್ಕೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಅವಶ್ಯಕತೆ ಇದೆ. ಅಭಿವೃದ್ಧಿ ಜತೆಗೆ ಹಿಂದುತ್ವವನ್ನು ರಕ್ಷಿಸುವ ಹಾಗೂ ಮೀನಮೇಷ ಎಣಿಸದೆ, ಮುಹೂರ್ತ–ಘಳಿಗೆ ನೋಡದೆ ನಿರ್ಧಾರ ತೆಗೆದುಕೊಳ್ಳುವ ನಾಯಕರು ಬೇಕು ಎಂದು ಯಶ್‌ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಹಿಜಾಬ್ಹೋರಾಟಕ್ಕೆ ಸಹಕಾರ ನೀಡುತ್ತಿರುವ ಎಸ್‌ಡಿಪಿಐ, ಪಿಎಫ್‌ಐ, ಸಿಎಫ್‌ಐ ಸಂಘಟನೆಗಳನ್ನು ಬೇರುಸಹಿತ ಕಿತ್ತೊಗೆಯಬೇಕು. ಇಲ್ಲವಾದರೆ, ದೇಶ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.