ADVERTISEMENT

ದುರಸ್ತಿಗೆ ನಗರಸಭೆ ನಿರ್ಲಕ್ಷ್ಯ; ನೃತ್ಯ ನಿಲ್ಲಿಸಿದ ಕೋಟೆಕೆರೆ ಕಾರಂಜಿ

ವಾಯುವಿಹಾರಕ್ಕೆ ಹೋಗುವವರಿಗೆ ನಿರಾಸೆ

ಸಂಧ್ಯಾ ಹೆಗಡೆ
Published 28 ಏಪ್ರಿಲ್ 2019, 20:15 IST
Last Updated 28 ಏಪ್ರಿಲ್ 2019, 20:15 IST
ಹಕ್ಕಿ–ಪಕ್ಷಿಗಳಿಗೆ ಆಶ್ರಯತಾಣವಾಗಿರುವ ಶಿರಸಿಯ ಕೋಟೆಕೆರೆ ಮಧ್ಯದಲ್ಲಿರುವ ಕಾರಂಜಿ
ಹಕ್ಕಿ–ಪಕ್ಷಿಗಳಿಗೆ ಆಶ್ರಯತಾಣವಾಗಿರುವ ಶಿರಸಿಯ ಕೋಟೆಕೆರೆ ಮಧ್ಯದಲ್ಲಿರುವ ಕಾರಂಜಿ   

ಶಿರಸಿ: ಮುಸ್ಸಂಜೆಯ ಹೊತ್ತಿಗೆ ನೂರಾರು ಜನರನ್ನು ಸೆಳೆಯುತ್ತಿದ್ದ ನಗರದ ಕೋಟೆಕೆರೆಯಲ್ಲಿರುವ ಕಾರಂಜಿ ಸ್ತಬ್ಧಗೊಂಡಿದೆ. ಕತ್ತಲೆಯಲ್ಲಿ ಬಣ್ಣದ ಬೆಳಕನ್ನು ಚಿಮ್ಮಿಸುತ್ತ ಮನರಂಜನೆ ನೀಡುತ್ತಿದ್ದ ಕಾರಂಜಿ ನರ್ತನವನ್ನು ನಿಲ್ಲಿಸಿದೆ.

ಶಿರಸಿ–ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿರುವ ಕೋಟೆಕೆರೆಗೆ ಸಂಜೆ ವೇಳೆಗೆ ನೂರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಕೆಲವರು ವಾಕಿಂಗ್ ಮಾಡಿದರೆ, ಇನ್ನು ಕೆಲವರು ಅಲ್ಲಲ್ಲಿ ಹಾಕಿರುವ ಬೆಂಚಿನ ಮೇಲೆ ಕುಳಿತು ತಂಗಾಳಿಯ ಖುಷಿ ಅನುಭವಿಸುತ್ತಾರೆ.

ಕೆರೆಯ ಸೌಂದರ್ಯ ಹೆಚ್ಚಿಸುವ ಜತೆಗೆ ಇನ್ನಷ್ಟು ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ 2014ರಲ್ಲಿ ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಶ್ರೀಕಾಂತ ತಾರೀಬಾಗಿಲು ಅವರ ವಿಶೇಷ ಆಸಕ್ತಿಯಿಂದ, ಕೋಟೆಕೆರೆಯ ಮಧ್ಯದಲ್ಲಿ ಎರಡು ಕಾರಂಜಿ ಅಳವಡಿಸಲಾಗಿತ್ತು. ₹ 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಾರಂಜಿ, ಹಿರಿಯರು, ಮಕ್ಕಳೆನ್ನದೆ ಎಲ್ಲರನ್ನೂ ತನ್ನೆಡೆಗೆ ಬರಮಾಡಿಕೊಳ್ಳುತ್ತಿತ್ತು. ಆದರೆ, ಆರು ತಿಂಗಳುಗಳಿಂದ ಈ ಕಾರಂಜಿ, ಬಣ್ಣ ಕಳಚಿಕೊಂಡು, ಕತ್ತಲೆಯಲ್ಲಿ ಲೀನವಾಗಿದೆ. ಹಾಳಾಗಿ ತಿಂಗಳುಗಳು ಕಳೆದರೂ, ಇನ್ನೂ ದುರಸ್ತಿ ಮಾಡದ ನಗರಸಭೆಯ ಅನಾದರಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ಪಂಪ್‌ನ ವೈಂಡಿಂಗ್ ಹಾಳಾಗಿದೆ. ನಗರಸಭೆಯ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಮೇಲೆ ಅನುಮತಿ ಪಡೆದು ದುರಸ್ತಿ ಪಡೆಸಲು ಯೋಚಿಸಲಾಗಿತ್ತು. ಅದಕ್ಕಾಗಿ ದುರಸ್ತಿ ಕಾರ್ಯ ವಿಳಂಬವಾಯಿತು’ ಎಂದು ನಗರಸಭೆ ಎಂಜಿನಿಯರ್ ಸೂಫಿಯಾನಾ ಪ್ರತಿಕ್ರಿಯಿಸಿದರು.

ಶಿಥಿಲಾವಸ್ಥೆಯಲ್ಲಿ ಬೇಲಿ

ಕೋಟೆಕೆರೆಯ ನಾಲ್ಕು ದಿಕ್ಕುಗಳಲ್ಲಿ ಕಬ್ಬಿಣದ ಬೇಲಿಯಿದೆ. ಈ ಕೆರೆಗೆ ಬೆಳಗಿನ ಈಜಾಟ, ವಾಯುವಿಹಾರಕ್ಕೆ ಬರುವ ಡಾಲ್ಫಿನ್ ಕ್ಲಬ್ ಸದಸ್ಯರು ಪ್ರತಿ ಭಾನುವಾರ ಇಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸುತ್ತಾರೆ.

‘ಕೆರೆಯ ಮತ್ತೊಂದು ತುದಿಯಲ್ಲಿರುವ ಬೇಲಿ ಸಂಪೂರ್ಣ ಶಿಥಿಲಗೊಂಡಿದೆ. ಕಬ್ಬಿಣದ ಸರಳುಗಳಿಗೆ ತುಕ್ಕು ಹಿಡಿದಿದೆ ಮತ್ತು ಬೇಲಿಯ ತುಂಬ ಕಾಡುಬಳ್ಳಿಗಳು ಹಬ್ಬಿಕೊಂಡಿವೆ. ಒಂದೆರಡು ಕಡೆಗಳಲ್ಲಿ ಬೇಲಿಯನ್ನು ಮುರಿಯಲಾಗಿದೆ. ರಾತ್ರಿ ವೇಳೆ ಇಲ್ಲಿಂದ ಅಕ್ರಮವಾಗಿ ಒಳಪ್ರವೇಶಿಸುವ ಸಾಧ್ಯತೆ ಇರುತ್ತದೆ. ಅಕ್ರಮ ಚಟುವಟಿಕೆಗಳು ನಡೆಯುವ ಪೂರ್ವದಲ್ಲಿ ನಗರಸಭೆ ಕ್ರಮಕೈಗೊಳ್ಳಬೇಕು. ಕೆರೆಯ ಒಂದು ಪಾರ್ಶ್ವದಲ್ಲಿ ಕೊಳಚೆ ನೀರು ಕೆರೆ ಸೇರುತ್ತದೆ. ಇದನ್ನು ತಡೆಗಟ್ಟಿ, ಜಲಮೂಲವಾಗಿರುವ ಕೆರೆಯನ್ನು ಕಾಪಾಡಬೇಕು’ ಎಂದು ಜೀವಜಲ ಕಾರ್ಯಪಡೆಯ ಸದಸ್ಯ ಶ್ರೀಕಾಂತ ಹೆಗಡೆ ಒತ್ತಾಯಿಸಿದ್ದಾರೆ.

* ಕೋಟೆಕೆರೆಯಲ್ಲಿರುವ ಎರಡೂ ಕಾರಂಜಿಗಳ ಪಂಪ್ ಹಾಳಾಗಿದ್ದು, ದುರಸ್ತಿಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು
–ಸೂಫಿಯಾನಾ,ನಗರಸಭೆ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.