ADVERTISEMENT

ನಗರದ ಎಟಿಎಂಗಳಲ್ಲಿ ‘ನೋ ಕ್ಯಾಶ್’

ಎಟಿಎಂನಿಂದ ಎಟಿಎಂಗೆ ಗ್ರಾಹಕರ ಅಲೆದಾಟ; ನಗದು ಕೊರತೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 9:15 IST
Last Updated 16 ಏಪ್ರಿಲ್ 2018, 9:15 IST
ಕಾರವಾರದ ಅಂಬೇಡ್ಕರ್ ವೃತ್ತದ ಬಳಿ ಇರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂ ಬಾಗಿಲು ಮುಚ್ಚಿರುವುದು
ಕಾರವಾರದ ಅಂಬೇಡ್ಕರ್ ವೃತ್ತದ ಬಳಿ ಇರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂ ಬಾಗಿಲು ಮುಚ್ಚಿರುವುದು   

ಕಾರವಾರ: ನಗರದ ಎಟಿಎಂಗಳಲ್ಲೆಲ್ಲ ಬ್ಯಾಂಕ್‌ನವರು ಭರಿಸಿದ ನಗದು ಕೆಲವೇ ಗಂಟೆಗಳಲ್ಲಿ ಬರಿದಾಗುತ್ತಿರುವುದು ಹಲವು ಸಂದೇಹಗಳಿಗೆ ಎಡೆ ಮಾಡಿಕೊಡುತ್ತಿದೆ. ಅವುಗಳ ಮುಂದೆ ಅಳವಡಿಸುತ್ತಿರುವ ‘ನೋ ಕ್ಯಾಶ್’, ‘ಔಟ್ ಆಫ್ ಸರ್ವಿಸ್’ ಫಲಕಗಳನ್ನು ನೋಡಿ ಗ್ರಾಹಕರು ಗೊಣಗುತ್ತಿರುವ ದೃಶ್ಯಗಳು ಇಲ್ಲಿ ಈಗ ಸಾಮಾನ್ಯ ಆದಂತಾಗಿದೆ.

ಆಸ್ಪತ್ರೆಗಳು, ದೂರದ ಊರುಗಳಿಗೆ ಪ್ರಯಾಣ, ದೈನಂದಿನ ಖರ್ಚು ವೆಚ್ಚ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಗದು ಪಡೆದುಕೊಳ್ಳುತ್ತಿದ್ದ ಗ್ರಾಹಕರು, ಒಂದು ಎಟಿಎಂನಿಂದ ಮತ್ತೊಂದು ಎಟಿಎಂ ಸುತ್ತಾಡಿದರೂ ಹಣವನ್ನು ತೆಗೆಯಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಸ್‌ಬಿಐಗೆ ಹಣವಿಲ್ಲ: ‘ನಗರದಲ್ಲಿ ವಿವಿಧ ಬ್ಯಾಂಕ್‌ಗಳ 30ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳಿವೆ. ಸುಮಾರು 27 ಬ್ಯಾಂಕ್‌ಗಳ 35ಕ್ಕೂ ಹೆಚ್ಚು ಶಾಖೆ ಇಲ್ಲಿವೆ. ಎಟಿಎಂಗಳಲ್ಲಿ ನಗದು ಭರ್ತಿಗೆ ಹೊರಗುತ್ತಿಗೆಗೆ ನೀಡಲಾಗಿದೆ. ಆ ಸಿಬ್ಬಂದಿ ನಗರದ ವಿವಿಧ ಎಟಿಎಂಗಳಿಗೆ ನಗದನ್ನು ಭರ್ತಿ ಮಾಡುತ್ತಾರೆ. ಆದರೆ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಭಾರತೀಯ ರಿಸರ್ವ್ ಬ್ಯಾಂಕ್ ಅವಶ್ಯವಿರುವಷ್ಟು ನಗದನ್ನು ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಬ್ಯಾಂಕುಗಳಲ್ಲಿ ಗ್ರಾಹಕರು ಠೇವಣಿ ಮಾಡುವ ಹಣವನ್ನೇ ಎಟಿಎಂಗಳಿಗೆ ಭರ್ತಿ ಮಾಲಾಗುತ್ತಿದೆ’ ಎನ್ನುತ್ತಾರೆ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್.

ADVERTISEMENT

ಕಾರಣವೇನು?: ‘ಭಾರತೀಯ ರಿಸರ್ವ್ ಬ್ಯಾಂಕ್ ನಗರವನ್ನು ಒಂದು ವರ್ಷದ ಹಿಂದೆ ‘ನಗದು ರಹಿತ ವ್ಯವಹಾರದ ನಗರ’ ಎಂದು ಘೋಷಿಸಿದೆ. ಹೀಗಾಗಿ ಡಿಜಿಟಲ್ ವ್ಯವಹಾರಕ್ಕೆ ಇಲ್ಲಿ ಪ್ರೋತ್ಸಾಹ ನೀಡುವಂತೆ ಅದು ಒತ್ತಾಯಿಸಿದೆ. ಇದರಿಂದಾಗಿ ಹೆಚ್ಚಿನ ನಗದನ್ನು ಪೂರೈಕೆ ಮಾಡುವುದನ್ನೂ ಅದು ನಿಲ್ಲಿಸಿದೆ’ ಎನ್ನುತ್ತಾರೆ ಅವರು.

ಚುನಾವಣೆ ಕಾರಣವಿರಬಹುದು: ‘ಬ್ಯಾಂಕ್‌ಗಳಲ್ಲಿ ಠೇವಣಿಯಾಗುವ ನಗದನ್ನು ಎಟಿಎಂಗಳಿಗೆ ಭರ್ತಿ ಮಾಡಾಗುತ್ತಿತ್ತು. ಆದರೆ ಈಗೀಗ ಠೇವಣಿ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ನಗರದ ದೊಡ್ಡ ದೊಡ್ಡ ವ್ಯಕ್ತಿಗಳು ಬ್ಯಾಂಕ್‌ಗಳಲ್ಲಿ ಮೊದಲಿನಂತೆ ಈಗೀಗ ಠೇವಣಿ ಮಾಡುತ್ತಿಲ್ಲ. ಬದಲಾಗಿ ನಗದನ್ನು ಹಿಂಪಡೆಯುತ್ತಿದ್ದಾರೆ. ಇದಕ್ಕೆ ವಿಧಾನಸಭಾ ಚುನಾವಣೆ ಕೂಡ ಕಾರಣ ಇದ್ದರೂ ಇರಬಹುದು. ಇದು ಸಾಮಾನ್ಯ ಗ್ರಾಹಕನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ’ ಎಂದು ಅನುಮಾನದ ಜತೆ ಅಸಮಧಾನ ವ್ಯಕ್ತಪಡಿಸುತ್ತಾರೆ ಅವರು.

ಅಧಿಕ ವ್ಯವಹಾರದ ಮೇಲೆ ನಿಗಾ

ಚುನಾವಣೆ ಸಮೀಪ ಇರುವುದರಿಂದ ಬ್ಯಾಂಕ್‌ಗಳಲ್ಲಿ ಅಧಿಕ ವ್ಯವಹಾರ ನಡೆಸುವವರ ಮೇಲೆ ಚುನಾವಣಾ ಆಯೋಗ ನಿಗಾ ಇಟ್ಟಿದೆ. ಆದರೆ ಇದನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸದೆ, ಯಾವಾಗಲೂ ಜಾರಿಯಲ್ಲಿ ಇರುವಂತೆ ಮಾಡಬೇಕು ಎನ್ನುತ್ತಾರೆ ವಾಸುದೇವ ಶೇಟ್. ಬ್ಯಾಂಕ್‌ಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವ್ಯವಹಾರ ನಡೆಸಿದರೆ, ಅದು ವಿಸಿಲೆನ್ಸ್ ಮೂಲಕ ಸ್ವಯಂಚಾಲಿತವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ರವಾನೆಯಾಗುತ್ತದೆ ಎಂದರು ಅವರು.

**

ಭಾನುವಾರದ ಸಂತೆಗೆ ತೆರಳಲು ಹಣದ ಅವಶ್ಯಕತೆ ಉಂಟಾಗಿ ನಗರದ 7 ಎಟಿಎಂಗಳಿಗೆ ಅಲೆದಾಡಿದೆ. ಆದರೆ ಎಲ್ಲಿಯೂ ಹಣ ಸಿಗದೆ ವಾಪಸ್ಸಾದೆ – ಗುರುಪ್ರಸಾದ, ಗ್ರಾಹಕರು.

**

ದೇವರಾಜ ನಾಯ್ಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.