ಶಿರಸಿ: `ಪಶ್ಚಿಮಘಟ್ಟದಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳು ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಪಶ್ಚಿಮಘಟ್ಟ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಜನಪರವಾಗಿದ್ದು, ಪ್ರಜಾಪ್ರಭುತ್ವ ಮಾದರಿಯಲ್ಲಿದೆ' ಎಂದು ಪಶ್ಚಿಮಘಟ್ಟ ತಜ್ಞರ ಸಮಿತಿ ಮುಖ್ಯಸ್ಥ, ಹಿರಿಯ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್ ಹೇಳಿದರು.
ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಪಶ್ಚಿಮಘಟ್ಟ ತಜ್ಞರ ಸಮಿತಿ 2011ರ ಆಗಸ್ಟ್ 30ರಂದು ವರದಿ ನೀಡಿದ್ದರೂ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೆ ಬದಿಗಿಟ್ಟಿತ್ತು. ಕೆಲ ಪರಿಸರವಾದಿಗಳು ಕೇಂದ್ರ ಮಾಹಿತಿ ಆಯೋಗಕ್ಕೆ ನೀಡಿದ ದೂರು ಆಧರಿಸಿ ಆಯೋಗದ ಆಯುಕ್ತರು ತಕ್ಷಣ ಈ ವರದಿ ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ಸರ್ಕಾರ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂಬ ಸಂದೇಶ ಜನಸಾಮಾನ್ಯರಿಗೆ ರವಾನೆಯಾಗುತ್ತದೆ ಎಂದು ವರದಿ ನೀಡಿದ್ದರು' ಎಂದರು.
`ಪಶ್ಚಿಮಘಟ್ಟ ಕುರಿತು ಸಲ್ಲಿಕೆಯಾಗಿರುವ ಇನ್ನೊಂದು ವರದಿ ಯೋಜನೆ ಅನುಷ್ಠಾನದಲ್ಲಿ ಸ್ಥಳೀಯ ಜನರ ಸಹಭಾಗಿತ್ವ ಬೇಕಾಗಿಲ್ಲ. ಸರ್ಕಾರ ನೇರವಾಗಿ ಅನುಷ್ಠಾನಗೊಳಿಸಬಹುದು ಎಂದಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದೇಶದ ಎಲ್ಲೆಲ್ಲಿ ಪರಿಸರ ಸಂರಕ್ಷಣೆಯಾಗಿದೆಯೋ ಅಲ್ಲೆಲ್ಲ ಸ್ಥಳೀಯ ಜನರ ಸಕ್ರಿಯ ಸಹಭಾಗಿತ್ವ ಇದೆ. ಪರಿಸರ ಜನರಿಂದ ರಕ್ಷಣೆಯಾಗಿದೆಯೇ ಹೊರತು ಅಧಿಕಾರಿಶಾಹಿಗಳಿಂದ ರಕ್ಷಣೆಯಾಗಿಲ್ಲ' ಎಂದು ಗಾಡ್ಗೀಳ್ ಅಭಿಪ್ರಾಯಪಟ್ಟರು.
`ಜನಸಾಮಾನ್ಯರು ಏನು ಮಾಡಲಾರರು ಎಲ್ಲವನ್ನೂ ರಾಜಕಾರಣಿಗಳೇ ಮಾಡಬೇಕು ಎಂಬ ಭಾವನೆ ರಾಜಕೀಯ ವ್ಯಕ್ತಿಗಳಿಗೆ ಇದೆ. ಆದರೆ ನಿಜವಾದ ಪರಿಸರ ಸಂರಕ್ಷರು ಜನರಾಗಿದ್ದಾರೆ.
ಕಾನೂನು ಪ್ರಕಾರ ಜನರಿಗೆ ಅಧಿಕಾರವಿದೆ. ಕಾನೂನಿನಲ್ಲಿ ಅವಕಾಶವಿರುವಂತೆ ಪ್ರಸ್ತಾಪಿತ ಸಂಗತಿಗಳು ಗ್ರಾಮಮಟ್ಟದಲ್ಲಿ ಚರ್ಚೆಯಾದ ನಂತರ ಅಂತಿಮ ನಿರ್ಣಯವಾಗಬೇಕು ಜೀವವೈವಿಧ್ಯತಾ ಕಾಯಿದೆ ಅನ್ವಯ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮಟ್ಟದಲ್ಲಿ ಜೀವವೈವಿಧ್ಯತಾ ಸಮಿತಿ ರಚಿಸಿ ಸ್ಥಳೀಯರ ಸಹಭಾಗಿತ್ವ ಪಡೆಯಬೇಕೆಂದಿದೆ. ಆದರೆ ಇದು ಅನುಷ್ಠಾನಗೊಳ್ಳುತ್ತಿಲ್ಲ. 2008ರಲ್ಲಿ ರಚನೆಯಾದ ಪರಿಶಿಷ್ಠ ಪಂಗಡ ಮತ್ತು ಇತರೇ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ ಸಹ ಸಮರ್ಪಕವಾಗಿ ಜಾರಿಯಾಗಿಲ್ಲ' ಎಂದರು.
`ದಾಂಡೇಲಿ ಪೇಪರ್‌ಮಿಲ್‌ನಿಂದಾಗಿ ಆ ಭಾಗದ ಬಿದಿರು ಸಂಗತಿ ನಾಶವಾಗುತ್ತಿದ್ದು, ಅರಣ್ಯ ಇಲಾಖೆ ಮತ್ತು ಪೇಪರ್‌ಮಿಲ್ ಇದಕ್ಕೆ ನೇರ ಕಾರಣವಾಗಿದೆ. ಆರಂಭದಲ್ಲಿ ಅರಣ್ಯ ಇಲಾಖೆ ಮತ್ತು ಪೇಪರ್‌ಮಿಲ್ ನೀಡಿದ ಅವೈಜ್ಞಾನಿಕ ವರದಿಯಿಂದ ಇಂದು ಬಿದಿರು ಕಣ್ಮರೆಯಾಗುವ ಸ್ಥಿತಿ ಎದುರಾಗಿದೆ' ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರಭಾಕರ ಭಟ್ಟ, ಕಾಲೇಜಿನ ಉಪ ಸಮಿತಿ ಅಧ್ಯಕ್ಷ ಎಂ.ಎಂ.ಹೆಗಡೆ ಬಕ್ಕಳ, ಪ್ರಾಚಾರ್ಯ ಎಂ.ಜಿ.ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.