ಶಿರಸಿ: ಭಾರತೀಯ ಶಾಸ್ತ್ರೀಯ ಕಲೆಗೆ ಮನಸೋತ ವಿದೇಶಿ ಮಹಿಳೆಯೊಬ್ಬರು ಭರತನಾಟ್ಯ ಕಲಿಕೆಗಾಗಿಯೇ ಭಾರತಕ್ಕೆ ಬಂದು ಶಿರಸಿಯಲ್ಲಿ ನೆಲೆಸಿದ್ದಾರೆ. ನಿರಂತರ ಅಭ್ಯಾಸ ನಡೆಸಿ ಭರತನಾಟ್ಯದಲ್ಲಿ ನೈಪುಣ್ಯತೆ ಸಾಧಿಸಿರುವ ಅವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್ 8)ಯಂದು ಪ್ರದರ್ಶನಕ್ಕೆ ಅಣಿಯಾಗಿದ್ದಾರೆ.
ಇಟಲಿಯ ಮಿರಿಯಾಂ ಬ್ರೆವಿಟ್ಟಿ ಆ ಮಹಿಳೆ. ಇಲ್ಲಿನ ನಟರಾಜ ನೃತ್ಯ ಶಾಲೆಯ ವಿದುಷಿ ಸೀಮಾ ಭಾಗವತ ಅವರಲ್ಲಿ ಭರತನಾಟ್ಯ ಅಭ್ಯಸಿಸುತ್ತಿರುವ ಮಿರಿಯಾಂ ಅವರು ಟಿಎಂಎಸ್ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿಯೊಂದಿಗೆ ರಂಗ ಪ್ರವೇಶ ಮಾಡಿ ತಿಲ್ಲಾನದವರೆಗೆ ಎಲ್ಲ ನೃತ್ಯ ಬಂಧಗಳನ್ನು ಆರಾಧನೆಯ ರೂಪದಲ್ಲಿ ಪ್ರದರ್ಶಿಸಲಿದ್ದಾರೆ.
ಮಿರಿಯಾಂ ಅವರಿಗೆ ಭಾರತೀಯ ಕಲೆಯ ನಂಟು ಬೆಳೆದ ಸಂದರ್ಭವೇ ಒಂದು ಸೋಜಿಗ. ಸುಮಾರು 15 ವರ್ಷಗಳ ಹಿಂದೆ ಭಾರತ ಪ್ರವಾಸಕ್ಕೆ ಬಂದಿದ್ದ ಅವರು ವಾರಾಣಸಿಯಲ್ಲಿ ಶಾಸ್ತ್ರೀಯ ಕಲೆಯ ಪ್ರದರ್ಶವೊಂದನ್ನು ವೀಕ್ಷಿಸಿದರು. ಅದು ಶಾಸ್ತ್ರೀಯ ಕಲೆಯ ಯಾವ ಪ್ರಕಾರ ಎಂಬುದು ಅವರಿಗೆ ಈಗ ಸ್ಪಷ್ಟ ನೆನಪಿಲ್ಲ. ಆದರೆ ಆ ಕಾರ್ಯಕ್ರಮ ಮಾತ್ರ ಅವರ ಮನಃಪರಿವರ್ತನೆಗೆ ಕಾರಣವಾಯಿತು.
ಅಲ್ಲಿಂದ ಗೋವಾ, ಗೋಕರ್ಣದ ಕಡೆಗೆ ಪ್ರವಾಸ ಬೆಳೆಸಿದ ಅವರು ಗೋಕರ್ಣದಲ್ಲಿ ಭರತನಾಟ್ಯ ಶಾಲೆಯೊಂದನ್ನು ಕಂಡರು. ಅಲ್ಲಿ ಹೆಸರು ನೋಂದಾಯಿಸಿದ ಮಿರಿಯಾಂ 2 ವರ್ಷ ಭರತನಾಟ್ಯ ಕಲಿತರು. ಮುಂದೆ ಶಿರಸಿಯ ನಟರಾಜ ನೃತ್ಯ ಶಾಲೆಗೆ ಸೇರಿದ ಅವರು 5 ವರ್ಷಗಳಿಂದ ಭರತನಾಟ್ಯದ ಬಂಧಗಳನ್ನು ಅಭ್ಯಾಸ ಮಾಡುತ್ತಿದ್ದಾರೆ.
‘ಭಾರತೀಯ ಸಂಪ್ರದಾಯ, ಆಚರಣೆ ತಿಳಿದಿರುವ ಇಲ್ಲಿನ ಮಕ್ಕಳಿಗೆ ಭರತನಾಟ್ಯ ಕಲಿಸುವುದು ಕಷ್ಟವಲ್ಲ. ಭಾರತೀಯ ಸಂಸ್ಕೃತಿಯ ಪರಿಕಲ್ಪನೆಯೇ ಇಲ್ಲದ ವಿದೇಶಿ ಮಹಿಳೆಗೆ ಪ್ರತಿ ಪದ್ಯದ ಶಬ್ದಾರ್ಥ ತಿಳಿಸಿಕೊಟ್ಟು ಭರತನಾಟ್ಯ ಕಲಿಸುವುದು ದೊಡ್ಡ ಸವಾಲು. ಆದರೆ ಮಿರಿಯಾಂ ಅವರ ಆಸಕ್ತಿ ನನ್ನ ಶ್ರಮವನ್ನು ಕಡಿಮೆ ಮಾಡಿದೆ. ವರ್ಷದಲ್ಲಿ 6 ತಿಂಗಳು ಶಿರಸಿಯಲ್ಲಿ ಉಳಿದುಕೊಳ್ಳುವ ಅವರು ಪ್ರತಿದಿನ ಒಂದು ತಾಸು ಅಭ್ಯಾಸ ಮಾಡಿ ಭರತನಾಟ್ಯ ಕರಗತ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಸೀಮಾ ಭಾಗವತ.
‘52 ಹರೆಯದ ನನಗೆ ಹರೆಯದ ಮಕ್ಕಳೊಂದಿಗೆ ಭರತನಾಟ್ಯ ಪರೀಕ್ಷೆ ಎದುರಿಸುವ ಹುಮ್ಮಸ್ಸಿಲ್ಲ. ಆದರೆ ಭರತನಾಟ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಛಲವಿದೆ. ಭರತನಾಟ್ಯ ನನಗೆ ಆರೋಗ್ಯ, ನೆಮ್ಮದಿ ನೀಡಿದೆ. ಭಾರತೀಯ ಕಲೆಗಳು ನನ್ನನ್ನು ಅತಿಯಾಗಿ ಸೆಳೆದಿವೆ. ಆದರೆ ಭರತನಾಟ್ಯದಲ್ಲಿ ಹಾಡು, ನೃತ್ಯ, ಅಭಿನಯ ಎಲ್ಲವೂ ಇರುವ ಕಾರಣಕ್ಕಾಗಿ ನಾನು ಈ ಕಲೆಯನ್ನೇ ಆಯ್ಕೆ ಮಾಡಿಕೊಂಡೆ’ ಎಂದು ಮಿರಿಯಾಂ ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.
‘ಎರಡು ವರ್ಷಗಳ ಹಿಂದೆ ಪಾರ್ಶ್ವವಾಯು ಆದಾಗ ವೈದ್ಯರು ಯೋಗ ಅಭ್ಯಾಸ ಮಾಡುವಂತೆ ಸಲಹೆ ಮಾಡಿದ್ದರು. ನಾನು ಭರತನಾಟ್ಯದ ಅಡವು, ಮುದ್ರೆಗಳ ಬಳಕೆಯಿಂದ ಸಹಜ ಸ್ಥಿತಿಗೆ ಮರಳಿದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.