ಶಿರಸಿ: ಧರ್ಮ ಸ್ಥಾಪನೆಯ ಉದ್ದೇಶ ಕ್ಕಾಗಿ ಜನ್ಮ ತಳೆದಿರುವ ಮಠಗಳು ಸಮಾಜದಲ್ಲಿ ಆದರ್ಶ ಜೀವನ ಪದ್ಧತಿ ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ ಎಂದು ಸ್ವರ್ಣವಲ್ಲಿ ಮಠದ ಹವ್ಯಕ ಜಾಗೃತಿ ಪಡೆ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹೇಳಿದರು.
ನೆಲೆಮಾವು ಮಠದ ಇತಿಹಾಸ ಮತ್ತು ಪರಂಪರೆ ಕುರಿತು ಭಾನುವಾರ ಇಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಮಾಜ ದಲ್ಲಿ ಸಾಮರಸ್ಯ ಮೂಡಿಸುವ ಆಶಯ ದಿಂದ ಮಠಗಳು ಹುಟ್ಟಿಕೊಂಡಿದ್ದವು. ಆದರೆ ಇಂದು ಕೆಲ ಮಠಗಳು ಮೂಲ ಉದ್ದೇಶ ಮರೆತು ಜಾತಿವಾದದ ಕೇಂದ್ರಗಳಾಗುತ್ತಿವೆ ಎಂದರು.
ಯುವ ಪೀಳಿಗೆಯಲ್ಲಿ ಮಠಗಳ ಇತಿಹಾಸದ ಬಗ್ಗೆ ತಿಳಿವಳಿಕೆ ಪಡೆಯುವ ಆಸಕ್ತಿ ಇಲ್ಲವಾಗಿದೆ. ಹಣ ಗಳಿಕೆಯ ಹಿಂದೆ ಓಡುತ್ತಿರುವ ಯುವ ಸಮು ದಾಯಕ್ಕೆ ಪಾಲಕ ವರ್ಗ ಮಠಗಳ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ನೆಲೆಮಾವು ಮಠದ ಇತಿಹಾಸದ ಕುರಿತು ಮಾತನಾಡಿದ ಇತಿಹಾಸ ತಜ್ಞ ಡಾ.ಎ.ಕೆ. ಶಾಸ್ತ್ರಿ, ಕ್ರಿ.ಶ. 1628ರ ದಾಖಲೆಯಲ್ಲಿ ನೆಲೆಮಾವು ಮಠದ ಕೃಷ್ಣಾನಂದ ಭಾರತಿ ಸ್ವಾಮೀಜಿ ಬಗ್ಗೆ ಉಲ್ಲೇಖವಿದೆ. ಮಠದ ಕುರಿತು 1875ರ ಪೂರ್ವದ ಮಾಹಿತಿ ಕೆಲವಷ್ಟೇ ಲಭ್ಯವಾಗಿದ್ದು, ನಂತರದಲ್ಲಿ ಸಾಕಷ್ಟು ವಿವರ ದೊರೆತಿವೆ ಎಂದರು.
ನೆಲೆಮಾವು ಮಠದ ಗೌರವಾಧ್ಯಕ್ಷ ಜಿ.ಎನ್.ಭಟ್ಟ ಹರಿಗಾರ ಮಾತನಾಡಿ, ಮಠದ ಜೀರ್ಣೋದ್ಧಾರ ಕಾಮಗಾರಿ ಶೇ 75ರಷ್ಟು ಮುಗಿದಿದ್ದು, 2015ರ ಹೊತ್ತಿಗೆ ನವೀಕೃತ ಮಠದ ಕಟ್ಟಡ ಉದ್ಘಾಟನೆಗೆ ಯೋಜಿಸಲಾಗಿದೆ ಎಂದರು.
ಎಸ್.ಎಂ. ಹೆಗಡೆ ಹಡಿನಬಾಳ, ಡಾ.ಗಣಪತಿ ಭಟ್ಟ ಕವಲಕ್ಕಿ, ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು, ಮುರಾರಿ ಹೆಗಡೆ, ಸಿವಿಲ್ ಗುತ್ತಿಗೆದಾರ ಶ್ಯಾಮಸುಂದರ ಭಟ್ಟ ಉಪಸ್ಥಿತರಿದ್ದರು. ಪ್ರಕಾಶ ಭಾಗವತ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.