ADVERTISEMENT

ಉತ್ತರ ಕನ್ನಡ | ಗೃಹಜ್ಯೋತಿ ಯೋಜನೆ: ಜಿಲ್ಲೆಯಲ್ಲಿ ಪ್ರತಿಶತ ಸಾಧನೆ

ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:27 IST
Last Updated 21 ಫೆಬ್ರುವರಿ 2024, 15:27 IST
   

ಕಾರವಾರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಜಿಲ್ಲೆಯಲ್ಲಿ ಪ್ರತಿಶತ ಸಾಧನೆಯಾಗಿದೆ ಎಂದು ಹೆಸ್ಕಾಂ ಇಲಾಖೆ ನೀಡಿದ ಅಂಕಿ–ಅಂಶಗಳು ವಿವರಿಸಿವೆ.

ಗೃಹ ಬಳಕೆ ಉದ್ದೇಶಕ್ಕೆ ಪ್ರತಿ ಕುಟುಂಬಕ್ಕೆ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಈ ಯೋಜನೆಯಡಿ ಜಿಲ್ಲೆಯಲ್ಲಿ ಹೆಸ್ಕಾಂ ವತಿಯಿಂದ ಅರ್ಹ ಎಲ್ಲ ಕುಟುಂಬಗಳನ್ನು ನೋಂದಣಿ ಮಾಡಿ, ಉಚಿತ ವಿದ್ಯುತ್ ಸರಬರಾಜು ಮಾಡುವ ಮೂಲಕ ಈ ಸಾಧನೆ ಮಾಡಲಾಗಿದೆ’ ಎಂದು ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಎಂಜಿನಿಯರ್ ದೀಪಕ ಕಾಮತ್ ತಿಳಿಸಿದ್ದಾರೆ.

‘ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಗೃಹಬಳಕೆ ಸಂಪರ್ಕ ಸೇರಿದಂತೆ ಒಟ್ಟು 4,21,599 ವಿದ್ಯುತ್ ಸ್ಥಾವರ (ಮೀಟರ್) ಜಿಲ್ಲೆಯಲ್ಲಿವೆ. ಅವುಗಳ ಪೈಕಿ ಯೋಜನೆಗೆ ಅರ್ಹವಾಗಿಲ್ಲದ 30,490 ಮತ್ತು ವಿವಿಧ ಕಾರಣಗಳಿಂದ ನೋಂದಣಿ ತಿರಸ್ಕೃತಗೊಂಡ 14,690 ಫಲಾನುಭವಿಗಳಿದ್ದರು. ಅವುಗಳನ್ನು ಹೊರತುಪಡಿಸಿ ಉಳಿದ 3,76,419 ಕುಟುಂಬಗಳಿಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಜಿಲ್ಲೆಯ ಶಿರಸಿ ವಿಭಾಗದಲ್ಲಿ 1,23,427, ದಾಂಡೇಲಿ ವಿಭಾಗದಲ್ಲಿ 55,077, ಕಾರವಾರ ವಿಭಾಗದಲ್ಲಿ 31,801, ಹೊನ್ನಾವರ ವಿಭಾಗದಲ್ಲಿ 1,19,600 ಅರ್ಹ ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ನೊಂದಣಿ ಮಾಡಲಾಗಿದೆ’ ಎಂದು ವಿವರಿಸಿದ್ದಾರೆ.

‘ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಹೆಸ್ಕಾಂ ನಿಂದ ₹100 ಕೋಟಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದೆ. ಶಿರಸಿ ವಿಭಾಗದಲ್ಲಿ ₹27.66 ಕೋಟಿ, ದಾಂಡೇಲಿ ವಿಭಾಗದಲ್ಲಿ ₹11.45 ಕೋಟಿ, ಕಾರವಾರ ವಿಭಾಗದಲ್ಲಿ ₹23.45 ಕೋಟಿ ಹಾಗೂ ಹೊನ್ನಾವರ ವಿಭಾಗದಲ್ಲಿ ₹37.75 ಕೋಟಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.