ADVERTISEMENT

1978ರ ಪೂರ್ವ ಅತಿಕ್ರಮಣ ಪ್ರಕರಣ: ರಾಜ್ಯ ಸರ್ಕಾರಕ್ಕೆ ಪ್ರಾಯೋಗಿಕ ವರದಿ ಸಲ್ಲಿಕೆ

1978ಕ್ಕೆ ಮುಂಚಿನ ಅತಿಕ್ರಮಣ ಪ್ರಕರಣ: ಹಕ್ಕುಪತ್ರ ಒದಗಿಸುವ ಯತ್ನ

ರಾಜೇಂದ್ರ ಹೆಗಡೆ
Published 16 ಅಕ್ಟೋಬರ್ 2024, 5:27 IST
Last Updated 16 ಅಕ್ಟೋಬರ್ 2024, 5:27 IST
1978ರ ಪೂರ್ವ ಅತಿಕ್ರಮಿತ ಅರಣ್ಯ ಪ್ರದೇಶ (ಸಾಂದರ್ಭಿಕ) 
1978ರ ಪೂರ್ವ ಅತಿಕ್ರಮಿತ ಅರಣ್ಯ ಪ್ರದೇಶ (ಸಾಂದರ್ಭಿಕ)    

ಶಿರಸಿ: 1978ರ ಪೂರ್ವ ಅರಣ್ಯ ಭೂಮಿ ಅತಿಕ್ರಮಣ ಮಾಡಿದ ಸಾವಿರಾರು ಪ್ರಕರಣಗಳಲ್ಲಿ ಹಕ್ಕುಪತ್ರ ಒದಗಿಸುವ ಸಂಬಂಧ ಜಿಲ್ಲೆಯಿಂದ ಪ್ರಾಯೋಗಿಕವಾಗಿ ಒಂದು ಪ್ರಕರಣದ ವರದಿಯನ್ನು ಮಾತ್ರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 2,495 ಕುಟುಂಬಗಳು 1978 ಏಪ್ರಿಲ್‌ 27ರ ಪೂರ್ವ ಅಂದಾಜು 3,200 ಎಕರೆಗೂ ಹೆಚ್ಚು ಅತಿಕ್ರಮಣ ಮಾಡಿ ಜೀವನ ಸಾಗಿಸುತ್ತಿವೆ. ಈ ಭೂಮಿಯ ಸಕ್ರಮಕ್ಕೆ ಕೇಂದ್ರ ಸರ್ಕಾರವು 1995ರಲ್ಲಿ ಮಂಜೂರಾತಿ ಆದೇಶ ನೀಡಿತ್ತು. ಶಿರಸಿ ತಾಲ್ಲೂಕಿನಲ್ಲಿ 715, ಸಿದ್ದಾಪುರ 458, ಅಂಕೋಲಾ 196, ಹೊನ್ನಾವರ 185, ಮುಂಡಗೋಡ 175, ಯಲ್ಲಾಪುರ 170, ಹಳಿಯಾಳ 157, ಜೋಯಿಡಾ 130, ಕಾರವಾರ 124, ಭಟ್ಕಳ 99, ಕುಮಟಾ 86 ಕುಟುಂಬಗಳು 1978ರ ಪೂರ್ವ ಅತಿಕ್ರಮಣದಾರ ಪಟ್ಟಿಯಲ್ಲಿದ್ದು, ಮಂಜೂರಾತಿಗೆ ಅನುಮೋದನೆ ಕೂಡ ದೊರಕಿದೆ.

ಅರಣ್ಯ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ 1978ರ ಪೂರ್ವ ಅರಣ್ಯ ಭೂಮಿ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ, ಈವರೆಗೆ ಸಂಪೂರ್ಣ ಯಶಸ್ಸು ಕಂಡಿಲ್ಲ.

ADVERTISEMENT

‘ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಿಂದ 1,600 ಪ್ರಕರಣಗಳು ಅನುಮೋದನೆ ಆಗಿವೆ. ಉಳಿದ 900 ಪ್ರಕರಣಗಳು ಅನುಮೋದನೆ ಹಂತದಲ್ಲಿವೆ. ಹಕ್ಕುಪತ್ರ ಲಭಿಸುವ ಹಂತದವರೆಗೆ ಇಲಾಖೆ ಸಿದ್ಧಪಡಿಸಿರುವ ವರದಿ ಸಮರ್ಪಕವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಸದ್ಯ ಒಂದು ಪ್ರಕರಣದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

‘1978ರ ಪೂರ್ವ ಅತಿಕ್ರಮಣ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಕಳುಹಿಸಿರುವ ವರದಿ ರಾಜ್ಯ ಸರ್ಕಾರದಲ್ಲಿ ಮಾನ್ಯವಾದರೆ 1,599 ಪ್ರಕರಣಗಳ ವರದಿಯನ್ನು ಒಮ್ಮೆಲೇ ಸಲ್ಲಿಸಲಾಗುವುದು. ಇದರ ಜತೆ ಅನುಮೋದನೆಗೆ ಬಾಕಿ ಇರುವ 900 ಪ್ರಕರಣಗಳ ವರದಿಯನ್ನು ಶೀಘ್ರದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೃಷಿ ಕೂಲಿ, ಭೂರಹಿತ ಕೃಷಿ ಕಾರ್ಮಿಕರು ಮತ್ತು ಚಿಕ್ಕ ಹಿಡುವಳಿದಾರ ಅರಣ್ಯ ಸಾಗುವಳಿದಾರರಿದ್ದಾರೆ. ಇವರಿಗೆ ಜಮೀನುಗಳ ಹಕ್ಕುಪತ್ರ ಪಹಣಿ ಪತ್ರಿಕೆಯಲ್ಲಿ ನಮೂದಾಗದ ಕಾರಣ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂಬುದಾಗಿ ಅರಣ್ಯ ಅತಿಕ್ರಮಣದಾರರು ದೂರುತ್ತಾರೆ.

ಪ್ರಾಯೋಗಿಕವಾಗಿ ಒಂದು ಪ್ರಕರಣದ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಏನಾದರೂ ಲೋಪದೋಷ ಕಂಡು ಬಂದರೆ ಪರಾಮರ್ಶಿಸಿ ಸರ್ಕಾರ ಮುಂದಿನ ನಿರ್ಣಯ ಕೈಗೊಳ್ಳುತ್ತದೆ.
ಕೆ.ವಿ.ವಸಂತ ರೆಡ್ಡಿ, ಕೆನರಾ ಅರಣ್ಯ ವೃತ್ತದ ಸಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.