ದಾಂಡೇಲಿ: ಮಕರ ಸಂಕ್ರಾಂತಿ ಅಂಗವಾಗಿ ಕಾಳಿ ನದಿಯಲ್ಲಿ ಸೋಮವಾರ ಭಕ್ತಿಯಿಂದ ಗಂಗಾ ಪೂಜೆ ನೇರವೇರಿಸಿ, ಭಕ್ತರು ಪುಣ್ಯ ಸ್ನಾನ ಮಾಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ನಗರದ ಸಮೀಪ ಮೌಳಂಗಿ ಇಕೋ ಪಾರ್ಕ್‌ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಳಿಗ್ಗೆಯಿಂದ ಜಮಾಯಿಸಿ ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ , ಭಕ್ತಿ ಭಾವದಿಂದ ಗಂಗಾ ಪೂಜೆಗೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಕಾಳಿ ನದಿಗೆ ನೈವೇದ್ಯ ಮಾಡಿ ಕುಟುಂಬ ಸಮೇತ ಊಟ ಸವಿದರು.
ನಗರ ಸಮೀಪದ ಈಶ್ವರ ದೇವಸ್ಥಾನ, ಮೃತ್ಯುಂಜಯ ಮಠ, ಹಳೆ ದಾಂಡೇಲಿಯ ಬೈಲಪಾರು ಸೇತುವೆ ಹತ್ತಿರವೂ ನೂರಾರು ಸಂಖ್ಯೆಯಲ್ಲಿ ಭಕ್ತರು ನದಿ ಸ್ನಾನ ಮಾಡಿದರು.
ಬೆಳಗಾವಿ, ಧಾರವಾಡ, ಹಳಿಯಾಳ,ಯಲ್ಲಾಪುರ, ಗದಗ , ಹುಬ್ಬಳ್ಳಿ ಮುಂತಾದ ಊರುಗಳಿಂದ ನದಿ ಸ್ನಾನ ಮಾಡಲು ಕುಟುಂಬ ಸಮೇತರಾಗಿ ದಾಂಡೇಲಿಯ ಕಾಳಿ ಪುಣ್ಯ ಸ್ನಾನ ಮಾಡಲು ತಂಡೋಪತಂಡವಾಗಿ ಬಂದು ಸ್ನಾನ ಮಾಡಿ, ಭೋಜನದ ಸವಿ ಸವಿದು ಹಬ್ಬದ ಖುಷಿ ಪಟ್ಟರು.
ಪಾರ್ಕ್ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಊಟಕ್ಕೆ ಆಸನ ವ್ಯವಸ್ಥೆ, ಮಕ್ಕಳು ಆಟ ಆಡಲು ಆಟಿಕೆ ಇರುವುದರಿಂದ ಹಬ್ಬದ ಜೊತೆಗೆ ಮಕ್ಕಳು ಸಂತೋಷ ಪಡಬಹುದು ಎಂದು ಕೊಪ್ಪಳ ನಿವಾಸಿ ಗ್ಯಾನಪ್ಪ ಮೇಟಿ ಹೇಳಿದರು.
‘ಜನವರಿ 14 ಮತ್ತು 15 ರಂದು ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಮೌಳಂಗಿ ಇಕೋ ಪಾರ್ಕ್‌ಗೆ ಭದ್ರತೆ ದೃಷ್ಟಿಯಿಂದ ಅರಣ್ಯ ಇಲಾಖೆ 80ಕ್ಕೂ ಹೆಚ್ಚಿನ ಅರಣ್ಯ ಪಾಲಕರನ್ನು ಹಾಗೂ ಪೋಲಿಸ್ ಇಲಾಖೆ 30 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ದ್ವಿಚಕ್ರ, ಕಾರು, ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಪ್ರವಾಸಿಗರ ಸುರಕ್ಷಿತಕ್ಕಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಭಾನುವಾರ ಮೌಳಂಗಿ ಇಕೋ ಪಾರ್ಕ್‌ಗೆ ಸುಮಾರು 3,500ಕ್ಕೂ ಪ್ರವಾಸಿಗರ ಭೇಟಿ ನೀಡಿದ್ದಾರೆ. ಸೋಮವಾರ 5,000ಕ್ಕೂ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿ ನೀಡಿದ್ದಾರೆ ಎಂದು ಮೌಳಂಗಿ ಗ್ರಾಮ ಅರಣ್ಯ ಸಮಿತಿ ಅಧಿಕಾರಿಗಳು ತಿಳಿಸಿದರು.
ದಾಂಡೇಲಿ ವಲಯ ಅರಣ್ಯಾಧಿಕಾರಿ ಅಪ್ಪರಾವ ಕಲ್ಲಶಟ್ಟಿ, ಮೌಳಂಗಿ ಅರಣ್ಯ ವಲಯ ಉಪ ಅರಣ್ಯ ಅಧಿಕಾರಿ ಆನಂದ ರಾಠೋಡ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಇದ್ದು ಬಂದೋಬಸ್ತ್ ನೋಡಿಕೊಂಡರು.
ದಾಂಡೇಲಿ ಸಿಪಿಐ ಭೀಮಣ್ಣ ಸೂರಿ, ಗ್ರಾಮೀಣ ಠಾಣೆ ಪಿಎಸ್ಐ ಕೃಷ್ಣಾ ಗೌಡ ಹರಿಕೇರಿ, ನಗರ ಠಾಣಾದ ಪಿಎಸ್ಐ ಯಲ್ಲಪ್ಪ ಎಸ್ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.