ಕಾರವಾರ: ಉದ್ಯೋಗ ಭದ್ರತೆಯ ಜತೆಗೆ ಸಮಾನ ವೇತನ ಮತ್ತು ವೇತನ ಹೆಚ್ಚಳದ ಬೇಡಿಕೆಯೂ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರು (ಎಂ.ಬಿ.ಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಎಲ್.ಸಿ.ಆರ್.ಪಿ) ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಅವರಿಗೆ ಮನವಿ ಸಲ್ಲಿಸಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಲು ಬಂದಿದ್ದ ಎಂ.ಬಿ.ಕೆ ಮತ್ತು ಎಲ್.ಸಿ.ಆರ್.ಪಿ ಸದಸ್ಯರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಕೆಲ ನಿಮಿಷಗಳ ವರೆಗೆ ಕುಳಿತು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಆದರೆ, ಈ ವೇಳೆ ಯಾವ ಘೋಷಣೆ ಕೂಗದೆ, ಹಕ್ಕೊತ್ತಾಯ ಮಂಡಿಸದೆ ಮೌನವಾಗಿ ಕುಳಿತಿದ್ದರು.
ಕಚೇರಿ ಆವರಣದಲ್ಲಿ ಹತ್ತಾರು ಮಹಿಳೆಯರು ಕುಳಿತಿರುವುದನ್ನು ಗಮನಿಸಿದ ಸಿಇಒ ಅವರ ಸಮಸ್ಯೆ ಆಲಿಸಲು ಮುಂದಾದರು. ಈ ವೇಳೆ ಎಂ.ಬಿ.ಕೆ ಮತ್ತು ಎಲ್.ಸಿ.ಆರ್.ಪಿ ಸದಸ್ಯರು, ‘ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಡಿ.1ರ ವರೆಗೆ ಕೆಲಸ ಸ್ಥಗಿತಗೊಳಿಸುವಂತೆ ರಾಜ್ಯ ಘಟಕದಿಂದ ಸೂಚನೆ ಬಂದಿದೆ. ಕೆಲಸದಿಂದ ದೂರ ಉಳಿದು ಪ್ರತಿಭಟಿಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.
‘ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚನೆ, ಕರ ಸಂಗ್ರಹ ಸಮೀಕ್ಷೆ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಸೇರಿದಂತೆ ತಳಮಟ್ಟದಲ್ಲಿ ಆಡಳಿತ ವ್ಯವಸ್ಥೆಗೆ ಪೂರಕ ಕೆಲಸ ಮಾಡುತ್ತಿದ್ದೇವೆ. ಏಳು ವರ್ಷದಿಂದಲೂ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದೇವೆ. ಸ್ವಸಹಾಯ ಸಂಘಗಳ ರಚನೆ ಆಧಾರದಲ್ಲಿ ಗೌರವಧನ ನೀಡಲಾಗುತ್ತಿದೆ. ಇದರಿಂದ ತಾರತಮ್ಯ ಉಂಟಾಗುತ್ತಿದೆ. ಗೌರವಧನದ ಬದಲು ಎಲ್ಲರಿಗೂ ಏಕರೂಪದ ವೇತನ ನೀಡುವ ಜತೆಗೆ ವೇತನ ಮೊತ್ತ ಹೆಚ್ಚಿಸಬೇಕು. ಭವಿಷ್ಯನಿಧಿ, ಇಎಸ್‍ಐ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ಬೇಡಿಕೆಯ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು’ ಎಂದು ಸಿಇಒ ಭರವಸೆ ನೀಡಿದರು.
ಪ್ರಮುಖರಾದ ಭಾರತಿ ಎಸ್.ಕೆ, ವರ್ಷಾ ನಾಯ್ಕ, ಶ್ವೇತಾ ಬಾಂದೇಕರ್, ಶೋಭಾ ಮೊಗೇರ, ಅಂಕಿತಾ ಬಾಂದೇಕರ್, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.