ಕುಮಟಾ: ‘ನಾವು ಕಂಡ ಕನಸನ್ನು ಸವಾಲಾಗಿ ಎದುರಿಸುವ ಧೈರ್ಯ ತೋರುವಂಥ ವಿಭಿನ್ನ ಶೈಕ್ಷಣಿಕ ಹಾಗೂ ಔದ್ಯೋಗಿಕ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಲು ಸಮಾನ ಮನಸ್ಕರು ಕೈ ಜೋಡಿಸಬೇಕು’ ಎಂದು ಇಲ್ಲಿಯ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜು ಅಲ್ಯುಮ್ನಿ ಟ್ರಸ್ಟ್ ಅಧ್ಯಕ್ಷ ಎಚ್.ಜಿ.ವಿಜಯಕುಮಾರ ಹೇಳಿದರು.
ಭಾನುವಾರ ನಡೆದ ಟ್ರಸ್ಟ್ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಎ.ವಿ.ಕಾಲೇಜಿನ ವಿವಿಧ ಅಂಗ ಸಂಸ್ಥೆಗಳಿಗೆ ಇದುವರೆಗೆ ಬೇರೆ ಉದ್ಯಮಿ ದಾನಿಗಳ ಸಿ.ಎಸ್.ಆರ್ ನಿಧಿ ಸೇರಿ ಅಲ್ಯುಮ್ನಿ ಟ್ರಸ್ಟ್ ಅಂದಾಜು ₹2 ಕೋಟಿ ದೇಣಿಗೆ ನೀಡಿದೆ. ನಾವು ಓದಿದ ಕಾಲೇಜಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನು ಟ್ರಸ್ಟ್ ಮೂಲಕ ಮಾಡುವ ಗುರಿ ಹೊಂದಲಾಗಿದೆ’ ಎಂದರು.
ಅತಿಥಿಯಾಗಿದ್ದ ಪಟ್ಟಣದ ಕೊಂಕಣ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳಿಧರ ಪ್ರಭು ಮಾತನಾಡಿ, ‘ನೆರೆಯ ಹುಬ್ಬಳ್ಳಿ, ಧಾರವಾಡ, ಇನ್ನೊಂದೆಡೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಗಿಂತ ಹಳೆಯದಾದ ಡಾ.ಎ.ವಿ.ಬಿ ಶಿಕ್ಷಣ ಸಂಸ್ಥೆ ಏಕೆ ಇನ್ನೂ ಅದೇ ಸ್ಥಿತಿಯಲ್ಲಿದೆ ಎನ್ನುವುದರ ಬಗ್ಗೆ ಶಿಕ್ಷಣ ಪ್ರೇಮಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
‘ತಾಲ್ಲೂಕಿನ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಪ್ರತೀ ವರ್ಷ ಮೂಲ ಸೌಲಭ್ಯ, ಶಿಕ್ಷಕರನ್ನು ನೀಡುತ್ತಿರುವ ಅಲ್ಯುಮ್ನಿ ಟ್ರಸ್ಟ್ ಮಾದರಿಯಾಗುವಂಥ ಕೆಲಸಗಳನ್ನು ಮಾಡುತ್ತಿದೆ. ಇಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಿಸುವ ಬಗ್ಗೆ ಟ್ರಸ್ಟ್ ಸಮಾನ ಮನಸ್ಕರೊಂದಿಗೆ ಚಿಂತನೆ ನಡೆಸಬೇಕಿದೆ’ ಎಂದರು.
ಡಾ. ಎ.ವಿ.ಬಿ ಕಲಾ-ವಿಜ್ಞಾನ ಪದವಿ ಕಾಲೇಜು ನಿವೃತ್ತ ಪ್ರಾಧ್ಯಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಎಂ.ಡಿ.ಸುಭಾಶ್ಚಂದ್ರನ್ ಅತಿಥಿಯಾಗಿ ಪಾಲ್ಗೊಂಡಿದ್ದರು.
ಟ್ರಸ್ಟ್ ಕಾರ್ಯದರ್ಶಿ ಜ್ಯೋತಿ ಪೈ, ಟ್ರಸ್ಟಿಗಳಾದ ಅರುಣ ಪ್ರಭು, ಉಲ್ಲಾಸ ಅಬ್ಬಿಮನೆ ಇದ್ದರು. ಡಾ. ಎ.ವಿ.ಬಿ ಸಂಸ್ಥೆಯ ಎಲ್ಲ ಕಾಲೇಜುಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 151 ವಿದ್ಯಾರ್ಥಿಗಳಿಗೆ ₹ 9 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.