ಅಂಕೋಲಾ: ಅಂಕೋಲಾ ಮತ್ತು ಶಿರಸಿ ತಾಲ್ಲೂಕುಗಳ ಗಡಿ ಭಾಗದಲ್ಲಿ ಬೆಟ್ಟಗಳ ನಡುವಿನ ‘ಬಟ್ಟಲು’ ಎನಿಸಿಕೊಂಡಿರುವ ಗ್ರಾಮ ಅಚವೆ. ಇಲ್ಲಿನ ಕುಂಟಗಣಿಯು ಏ.15ರಂದು ಕಂದಾಯ ಸಚಿವ ಆರ್.ಅಶೋಕ ಅವರ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದೆ.
ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ ಹಲವು ಸಮಸ್ಯೆಗಳು ಇಲ್ಲಿವೆ. ಕಂದಾಯ ಸಚಿವರ ಕಾರ್ಯಕ್ರಮದಿಂದ ಅಭಿವೃದ್ಧಿಯ ವೇಗ ಹೆಚ್ಚುವ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.
ಅಚವೆ ಶೇ 92ರಷ್ಟು ಅರಣ್ಯ ಪ್ರದೇಶದಿಂದ ಸುತ್ತುವರಿದಿದ್ದು, ಶೇ 35ರಷ್ಟು ಅರಣ್ಯ ಅತಿಕ್ರಮಣಕಾರರು ಇದ್ದಾರೆ. ಅತಿಕ್ರಮಣ ಸಮಸ್ಯೆಯಿಂದಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಣಿಗದ್ದೆ, ಕುಂಟಗಣಿ ಮತ್ತು ಅಚವೆ ಗ್ರಾಮಗಳಿವೆ. ಸರ್ವಋತು ರಸ್ತೆ ಸಂಪರ್ಕ ಕಲ್ಪಿಸಬೇಕಿದೆ. ಇಲ್ಲಿನ ಮಾಣಿಗದ್ದೆ, ಅಸೊಳ್ಳಿ, ಕಳ್ಮನೆ, ವಾಡಗಾರ, ಹೊಸಗೇರಿಗಳಲ್ಲಿ ಮಳೆಗಾಲದ ನಂತರ ಸಂಪರ್ಕ ಕಡಿತಗೊಳ್ಳುತ್ತದೆ.
ಇಲ್ಲಿನ ಬಹುತೇಕರು ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮತ್ತು ಕೃಷಿ ಸಲಕರಣೆಗಳ ಖರೀದಿಗೆ ದೂರದ ಅಂಕೋಲಾ, ಶಿರಸಿ, ಯಲ್ಲಾಪುರಕ್ಕೇ ತೆರಳಬೇಕು. ಕೆಲವರು ರೇಷ್ಮೆ ಕೃಷಿ ಮಾಡಿ ಮಾರುಕಟ್ಟೆಯ ಸಮಸ್ಯೆಯಿಂದ ಕೈ ಸುಟ್ಟುಕೊಂಡಿದ್ದಾರೆ. ಇಲ್ಲಿನ ಮಧ್ಯವರ್ತಿ ಸ್ಥಳ ಚನ್ನಗಾರದಲ್ಲಿ ಅಡಿಕೆ, ಶೇಂಗಾ ಮತ್ತಿತರ ಕೃಷಿ ಉತ್ಪನ್ನಗಳ ಖರೀದಿಗೆ ಮಾರುಕಟ್ಟೆ ನಿರ್ಮಾಣಗೊಳ್ಳಬೇಕು ಎನ್ನುವುದು ಜನರ ಆಶಯವಾಗಿದೆ.
ಶೈಕ್ಷಣಿಕವಾಗಿ ಪಂಚಾಯಿತಿ ಮುಂದುವರಿದಿದೆ. ಉನ್ನತ ಶಿಕ್ಷಣಕ್ಕೆ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕಿದೆ. ತಾಲ್ಲೂಕಿನ ಬಿ.ಸಿ.ಎಂ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ವಿದ್ಯಾರ್ಥಿಗಳಿಗೆ ಇಲ್ಲೊಂದು ವಸತಿ ನಿಲಯ ಆರಂಭಿಸಬೇಕು. ಆಯುಷ್ ಆಸ್ಪತ್ರೆಯಲ್ಲಿ ಒಂದು ದಿನ ಮಾತ್ರ ವೈದ್ಯರು ಲಭ್ಯವಿದ್ದು, ವಾರದಲ್ಲಿ ಕನಿಷ್ಠ ನಾಲ್ಕು ದಿನ ಸೇವೆ ಸಿಗಬೇಕು ಎನ್ನುವ ಬೇಡಿಕೆಯಿದೆ.
ಅರಣ್ಯ ಪ್ರದೇಶವಾಗಿರುವುದರಿಂದ ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಮೊಬೈಲ್ ಫೋನ್ ನೆಟ್ವರ್ಕ್ ಸಮಸ್ಯೆ ಹೇಳತೀರದಾಗಿದೆ. ಪ್ರತಿ ಮಳೆಗಾಲದಲ್ಲಿ ನೆರೆ ಸಂಭವಿಸಿ, ಹೊಸಕಂಬಿ ಸೇತುವೆ ಮೇಲೆ ನೀರು ಹರಿಯುತ್ತದೆ. ಇದರಿಂದ ಅಚವೆ ಸಂಪರ್ಕ ಕಡಿತಗೊಳ್ಳುತ್ತದೆ. ಹಾಗಾಗಿ ಸೇತುವೆಯ ಎತ್ತರ ಹೆಚ್ಚಿಸಬೇಕಿದೆ.
ಪ್ರಸಿದ್ಧ ವಿಭೂತಿ ಜಲಪಾತ, ಜಿಲ್ಲೆಯ ಅತಿ ಎತ್ತರದ ಮೋತಿಗುಡ್ಡ ದೊರೆಕಟ್ಟೆ ಇದೇ ವ್ಯಾಪ್ತಿಯಲ್ಲಿವೆ. ಗಡಿಭಾಗದಲ್ಲಿ ಸುಪ್ರಸಿದ್ಧ ಯಾಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಸ್ಥಳೀಯವಾಗಿ ಉದ್ಯೋಗ ಮತ್ತು ಆದಾಯ ಸೃಷ್ಟಿಯ ಯೋಜನೆಗಳು ಬರಬೇಕಿವೆ.
ವಿಭೂತಿ ಜಲಪಾತದಲ್ಲಿ ಮೆಟ್ಟಿಲುಗಳು, ವೀಕ್ಷಣಾ ಸ್ಥಳ ಆಗಬೇಕಿದೆ. ಜಲಪಾತದ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿಯಿಂದ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ವಾಹನ ಶುಲ್ಕ ಮತ್ತು ಇತರ ಕರಗಳನ್ನು ವಸೂಲಿ ಮಾಡಿ ಅಭಿವೃದ್ಧಿಪಡಿಸಲು ಸಹಕಾರವಾಗುತ್ತದೆ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಮೋತಿಗುಡ್ಡದಲ್ಲಿ ಶಾಸಕಿ ರೂಪಾಲಿ ನಾಯ್ಕ ಸಹಕಾರದಿಂದ ಹೊಸ್ತೋಟ ಮಂಜುನಾಥ ಭಾಗವತ ಪುತ್ಥಳಿ ಮತ್ತು ಅಶ್ವತ್ಥಧಾಮ ನಿರ್ಮಾಣವಾಗಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ.
_______
ಅಚವೆ ಗ್ರಾ.ಪಂ: ಅಂಕಿ ಸಂಖ್ಯೆ
ಒಟ್ಟು ಜನಸಂಖ್ಯೆ; 3,000
ಕುಟುಂಬಗಳು; 778
ಗ್ರಾಮಗಳು: 3
ಮಜಿರೆಗಳು; 9
ಶಾಲೆಗಳು; 14
ಅಂಗನವಾಡಿ; 7
ಕೃಷಿ ಭೂಮಿ; ಶೇ 65
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.