ಮುಂಡಗೋಡ: ತಾಲ್ಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚಾಲಯಗಳ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಲಕಿಯರ ವಸತಿ ನಿಲಯದ ಶೌಚಾಲಯಗಳಿಗೆ ಹೆಚ್ಚುವರಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ತಹಶೀಲ್ದಾರ್ ಶಂಕರ ಗೌಡಿ ಹೇಳಿದರು.
ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಮೂಲ ಸೌಲಭ್ಯ ಪರಿಶೀಲಿಸಿ, ನಂತರ ಮಾತನಾಡಿದ ಅವರು, ಶೌಚಾಲಯದ ಅವ್ಯವಸ್ಥೆ ಕುರಿತು ವ್ಯಾಪಕ ದೂರುಗಳು ಕೇಳಿಬಂದಿದ್ದವು. ಸಮರ್ಪಕವಾಗಿ ಊಟ, ಉಪಾಹಾರ ನೀಡದ ಬಗ್ಗೆಯೂ ಗಂಭೀರ ಆರೋಪಗಳು ಕೇಳಿಬಂದಿದ್ದರಿಂದ ಶಾಸಕ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಭೇಟಿ ನೀಡಿ ಸಮಸ್ಯೆ ಆಲಿಸಲಾಗಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಹೆಬ್ಬಾರ, ಈ ರೀತಿ ಪುನರಾವರ್ತನೆ ಆದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರಾಚಾರ್ಯ ಸಹಿತ ವಾರ್ಡನ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು.
ವಾರಕ್ಕೊಮ್ಮೆ ವಸತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ತಿಳಿಯುವಂತೆ ಶಾಸಕ ಹೆಬ್ಬಾರ ಅವರು ತಹಶೀಲ್ದಾರ್‌ರಿಗೆ ಸೂಚಿಸಿದರು.
ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಬಾಲಕರ ವಸತಿ ನಿಲಯದ ಶೌಚಾಲಯಗಳಿಗೆ ಹೆಚ್ಚುವರಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಗಿದೆ. ಅಡುಗೆ ಸಿಬ್ಬಂದಿ ಹಾಗೂ ಊಟದ ಬಗೆಗಿನ ಸಮಸ್ಯೆಗಳನ್ನು ಸದ್ಯಕ್ಕೆ ಪರಿಹರಿಸಲಾಗಿದೆ. ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ, ವಸತಿ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಶಂಕರ ಗೌಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.